ವಿಟ್ಲ

ತಲವಾರು, ಪಿಸ್ತೂಲ್ ತೋರಿಸಿ ನಿಧಿ ಎಲ್ಲಿ ಎಂದು ಕೇಳಿದರು!

  • ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಅರಸಳಿಕೆ ಎಂಬಲ್ಲಿ ನಡೆದ ಘಟನೆ
  • ಮಂಗಳವಾರ ಬೆಳಗ್ಗೆ ಮನೆಮಂದಿ ನಿದ್ರೆಯಲ್ಲಿದ ವೇಳೆ ಆಗಮಿಸಿದ ಆಗಂತುಕರು
  • ಮನೆಮಂದಿಯನ್ನು ಕಟ್ಟಿಹಾಕಿ ಭೂಮಿ ಅಗೆದು ನಿಧಿಗಾಗಿ ಶೋಧಿಸಿದರು
  • ಬಂಟ್ವಾಳನ್ಯೂಸ್ ನಲ್ಲಿದೆ ವಿವರವಾದ ವರದಿ

www.bantwalnews.com report

ಜಾಹೀರಾತು

ಬಂಟ್ವಾಳ ತಾಲೂಕಿನ ಗಡಿ ಭಾಗವಾದ ಕರೋಪಾಡಿಯ ಅರಸಳಿಕೆಯ ವಿಘ್ನರಾಜ ಭಟ್ ಎಂಬವರ ಮನೆಗೆ ಮಂಗಳವಾರ ಬೆಳಗ್ಗೆ ಸುಮಾರು 2ರಿಂದ 4 ಗಂಟೆಯ ವೇಳೆಗೆ ಸುಮಾರು 9 ರಷ್ಟಿದ್ದ ತಂಡ ನುಗ್ಗಿ ಮನೆಯವರನ್ನು ತಲವಾರು, ಪಿಸ್ತೂಲು ತೋರಿಸಿ ಬೆದರಿಸಿ ನಿಧಿ ಶೋಧ ಮಾಡಿದೆ.

ಸುಮಾರು 20 ರಿಂದ 35 ವರ್ಷದೊಳಗಿನವರಿದ್ದ ಈ ತಂಡದಲ್ಲಿ 9 ಮಂದಿ ಇದ್ದರು. ಮನೆಯಲ್ಲಿ ವಿಘ್ನರಾಜ ಭಟ್ ಮತ್ತು ಅವರ ಅಳಿಯ ಮಾತ್ರವೇ ಇದ್ದ ಸಂದರ್ಭ ಅವರಿಬ್ಬರನ್ನು ಕಟ್ಟಿ ಹಾಕಿ, ನಿಧಿ ಎಲ್ಲಿದೆ ಎಂದು ಕೇಳಿದರು. ಬಳಿಕ ಮನೆಯ ಪಕ್ಕದಲ್ಲಿ ಹೊಂಡ ಮಾಡಿ ಅಗೆದು ನಿಧಿಗಾಗಿ ಹುಡುಕಿ ಬರಿಗೈಯಲ್ಲಿ ಮರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ:

ಅರಸಳಿಕೆ ನಿವಾಸಿ ವಿಘ್ನರಾಜ ಭಟ್ (47) ಹಾಗೂ ಅವರ ಸಂಬಂಧಿ ವಿಖ್ಯಾತ್(18) ಮನೆಯಲ್ಲಿ ನಿದ್ರೆಯಲ್ಲಿದ್ದ ವೇಳೆ ಸುಮಾರು ರಾತ್ರಿ 2.30ರ ವೇಳೆ ನಾಯಿ ಬೊಗಳಿದ ಶಬ್ದ ಕೇಳಿತು. ಇಬ್ಬರೂ ಎಚ್ಚರಗೊಂಡಾಗ, ಓರ್ವ ಬಾಗಿಲು ಮುರಿದು ಒಳಗೆ ನುಗ್ಗಿದ. ಇದರಿಂದ ಭಯಭೀತರಾದ ಅವರು ಬೊಬ್ಬೆ ಹೊಡೆದಾಗ ಮತ್ತೆ ಮೂರು ನಾಲ್ಕು ಮಂದಿ ಒಳಗೆ ಬಂದರು.  ತಲವಾರು, ಪಿಸ್ತೂಲು ತೋರಿಸಿ, ಇಬ್ಬರನ್ನೂ ಮನೆಯೊಳಗೆ ಹಗ್ಗದಲ್ಲಿ ಕಟ್ಟಿ ಕೂಡಿ ಹಾಕಿದರು.

ಬಳಿಕ ಮನೆಯ ಅಂಗಳದ ಗೇಟಿನ ಪಕ್ಕದಲ್ಲಿರುವ ಭೂಮಿಯನ್ನು ಅಗೆದು ನಿಧಿಗಾಗಿ ವಿಫಲ ಯತ್ನ ನಡೆಸಿದರು.

ಎರಡು ಕಾರಿನಲ್ಲಿ ಬಂದಿದ್ದರು

ಸುಮಾರು 9ರಿಂದ 12 ಮಂದಿಯಷ್ಟಿದ್ದ ತಂಡ, ಪಿಸ್ತೂಲ್, ತಲವಾರು, ಕಬ್ಬಿಣದ ರಾಡ್ ಹಿಡಿದುಕೊಂಡು ಬಂದಿದ್ದರು. ಎರಡು ಕಾರುಗಳಲ್ಲಿ ಈ ತಂಡ ಬಂದಿತ್ತು. ಸುಮಾರು ಎರಡು ಗಂಟೆ ನಿಧಿಗಾಗಿ ಭೂಮಿ ಅಗೆದರು. ಬೆಳಗ್ಗೆ ಸುಮಾರು 4.30 ಆಗುತ್ತಿದ್ದಂತೆ ಮರಳಿದರು.

ಸಿಸಿ ಕ್ಯಾಮರಾ ಡಿವಿಆರ್ ಕದ್ದೊಯ್ದರು!

ಬರಿಗೈಯಲ್ಲಿ ಮರಳದ ಆಗಂತುಕರು, ಪೊಲೀಸರಿಗೆ ಸುಳಿವು ಸಿಗಬಾರದು ಎಂದು ಸಿಸಿ ಕ್ಯಾಮಾರದ ಡಿವಿಆರ್ ಹಾಗೂ ಎರಡು ಮೊಬೈಲ್‌ನಲ್ಲಿದ್ದ ನಾಲ್ಕು ಸಿಮ್‌ಗಳನ್ನು ಕದ್ದೊಯ್ದಿದ್ದಾರೆ. ಬಂದವರಲ್ಲಿ ಓರ್ವ, ಹಸಿರು ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿದರೆ ಕೆಲವರು ಜೀನ್ಸ್ ಪ್ಯಾಂಟ್ ಧರಿಸಿದ್ದರು. ಹಿಂದಿ, ಮಲಯಾಳಂ, ಕನ್ನಡ ಭಾಷೆ ಮಾತನಾಡುತ್ತಿದ್ದರು ಎಂದು ಭಟ್ ಪೊಲೀಸರಿಗೆ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ದ.ಕ ಜಿಲ್ಲಾ ಎಸ್.ಪಿ ಭೂಷಣ್ ರಾವ್ ಬೊರಸೆ, ಬಂಟ್ವಾಳ ಡಿವೈಎಸ್‌ಪಿ ರವೀಶ್ ಸಿ.ಆರ್, ವಿಟ್ಲ ಎಸೈ ನಾಗರಾಜ್, ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಪೊಲೀಸ್ ತಂಡ ಭೇಟಿ ನೀಡಿತು.

6 ಬಾರಿ ನಿಧಿಶೋಧ

ಅರಸಳಿಕೆಯ ಈ ಮನೆಯಲ್ಲಿ ನಿಧಿಗಾಗಿ ಶೋಧ ನಡೆಯುತ್ತಿರುವುದು ಒಂದೆರಡು ಬಾರಿಯಲ್ಲ. ಆರು ಬಾರಿ ಇಲ್ಲಿ ನಿಧಿ ಶೋಧ ನಡೆದಿತ್ತು. ಆದರೆ ಯಾರಿಗೂ ಏನೂ ಸಿಕ್ಕಿರಲಿಲ್ಲ. ಹೀಗಾಗಿ ಈ ಕುರಿತು ಮನೆಯವರು ಪೊಲೀಸರಿಗೆ ಮಾಹಿತಿ ನೀಡಿ ರಕ್ಷಣೆ ಕೋರಿದ್ದರು. ಪೊಲೀಸರು ಅವರಿಗೆ ಸಿಸಿ ಕ್ಯಾಮರಾ ಅಳವಡಿಸಲು ಸೂಚಿಸಿದ್ದರು. ಆದರೂ ಕಳ್ಳರು ಜಾಣ್ಮೆ ಮೆರೆದು ಸಿಸಿ ಕ್ಯಾಮರಾದ ಡಿವಿಆರ್ ಅನ್ನೇ ಹೊತ್ತೊಯ್ದಿದ್ದಾರೆ.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.