ಯಕ್ಷಮಿತ್ರರು ಕೈಕಂಬ ವತಿಯಿಂದ ಬಿ.ಸಿ.ರೋಡಿನಲ್ಲಿ ಸನ್ಮಾನ ಸಮಾರಂಭ, ಯಕ್ಷಗಾನ ಪ್ರದರ್ಶನ
www.bantwalnews.com report
ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರು ನನ್ನನ್ನು ಯಕ್ಷಗಾನಕ್ಕೆ ಕರೆತರದಿದ್ದರೆ ನಾನು ಇವನ್ನು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿರಬೇಕಾಗಿತ್ತು. ಅವರು ನನ್ನ ಸರ್ವಾಂಗೀಣ ಬೆಳವಣಿಗೆಗೆ ಕಾರಣರಾದ ಗುರುಗಳು ಎಂದು ಹಿರಿಯ ಹಾಸ್ಯ ಕಲಾವಿದ ಸೀತಾರಾಮ ಕುಮಾರ್ ಕಟೀಲು ಹೇಳಿದರು.
ಬಿ.ಸಿ.ರೋಡ್ ಕೈಕಂಬ ಯಕ್ಷಮಿತ್ರರು ಆಶ್ರಯದಲ್ಲಿ ಇಲ್ಲಿನ ರಂಗೋಲಿ ಹೋಟೆಲ್ ಹೊರಾಂಗಣದಲ್ಲಿ ಎಡನೀರು ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಬಯಲಾಟ ಹಿಡಿಂಬ-ಕೀಚಕ-ಉತ್ತರ ಪ್ರದರ್ಶನ ಸಂದರ್ಭ ನಡೆದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದ ಸಂದರ್ಭ ಭಾವುಕರಾದರು.
ಸಿದ್ಧಕಟ್ಟೆ ಅವತ್ತು ನನ್ನನ್ನು ಗುರುತಿಸದಿದ್ದರೆ ನಾನಿಂದು ಎಲ್ಲೋ ಇರುತ್ತಿದ್ದೆ. ಅವರಿಂದು ನಮ್ಮೊಂದಿಗಿಲ್ಲ ಎಂಬುದೇ ದು:ಖದ ಸಂಗತಿ ಎಂದು ಕಂಬನಿ ಮಿಡಿದರು.
ಯಕ್ಷಗಾನದಲ್ಲಿ ನಾನಿಂದು ಗುರುತಿಸಲ್ಪಡಲು ಸಹಕಲಾವಿದರೂ ಕಾರಣ. ಹಾಸ್ಯಗಾರರಾದ ನನಗೆ ಮಾತನಾಡಲು ಅವಕಾಶ ನೀಡಿ ಬೆಳೆಯಲು ಕಾರಣಕರ್ತರಾದರು ಎಂದು ಸೀತಾರಾಮ ಕುಮಾರ್ ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ಕೆ.ಮೋಹನ ರಾವ್, ಉದ್ಯಮಿ ಸತೀಶ ಭಂಡಾರಿ ಕುಳತಬೆಟ್ಟು, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ವಿಶ್ವನಾಥ ಶೆಟ್ಟಿ ಸೊರ್ನಾಡು ಉಪಸ್ಥಿತಿಯಲ್ಲಿ ಅವರನ್ನು ಸನ್ಮಾನಿಸಲಾಯಿತು.
ಯಕ್ಷಮಿತ್ರರು ಬಳಗದ ಶಂಕರ ಶೆಟ್ಟಿ, ಭುಜಂಗ ಸಾಲ್ಯಾನ್, ಸದಾಶಿವ ಕೈಕಂಬ, ದಿವಾಕರ ಶೆಟ್ಟಿ ಈ ಸಂದರ್ಭ ಉಪಸ್ಥಿತರಿದ್ದರು. ಕಿಶೋರ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ರವಿಚಂದ್ರ ಕನ್ನಡಿಕಟ್ಟೆ, ಚೈತನ್ಯ ಪದ್ಯಾಣ, ವಿನಯ ಆಚಾರ್ಯ ಕಡಬ ಹಿಮ್ಮೆಳದಲ್ಲಿ ಹಿಡಿಂಬಾ ವಿವಾಹ ಹಾಗೂ ಕೀಚಕ ಪ್ರಸಂಗ ಹಾಗೂ ಪದ್ಯಾಣ ಗಣಪತಿ ಭಟ್, ಶಂಕರನಾರಾಯಣ ಭಟ್ ಮತ್ತು ಜಯರಾಮ ಭಟ್ ಹಿಮ್ಮೇಳದಲ್ಲಿ ಉತ್ತರನ ಪೌರುಷ ಪ್ರಸಂಗ ಪ್ರದರ್ಶನ ಸೇರಿದ ನೂರಾರು ಪ್ರೇಕ್ಷಕರ ಸಮ್ಮುಖ ಕಂಡಿತು.
Pic Courtesy: Ram Naresh Manchi