ಶಾಸ್ತ್ರೀಯ ಭಾಷೆಯಾಗುವ ಅರ್ಹತೆ ತುಳುವಿಗಿದೆ

  • ಬಿ.ತಮ್ಮಯ್ಯ
  • www.bantwalnews.com
  • ಅಂಕಣ: ನಮ್ಮ ಭಾಷೆ

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಲೇಖಕ ಬಿ.ತಮ್ಮಯ್ಯ ಅವರು ತುಳು ಲಿಪಿಯನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವುದು.

ತುಳುವರು ತಮಿಳುನಾಡಿನಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಎಲ್ಲೆಡೆಎ ಸೈನಿಕರಾಗಿದ್ದರೆಂದು ಸಂಘ ಸಾಹಿತ್ಯದಲ್ಲಿ ವಿವರಿಸಲಾಗಿದೆ. ತುಳುವರು ಸೈನಿಕರಾಗಿ, ರಾಜರ ವಿಶ್ವಾಸಿ ಬೆಂಗಾವಲಿಗರ ಪಡೆಯವರಾಗಿ, ಸೇನಾ ದಂಡನಾಯಕರಾಗಿ ಆಯಕಟ್ಟಿನ ಸ್ಥಾನದಲ್ಲಿ ಅಧಿಕಾರಿಗಳಾಗಿ ಹೆಸರು ಪಡೆದಿದ್ದರು. ಹೊಯ್ಸಳ, ಕಾಕತೇಯರ ಸೇನೆಗಳಲಲೂ ತುಳುವರಿದ್ದ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ.

ವಿಜಯನಗರ ಸ್ಥಾಪನೆ ಮೊದಲು ಕಂಪಿಲದುರ್ಗದ ಕಂಪಿಲ ಮತ್ತು ಅವನ ಮಗ ಕುಮಾರರಾಮನ ಸೇನೆಯಲ್ಲಿ ತುಳುವರಿದ್ದರು. ದೇಶಿರಾಜರ ವಿದೇಶಿರಾಜರ ಸೈನ್ಯ ಬಗ್ಗು ಬಡಿಯುವಲ್ಲಿ ತುಳುವರ ಪಾತ್ರ ಮಹತ್ತರ ಎಂದು ಕುಮಾರರಾಮ ಚರಿತ್ರೆ ಹೇಳುತ್ತದೆ.

ಯುದ್ಧ ಕೌಶಲ್ಯವಲ್ಲದೆ ಬೇಸಾಯ ಪದ್ಧತಿಯಲ್ಲೂ ತುಳುವರು ಜ್ಞಾನವಂತರು. ತಮಿಳುನಾಡಿನವರು ಗ್ರೀಕ್ ನವರು ತುಳುವರ ಬೇಸಾಯ ಪದ್ಧತಿಯನ್ನು ಅನುಸರಿಸಿದರು. ಗ್ರೀಕಿನ ಕರ್ಜೂರ ಮರದ ಕಟ್ಟೆ ತುಳುವರ ತೆಂಗಿನ ಮರದ ಕಟ್ಟೆಯನ್ನ ಹೋಲುತ್ತದೆ. ಎತ್ತುಗಳನ್ನು ಕಟ್ಟಿ ನೀರೆಳೆಯುವ ಪಣೆಯೂ ಗ್ರೀಕ್ ನಲ್ಲಿದೆ. ಕ್ರಿ.ಶ.7ನೇ ಶತಮಾನಕ್ಕೆ ತಮಿಳುನಾಡಿನಲ್ಲಿ ತುಳು ಬೇಸಾಯಕಾರರು ತುಳುವೆಲ್ಲಳರೆಂಬ ಭೂಮಾಲೀಕರಾಗಿದ್ದರು ಎಂದು ಚೋಳ ಇತಿಹಾಸ ಹೇಳುತ್ತದೆ. ಕ್ರಿ.ಪೂರ್ವದಿಂದಲೂ ತುಳುನಾಡು ಗ್ರೀಕ್, ರೋಮ್, ಚೀನ,  ಅರೇಬಿಯಾ, ಮೆಸಪಟಮಿಯಾ ಇತ್ಯಾದಿ ದೇಶಗಳೊಂದಿಗೆ ಅಕ್ಕಿ, ಸಂಬಾರ ಜೀನಸು ಕರಿಮೆಣಸು, ಲವಂಗ, ದಾಲ್ಚೀನಿ, ಅರಸಿನ, ಚಂದನ , ನವಿಲು, ಹತ್ತಿಬಟ್ಟೆ ಮೊದಲಾದ ವಸ್ತುಗಳ ಸಮುದ್ರ ವ್ಯಾಪಾರ ನಡೆಯುತ್ತಿತ್ತು.

ಅರೇಬಿಯಾದ ಮಸ್ಕತ್ತಿಗೆ ರಫ್ತಾಗುವ ಅಕ್ಕಿಯನ್ನು ಇಂದಿಗೂ ಮಸ್ಕತ್ತು ಅಕ್ಕಿ ಎಂದು ಕರೆಯುತ್ತಾರೆ. ವ್ಯಾಪಾರದೊಂದಿಗೆ ಧಾರ್ಮಿಕ, ಸಾಂಸ್ಕೃತಿಕ ಸಾಮಾಜಿಕ, ಕೃಷಿಗಾರಿಕೆ, ವಿನಿಮಯ ಸಹಜವಾಗಿರುತ್ತಿತ್ತು. ತುಳುನಾಡ ಹತ್ತಿಬಟ್ಟೆ ಗ್ರೀಕ್ ಮಮ್ಮಿಗಳಲ್ಲಿ ಕಂಡುಬಂದಿದೆ. ಭಾರತೀಯ ಶಿಲ್ಪಗಳ ತದ್ರೂಪದ ನಂದಿಕೇಶ್ವರ ನಾಗನ ಪ್ರತಿಮೆಗಳು ಗ್ರೀಕಿನಲ್ಲಿವೆ. ಗ್ರೀಕರು ತಮಳುನಾಡಿನ ಪಾಂಡ್ಯರ ಅರಮನೆಯಲ್ಲಿ ಸೇವೆಗಿದ್ದರು ಎಂದು ಇತಿಹಾಸ ಹೇಳುತ್ತದೆ.

ತುಳುನಾಡು ಭಾರತೀಯ ಸಂಸ್ಕೃತಿಗೂ ಅಪಾರ ಕೊಡುಗೆ ನೀಡಿದೆ. ವಿಜಯನಗರ ಭದ್ರತೆಗೆ ತುಳು ಸೈನಿಕರ ಸೇವೆ ವಿಶಿಷ್ಟವಾಗಿತ್ತು. ತುಳುವರು ವಿಜಯನಗರ ಸಿಂಹಾಸನವನ್ನೇರಿ ಅದನ್ನು ವಿಶ್ವವಿಖ್ಯಾತವಾಗಿಸಿದರು. ತುಳುನಾಡು-ತುಳುವರ ಬಗ್ಗೆ ವಿದೇಶದಲ್ಲಿ ಸಾಹಿತ್ಯ ರಚನೆಯಾಗಿದೆ. ತುಳು ಪಾಡ್ದನಗಳು ತುಳುನಾಡಿನ ಅಂದಿನ ಜನಜೀವನದ ಇತಿಹಾಸದ ಆಗರವಾಗಿದೆ. ತುಳುನಾಡು, ತುಳುವರ ವ್ಯವಹಾರ ಕಲೆ, ಧರ್ಮ, ಸಾಹಿತ್ಯ ದೇಶ, ವಿದೇಶಗಳಲ್ಲಿ ಹರಡಿದೆ. ಅನೇಕ ತುಳು ಕಾವ್ಯಗಳು ತುಳು ಲಿಪಿಯಲ್ಲಿ ಬರೆಯಲಾಗಿದೆ. ಕೆಲವನ್ನು ವೆಂಕಟರಾಜ ಪುಣಿಚಿತ್ತಾಯರು ಹೊರತಂದಿದ್ದಾರೆ. ಇನ್ನೆಷ್ಟೋ ತುಳು ಲಿಪಿ ಸಾಹಿತ್ಯ ದೇವರ ಕೋಣೆಯಲ್ಲಿ ಬಂದಿಯಾಗಿದೆ. ಅವೆಲ್ಲ ಹೊರಬರಬೇಕು. ಜ್ಞಾನಭಂಡಾರವಾಗಿರುವ ಈ ತುಳು ಲಿಪಿ ಸಾಹಿತ್ಯ, ಮಂತ್ರ, ತಂತ್ರ, ಆಯುರ್ವೇದ ಪುಸ್ತಕಗಳು ತುಳು ಲಿಪಿಯಿಂದ ಬೇರೆ ಭಾಷೆಗಗಳಿಗೆ ಅನುವಾದ ಆಗಬೇಕಾಗಿದೆ. ತುಳು ಭಾಷೆ, ಇತಿಹಾಸ, ಸಾಹಿತ್ಯ, ಸಂಸ್ಕೃತಿಯು ಅತ್ಯುತ್ತಮವಾಗಿದೆ. ಇದೆಲ್ಲ ಬಳಕೆಗೆ ಬಂದರೆ ಸಂವಿಧಾನದ ಎಂಟನೇ ಪರಿಚ್ಛೇದ ಮಾತ್ರವಲ್ಲ, ಶಾಸ್ತ್ರೀಯ ಸ್ಥಾನಮಾನ ಪಡೆಯಲೂ ತುಳು ಭಾಷೆ ಅರ್ಹ.

ಲೇಖಕರ ದೂರವಾಣಿ ಸಂಖ್ಯೆ: 9886819771

 

B Thammayya

ತುಳು ಭಾಷೆ ಮಾತಾಡೋದು ಸುಲಭ. ಲಿಪಿ ವಿಚಾರ ಬಂದಾಗ ಹಿಂದೇಟು ಹಾಕುತ್ತೇವೆ. ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಬಿ.ಸಿ.ರೋಡಿನ ಬಿ.ತಮ್ಮಯ್ಯ, ತುಳು ಲಿಪಿಯನ್ನು ಸರಳವಾಗಿಸುತ್ತಾರೆ. ಹಿಂದಿರುಗಿ ನೋಡಿದಾಗ ಸಹಿತ ಹಲವು ಪುಸ್ತಕಗಳನ್ನು ಬರೆದಿರುವ ಅವರು ಕಸಾಪ ತಾಲೂಕು ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Recent Posts