ಆರಾಧನೆ

ಬಿ.ಸಿ.ರೋಡ್ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ

  • ಪ್ರೊ. ರಾಜಮಣಿ ರಾಮಕುಂಜ

ಬಿ.ಸಿ.ರೋಡ್ ನಲ್ಲಿ ನಿರ್ಮಾಣಗೊಂಡಿರುವ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ಈ ದೇವಾಲಯಕ್ಕೆ ದಾಖಲಿತ ಇತಿಹಾಸವಿಲ್ಲ. ಭಾವುಕ ಜನರ ನಂಬಿಕೆಯಂತೆ, ನಂದ ಅರಸರ ಕಾಲದಲ್ಲಿ ಸುಮಾರು ಅರ್ಧ ಎಕರೆ ಜಾಗದಲ್ಲಿ ಈ ದೇವಾಲಯ ಪ್ರಸರಿಸಿತ್ತು ಅನ್ನುವುದು ಪ್ರಚಲಿತದಲ್ಲಿರುವ ಮಾತು.

ಪೊಲೀಸ್ ಸಿಬ್ಬಂದಿ ವರ್ಗದವರಿಂದ ಆರಂಭದ ದಿನಗಳಲ್ಲಿ ಅಸ್ತಿತ್ವವನ್ನು ಪಡೆದ ಈ ದೇವಾಲಯ ಮುಂದಕ್ಕೆ ಸಾರ್ವಜನಿಕರ ಸಹಕಾರದೊಂದಿಗೆ ಬೃಹತ್ ದೇವಾಲಯವಾಗಿ ನಿರ್ಮಾಣಗೊಂಡಿತು. ಶಿವ ಸಾನ್ನಿಧ್ಯಕ್ಕೂ ಇಂಬುಕೊಡುತ್ತಿರುವ  ಈ ದೇವಾಲಯ ವಿಶೇಷವಾಗಿ ನಾಗ ಸಾನ್ನಿದ್ಧ್ಯವನ್ನೂ ಪಡೆದಿದೆ. ಗರ್ಭಗುಡಿ, ಸುತ್ತ ಪೌಳಿ ಇಲ್ಲಿನ ಪ್ರಧಾನ ವಾಸ್ತು ರಚನೆ. ತಾಮ್ರದ ಮೇಲ್ಛಾವಣಿ ಹೊಂದಿದ್ದು, ಶಿಲಾಮಯವಾದ ಮತ್ತು ಕೀರ್ತಿಮುಖವನ್ನೂ ಹೊಂದಿರುವ ಗಜಪೃಷ್ಠಾಕಾರದ ದೇವಾಲಯವಿದು.

ಪಶ್ಚಿಮಾಭಿಮುಖವಾಗಿರುವ ಈ ದೇವಾಲಯದ ನೈಋತ್ಯ ಭಾಗದಲ್ಲಿ ಗಣಪತಿಯ ಗುಡಿಯಿದೆ. ಹೊರಾಂಗಣದ ನೈಋತ್ಯ ಭಾಗದಲ್ಲಿ ನಾಗನ ಕಟ್ಟೆಯಿದೆ. ಸ್ಥಳ ದೈವವಾಗಿ ಗುಳಿಗನ ಸಾನ್ನಿಧ್ಯವಿದೆ.

ದಸರಾ ಸಂದರ್ಭದಲ್ಲಿ ನವರಾತ್ರಿ ಪೂಜೆ, ಈ ಅವಧಿಯಲ್ಲಿ ಪ್ರತಿ ದಿನ ಚಂಡಿಕಾ ಯಾಗ, ಸಾರ್ವಜನಿಕ ಅನ್ನ ಸಂತರ್ಪಣೆ, ಆಶ್ಲೇಷ ಬಲಿ ಇತ್ಯಾದಿಗಳು ನಡೆಯುತ್ತವೆ. ದಿನಾಂಕ 11.03.2009 ರಿಂದ 16.03.2009 ರವರೆಗೆ ಇಲ್ಲಿ ಬಿಂಬ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಶೇಕ ಇಲ್ಲಿ ನಡೆದಿತ್ತು.

ಈ ಕಾರಣಿಕ ಕ್ಷೇತ್ರದಲ್ಲಿ ದಿನಾಂಕ 30.01.2017ನೇ ಸೋಮವಾರ ಸೂರ್ಯೋದಯದಿಂದ, ವಾರ್ಷಿಕ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿಕ್ಕಿದೆ. ಬೆಳಿಗ್ಗೆ 7.30 ಕ್ಕೆ ಪ್ರಾರ್ಥನೆ, ಗಣಪತಿ ಹೋಮ, ಗಂಟೆ ಎಂಟರಿಂದ ನವಚಂಡಿಕಾಹೋಮ, 12 ಕ್ಕೆ ಮಹಾಪೂಜೆ, 1 ರಿಂದ ಅನ್ನ ಸಂತರ್ಪಣೆ, ಸಂಜೆ ೪ರಿಂದ 6.30 ರವರೆಗೆ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 7 ಕ್ಕೆ ನೃತ್ಯ ಬಲಿ, ಬಟ್ಟಲು ಕಾಣಿಕೆಯೊಂದಿಗೆ ಜಾತ್ರೆ ಸಂಪನ್ನಗೊಳ್ಳುತ್ತದೆ. ಜಾತ್ರಾ ಬಾಬ್ತು ದಿನಾಂಕ 31.01.2017ರಂದು ರಾತ್ರಿ ಗಂಟೆ 8 ರಿಂದ ಸ್ಥಳ ದೈವ ಗುಳಿಗನ ವರ್ಷಾವಧಿ ಕೋಲ ನಡೆಯಲಿಕ್ಕಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ