ಮಂಗಳೂರಿನಿಂದ ನೇರಳಕಟ್ಟೆ ಕಡೆಗೆ ರೈಲಿನಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿ. ಸದ್ಯದಲ್ಲೇ ನೇರಳಕಟ್ಟೆಯಲ್ಲಿ ಪುತ್ತೂರು ಪ್ಯಾಸೆಂಜರ್ ರೈಲಿಗೆ ನಿಲುಗಡೆ ವ್ಯವಸ್ಥೆಯನ್ನು ಮಾಡಲಾಗುವುದು.
ಹೀಗೆಂದು ಕುಕ್ಕೆಶ್ರೀ ಸುಬ್ರಹ್ಮಣ್ಯ-ಮಂಗಳೂರು ರೈಲು ಹಿತರಕ್ಷಣಾ ವೇದಿಕೆ ಪತ್ರಕ್ಕೆ ರೈಲ್ವೆ ಸಚಿವಾಲಯ ಪತ್ರ ಬರೆದಿದೆ ಎಂದು ಹೋರಾಟಗಾರ ಸುದರ್ಶನ್ ಪುತ್ತೂರು ಮಾಹಿತಿ ನೀಡಿದ್ದಾರೆ.
ನೇರಳಕಟ್ಟೆಯಲ್ಲಿ ಪುತ್ತೂರು-ಮಂಗಳೂರಿಗೆ ತೆರಳುವ ರೈಲಿಗೆ ಬೆಳಗ್ಗಿನ ಹೊತ್ತಿನಲ್ಲಿ ನಿಲುಗಡೆ ವ್ಯವಸ್ಥೆ ಇದೆ. ಆದರೆ ಸಂಜೆ ಮರಳಿ ಪುತ್ತೂರು ಕಡೆಗೆ ಹೋಗುವ ರೈಲಿಗೆ ಇಲ್ಲ. ಇದರಿಂದ ಪ್ರತಿನಿತ್ಯ ಅದೇ ಮಾರ್ಗದಲ್ಲಿ ಸಾಗುವ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಹಾಗೂ ನಿಲುಗಡೆಯಿಂದ ಸುತ್ತಮುತ್ತಲಿನ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ಪತ್ರ ಬರೆಯಲಾಗಿತ್ತು. ಇದನ್ನು ಅನುಲಕ್ಷಿಸಿ, ರೈಲ್ವೆ ಸಚಿವಾಲಯ ನಿಲುಗಡೆ ಕುರಿತು ಸಕಾರಾತ್ಮಕ ನಿಲುವು ತೆಗೆದುಕೊಂಡಿದ್ದು, ಆದೇಶ ಹೊರಡಿಸುವುದಷ್ಟೇ ಬಾಕಿ ಇದೆ.