ಮನೆ ನಿವೇಶನಗಳಲ್ಲಿ ಈಗಾಗಲೇ ಹಕ್ಕುಪತ್ರ ಹೊಂದಿದವರು ವಾಸ್ತವ್ಯವಿಲ್ಲದಿದ್ದರೆ ರದ್ದುಪಡಿಸಲಾಗುವುದು, ತ್ಯಾಜ್ಯಗಳನ್ನು ನದಿ, ಹಳ್ಳಗಳಿಗೆ ಎಸೆಯುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೊಳ್ನಾಡು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ರಾಮಸಭೆಯಲ್ಲಿ ನಿರ್ಣಯಿಸಲಾಗಿದೆ.
www.bantwalnews.com report
ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.
ಬಂಟ್ವಾಳ ತಾಲೂಕಿನ ಅತೀ ದೊಡ್ಡ ಗ್ರಾಮ ಕೊಳ್ನಾಡು. ಇದರ ಅಭಿವೃದ್ಧಿಗೆ ನಾಗರಿಕರ ಬೇಡಿಕೆಗೆ ಶೀಘ್ರ ಸ್ಪಂದನೆ ದೊರಕುತ್ತಿದೆ. ಆದರೆ ಸರಕಾರಿ ಸಾರಿಗೆ ವ್ಯವಸ್ಥೆ ಕೊರತೆ ಇದೆ. ಇದನ್ನು ನೀಗಿಸಬೇಕು ಎಂದು ಕೊಳ್ನಾಡು ಗ್ರಾಪಂ ಸಭಾಂಗಣಲ್ಲಿ ನಡೆದ ದ್ವಿತೀಯ ಸುತ್ತಿನ ಗ್ರಾಮಸಭೆಯಲ್ಲಿ ಬೇಡಿಕೆ ಬಂತು.
ಕುಳಾಲು ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ ಪಂಚಾಯಿತಿಯಿಂದಲೇ ಉದ್ಯೋಗ ಖಾತರಿ ಯೋಜನೆಯ ಮೂಲಕ ಸುಮಾರು 35ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ, ಸುಮಾರು 10 ಲಕ್ಷ ವೆಚ್ಚದಲ್ಲಿ ಕಾಂಗ್ರೀಟ್ ಕಾಲು ದಾರಿ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಕೋಜುಗುಳಿ ಮಂಕುಡೆ ರಸ್ತೆ 2 ಕಿಲೋ ಮೀಟರ್, ಮದಕ – ತಾಳಿತ್ತನೂಜಿ -ಬೋಳಂತೂರು 5 ಕಿಲೋ ಮೀಟರ್, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ, 5 ಕೋಟಿ ಅನುದಾನದಲ್ಲಿ ನೆಕ್ಕರೆಕಾಡು ಸೇತುವೆ ಸಿಆರ್‌ಎಫ್ ನಿಧಿಯಲ್ಲಿ ಅನುಷ್ಠಾನಗೊಳ್ಳಲಿದೆ. ಸಾರಿಗೆ ವ್ಯವಸ್ಥೆ ಬಗ್ಗೆ ನಾಗರಿಕರ ಬೇಡಿಕೆಯನ್ನು ಈಡೇರಿಸುವಲ್ಲಿ ಸಂಬಂಧಪಟ್ಟವರ ಗಮನಕ್ಕೆ ತಂದು ಪ್ರಾಮಾಣಿಕ ಪ್ರಯತ್ನ ಮಾಡಲು ಬದ್ಧರಿದ್ದೇವೆ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 1.26 ಕೋಟಿ ರೂಪಾಯಿ ಗ್ರಾಮಸ್ಥರ ಸಹಕಾರದಿಂದ ಖರ್ಚು ಮಾಡಿ ಜಿಲ್ಲೆಯಲ್ಲೇ ನಮ್ಮ ಗ್ರಾಮ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದರು.
ಕುರ್ನಾಡು ಪಶು ಸಂಗೋಪನಾ ಆಸ್ಪತ್ರೆ ವೈದ್ಯಾಧಿಕಾರಿ ಪ್ರಕಾಶ್ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷೆ ಯಮುನಾ ಲಕ್ಷ್ಮಣ ಗೌಡ, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಪಂಚಾಯಿತಿ ಸಿಬ್ಬಂದಿ ಸೌಮ್ಯ ನಾಡಗೀತೆ ಹಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ ಎ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ರಮೇಶ್ ವರದಿ ವಾಚಿಸಿದರು.