ಬೆಲ್ಲ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ?
ಬೆಲ್ಲ ಇಲ್ಲದಿದ್ದರೆ ಅಡುಗೆಮನೆ ಪರಿಪೂರ್ಣ ಆಗೋದಿಲ್ಲ. ಅದರ ವೈದ್ಯಕೀಯ ಮಹತ್ವ ಇಲ್ಲಿದೆ.
ಬೆಲ್ಲವು ಹಲವಾರು ವಿಟಮಿನ್,ಕ್ಯಾಲ್ಸಿಯಂ,ಪೊಟ್ಯಾಸಿಯಂ,ಕಬ್ಬಿಣಾಂಶ,ಫಾಸ್ಫರಸ್ ಸೋಡಿಯಂ ಇತ್ಯಾದಿಗಳನ್ನು ಹೊಂದಿರುವ ಸತ್ವ ಭರಿತ,ರುಚಿಯಾದ,ಸಿಹಿಯಾದ ಆಹಾರವೂ ಹೌದು ಮತ್ತು ಹಲವಾರು ಸಂದರ್ಭಗಳಲ್ಲಿ ಪರಿಣಾಮಕಾರಿ ಔಷಧವೂ ಹೌದು.
- ಬಳಲಿ ಬಾಯಾರಿ ಬಂದವರಿಗೆ ಬೆಲ್ಲ ಮತ್ತು ನೀರು ಕೊಡುವುದು ನಮ್ಮಲ್ಲಿ ವಾಡಿಕೆ. ಇಲ್ಲಿ ಬೆಲ್ಲ ಕೊಡುವ ಉದ್ದೇಶ ಬಂದವರಿಗೆ ಸಿಹಿ ನೀಡಬೇಕೆಂದು ಅಷ್ಟೇ ಅಲ್ಲ.ಬೆಲ್ಲ್ಲವು ಅತ್ಯಂತ ಶೀಘ್ರವಾಗಿ ಶರೀರಕ್ಕೆ ಹೀರಿಕೊಂಡು,ದೇಹಕ್ಕೆ ಶಕ್ತಿ ,ಉಲ್ಲಾಸ ಹಾಗು ಮುದವನ್ನು ನೀಡುತ್ತದೆ.
- ಅರುಚಿ ಹಾಗು ಅಜೀರ್ಣದ ಲಕ್ಷಣವಿದ್ದಾಗ ಬೆಲ್ಲ ಮತ್ತು ಕೊತ್ತಂಬರಿ ಚೂರ್ಣದ ಮಿಶ್ರಣವನ್ನು ಸೇವಿಸಬೇಕು.ಆಗ ಹಸಿವು ಮತ್ತು ಬಾಯಿ ರುಚಿ ಸರಿಯಾಗುತ್ತದೆ.
- ಬೆಲ್ಲವು ಪಿತ್ತ ಜನಕಾಂಗದ ಕಲ್ಮಶವನ್ನು ನಿವಾರಿಸುತ್ತದೆ ಮತ್ತು ಅದಕ್ಕೆ ಬಲವನ್ನು ನೀಡುತ್ತದೆ. ಹಾಗಾಗಿ ಕಾಮಾಲೆ ರೋಗದಲ್ಲಿ ಇದು ಉತ್ತಮ ಪಥ್ಯಾಹಾರ.
- ಪ್ರತಿದಿನ ಸಣ್ಣ ತುಂಡು ಬೆಲ್ಲವನ್ನು ಸೇವಿಸಿದರೆ ರಕ್ತ ಶುದ್ಧಿಯಾಗುತ್ತದೆ ಮತ್ತು ಕಬ್ಬಿಣದ ಅಂಶ ಇರುವ ಕಾರಣ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ಆದುದರಿಂದ ಪ್ರತಿನಿತ್ಯ ಸಣ್ಣ ತುಂಡು ಬೆಲ್ಲ ಗರ್ಭಿಣಿಯರಿಗೆ ಬಹು ಪ್ರಯೋಜನಕಾರಿಯಾಗಿದೆ.
- ಬೆಲ್ಲವನ್ನು ಅಕ್ಕಿ ಹಿಟ್ಟಿನೊಂದಿಗೆ ಕಲಸಿ ದಿನಾ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ಮುಟ್ಟಿನ ರಕ್ತಸ್ರಾವ ಸರಿಯಾಗಿ ಆಗುತ್ತದೆ ಮತ್ತು ಮುಟ್ಟು ನಿಯಮಿತವಾಗಿ ಆಗುತ್ತದೆ.
- ಮುಟ್ಟಿನ ಸಮಯದ ಅಥವಾ ಮುಟ್ಟಿನ ಮೊದಲಿನ(Pre menstrual ) ಮಾನಸಿಕ ಒತ್ತಡ ಹಾಗು ಹೊಟ್ಟೆ ನೋವನ್ನು ಸಹ ಬೆಲ್ಲ ಮತ್ತು ನೀರಿನ ಸೇವನೆ ನಿವಾರಿಸುತ್ತದೆ.
- ಮುಖದ ಸೈನಸ್ ಗಳಲ್ಲಿ ಕಫ ತುಂಬಿ ತಲೆ ಭಾರ, ಮುಖಸಿಡಿತ, ಮೂಗು ಕಟ್ಟುವುದು ಇತ್ಯಾದಿ ಇದ್ದಾಗ ಬೆಲ್ಲ ಮತ್ತು ಹಸಿ ಶುಂಠಿ ಯನ್ನು ಜಜ್ಜಿ ರಸ ತೆಗೆದು ಮೂಗಿನೆ ಹೊಳ್ಳೆಗಳಿಗೆ 2 ರಿಂದ 3 ಬಿಂದುವಿನಷ್ಟು ಬೆಳಗ್ಗೆ ಖಾಲಿ ಹೊಟ್ಟೆಗೆ ಬಿಡಬೇಕು.ಹೀಗೆ 3 ರಿಂದ 5 ದಿನ ಬಿಟ್ಟಾಗ ಕಫವೆಲ್ಲ ಇಳಿದು ಹೋಗಿ ಆರಾಮ ಲಭಿಸುತ್ತದೆ.(ಮೂಗಿಗೆ ಬಿಡುವ ಮೊದಲು ಬಿಸಿ ನೀರಿನ ಆವಿ ತೆಗೆದುಕೊಂಡರೆ ಉತ್ತಮ).
- ಬೆಲ್ಲವು ಗಂಟಲು ಮತ್ತು ಶ್ವಾಸಕೋಶದ ಕಫವನ್ನು ಕರಗಿಸುವಲ್ಲಿ ಎತ್ತಿದ ಕೈ.ಇದನ್ನು ಹಾಗೆಯೇ ತಿನ್ನಬಹುದು ಅಥವಾ ಶುಂಠಿ ,ಜೀರಿಗೆ ,ಕಾಳುಮೆಣಸು ಇತ್ಯಾದಿಗಳೊಂದಿಗೆ ಸೇವಿಸಸಬಹುದು.ಇದರಿಂದ ಕೆಮ್ಮು,ದಮ್ಮು,ಶೀತಗಳು ಶೀಘ್ರವಾಗಿ ಕಡಿಮೆಯಾಗುತ್ತದೆ.
- ಬೆಲ್ಲ ಮತ್ತು ಕರಿಬೇವಿನ ಸೊಪ್ಪನ್ನು ಜಜ್ಜಿ ದಿನಾ ಬೆಳಗ್ಗೆ ತಿಂದರೆ ಹೊಟ್ಟೆಯ ಹುಳದ ತೊಂದರೆ ನಿವಾರಣೆಯಾಗುತ್ತದೆ.
- ಬೆಲ್ಲ ಮತ್ತು ರಾಗಿಯ ಮಿಶ್ರಣವು ಧಾತು ವರ್ಧಕವಾಗಿದ್ದು, ಮುಖ್ಯವಾಗಿ ಮಕ್ಕಳಿಗೆ ಪುಷ್ಟಿ ಮತ್ತು ಬಲವನ್ನು ನೀಡುತ್ತದೆ.ಇದರಿಂದ ಮಕ್ಕಳ ತೂಕ ಹೆಚ್ಚಾಗುತ್ತದೆ.
- ಬೆಲ್ಲ ಮತ್ತು ಬಾಳೆಹಣ್ಣನ್ನು ತುಪ್ಪದಲ್ಲಿ ಹುರಿದು ತಿಂದರೆ ಶರೀರದ ಬಲ ಮತ್ತು ತೂಕ ಅಧಿಕವಾಗಿ ದೇಹಕ್ಕೆ ಪುಷ್ಟಿಯನ್ನು ನೀಡುತ್ತದೆ.
- ಮಲಬದ್ಧತೆಯಿದ್ದಾಗ ಬೆಲ್ಲ ಮತ್ತು ಹುಣಸೆ ಹಣ್ಣಿನ ಮಿಶ್ರಣವನ್ನು ಸುಮಾರು 3 ರಿಂದ 5 ಗ್ರಾಂ ನಷ್ಟು ಸೇವಿಸಿದರೆ ಸರಿಯಾಗಿ ಮಲ ಶೋಧನೆಯಾಗುತ್ತದೆ .
- ಬೆಲ್ಲವನ್ನು ಕುದಿಸಿ ಆರಿಸಿದ ನೀರಿನೊಂದಿಗೆ ಸೇವಿಸಿದರೆ ಹೊಟ್ಟೆಯ ಉರಿ ಶಮನವಾಗುತ್ತದೆ.
- ಬೆಲ್ಲ ಮತ್ತು ಎಳ್ಳನ್ನು ಹಾಲಿನಲ್ಲಿ ಅರೆದು ಹಣೆಗೆ ಲೇಪ ಹಾಕಿದರೆ ಮೈಗ್ರೈನ್ ತಲೆನೋವು ಕಡಿಮೆಯಾಗುತ್ತದೆ.(ಜೊತೆಗೆ ಬೆಲ್ಲ ಹಾಕಿದ ನಿಂಬೂ ಪಾನಕ ಕುಡಿದರೆ ಇನ್ನೂ ಉತ್ತಮ).
- ಸೊಂಟ ಹಾಗು ಸಂಧುಗಳ ನೋವುಗಳಲ್ಲಿ, ಬಿಸಿಯಾದ ಬೆಲ್ಲದ ಪಾಕವನ್ನು ಬಿಂದು ಬಿಂದಾಗಿ ಹಚ್ಚಿದರೆ ನೋವು ಶೀಘ್ರವಾಗಿ ಶಮನವಾಗುತ್ತದೆ.
- ಆಗ ತಾನೇ ಮೂಡುತ್ತಿರುವ ಕುರದ ಮೇಲೆ ಬಿಸಿ ಬೆಲ್ಲದ ಪಾಕವನ್ನು ಹಚ್ಚಿದರೆ ಕುರ ಅಲ್ಲಿಗೇ ಆರಿ ಹೋಗುತ್ತದೆ ಮತ್ತು 2 ಅಥವಾ 3 ದಿನ ದಾಟಿದಲ್ಲಿ ಶೀಘ್ರವಾಗಿ ಸೋರಲು ಸಹಕಾರಿಯಾಗುತ್ತದೆ.
- ಬೆಲ್ಲವು ಮೂತ್ರ ಪ್ರವೃತ್ತಿಗೆ ಸಹಕಾರಿಯಾಗಿದೆ ಮತ್ತು ಪೊಟ್ಯಾಸಿಯಂ ಇರುವ ಕಾರಣ ದೇಹದ ತೂಕ ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.ಆದುದರಿಂದ ಬೊಜ್ಜು ಅಥವಾ ಸ್ಥೌಲ್ಯದಲ್ಲಿ ಬೆಲ್ಲದ ನಿತ್ಯ ಬಳಕೆ ಮಾಡಬಹುದಾಗಿದೆ.
- ಬೆಲ್ಲದ ಮೂತ್ರಲ ಗುಣದಿಂದಾಗಿ ಮತ್ತು ಇದರಲ್ಲಿ ಪೊಟ್ಯಾಸಿಯಂ ಹಾಗು ಸೋಡಿಯಂ ಇರುವ ಕಾರಣ ರಕ್ತದ ಒತ್ತಡವನ್ನು ಸಮತೋಲನದಲ್ಲಿ ಇಡಲು ಸಹಕಾರಿಯಾಗಿದೆ.
Dr. Ravishankar A Gಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.