ನೃತ್ಯಾಂಗನ್ ಸಂಸ್ಥೆ ಮಂಗಳೂರಿನ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಫೆ.4, 5 ರಂದು ಸಮರ್ಪಣ್-2017’ ಎಂಬ ಏಕವ್ಯಕ್ತಿ ಭರತನಾಟ್ಯ ಕಾರ್ಯಕ್ರಮ ಆಯೋಜಿಸಿದೆ.
ಫೆ.4ರಂದು ಸಾಯಂಕಾಲ 5.30ಕ್ಕೆ ಕಲಾ ಇತಿಹಾಸ ತಜ್ಞ, ಲೇಖಕ, ಕಲಾವಿಮರ್ಶಕ ಆಶಿಶ್ ಮೋಹನ್ ಖೋಕರ್ ನೃತ್ಯ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ದ.ಕ.ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ರವಿ ಕುಮಾರ್ ಅತಿಥಿಗಳಾಗಿ ಉಪಸ್ಥಿತರಿರುವರು. 5.45ಕ್ಕೆ ಮಂಗಳೂರಿನ ಕಲಾವಿದೆ ಕಾವ್ಯಾ ಮಹೇಶ್ ಭರತನಾಟ್ಯ ಪ್ರಸ್ತುತಪಡಿಸಲಿದ್ದಾರೆ. 6.15ಕ್ಕೆ ದೆಹಲಿಯ ಕಲಾವಿದೆ ದಕ್ಷಿಣಾ ವೈದ್ಯನಾಥನ್ ಶೂರ್ಪನಖಾ ಎಂಬ ಭರತನಾಟ್ಯ ಸಾದರಪಡಿಸಲಿದ್ದಾರೆ. ಬಳಿಕ, 7.15ಕ್ಕೆ ಹೈದರಾಬಾದ್‌ನ ಕಲಾವಿದೆ ಪೂರ್ವಾಧನಶ್ರೀ ವಿಲಾಸಿನೀ ನಾಟ್ಯಂ ಎಂಬ ವಿಶೇಷ ನಾಟ್ಯ ಪ್ರಕಾರವನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದಾರೆ.
ವಿಶೇಷ ಉಪನ್ಯಾಸ:
ಸಮರ್ಪಣ್ ಅಂಗವಾಗಿ ಫೆ.5ರಂದು ಬೆಳಗ್ಗೆ 11 ಗಂಟೆಗೆ ಬಲ್ಲಾಳ್‌ಭಾಗ್‌ನ ಶ್ರೀದೇವಿ ಕಾಲೇಜು ರಸ್ತೆಯಲ್ಲಿರುವ ಸನಾತನ ನಾಟ್ಯಾಲಯ ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಕಲಾ ಇತಿಹಾಸಜ್ಞ ಆಶಿಶ್ ಮೋಹನ್ ಖೋಕರ್, ಒಂದು ಶತಮಾನದ ಭಾರತೀಯ ನೃತ್ಯಕ್ಷೇತ್ರ ಕಂಡ ವಿಶಿಷ್ಟ ಘಟ್ಟಗಳು ಮತ್ತು ಪ್ರವೃತ್ತಿಗಳು’ ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ.
ಫೆ.5ರಂದು ಸಾಯಂಕಾಲ 5.30ಕ್ಕೆ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಮಂಗಳೂರಿನ ರಮ್ಯಾ ರಾವ್ ಭರತನಾಟ್ಯ, 6 ಗಂಟೆಗೆ ಬೆಂಗಳೂರಿನ ಸ್ವೀಕೃತ್ ಬಿ.ಪಿ. ಕಥಕ್ ಮತ್ತು 7 ಗಂಟೆಗೆ ಚೆನ್ನೈಯ ಶ್ವೇತಾ ಪ್ರಚಂಡೆ ಭರತನಾಟ್ಯ ಸಾದರಪಡಿಸಲಿದ್ದಾರೆ. ಹಿಮ್ಮೇಳದಲ್ಲಿ ನಂದಿನಿ ಸಾಯಿ ಗಿರಿಧರ್ (ಹಾಡುಗಾರಿಕೆ), ಸಜಿಲಾಲ್ (ನಟುವಾಂಗ), ಕಾರ್ತಿಕೇಯನ್ (ಮೃದಂಗ) ಮತ್ತು ರಿಜೇಶ್ (ವಯಲಿನ್) ಭಾಗವಹಿಸಲಿದ್ದಾರೆ. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕರ್ನಾಟಕ ಬ್ಯಾಂಕ್ ಸಹಪ್ರಾಯೋಜಕತ್ವದಲ್ಲಿ ನೃತ್ಯಾಂಗನ್ ಸಂಸ್ಥೆ ಕಾರ್ಯಕ್ರಮ ಆಯೋಜಿಸಿದೆ ಎಂದು ಸಂಸ್ಥೆಯ ನಿರ್ದೇಶಕಿ, ಕಲಾವಿದೆ ರಾಧಿಕಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.