ಅನಿಕತೆ

ಮನಸ್ಸಿದ್ದರೆ ಮನೆಯಲ್ಲೇ ಕೈದೋಟ

ನಿಮ್ಮಲ್ಲೇ ಬೆಳೆದ ಹೂವು ಹಣ್ಣು ತರಕಾರಿಗಳು ತಾಜಾ ಮತ್ತು ವಿಷಮುಕ್ತವಾಗಿರುತ್ತವೆ. ಒಂದಿಷ್ಟು ಮನಸ್ಸು ಮಾಡಿ ಇದ್ದಷ್ಟು ಜಾಗದಲ್ಲೇ ಉಪಯುಕ್ತವಾದದ್ದನ್ನು ಬೆಳೆಸಿ, ಉಪಯೋಗಿಸಿ, ಹಂಚಿ, ಆನಂದಿಸಿ..

  • ಅನಿತಾ ನರೇಶ್ ಮಂಚಿ

www.bantwalnews.com ಅಂಕಣ – ಅನಿಕತೆ

ಸರೋಜಮ್ಮ ಏನಡಿಗೆ ಇವತ್ತು? ನಾನು ತಂದ ತರಕಾರಿ ಎಲ್ಲಾ ಮುಗಿದಿದೆ. ಮಾರ್ಕೆಟಿಗೆ ಹೋಗಿ ಏನಾದ್ರು ತರ್ಬೇಕಷ್ಟೆ. ನೀವು ಬರೋದಿದೆಯಾ? ಬನ್ನಿ ಒಟ್ಟಿಗೆ ಹೋಗ್ಬರೋಣ

ಜಾಹೀರಾತು

ನಾನು ಮಾರ್ಕೆಟ್ಟಿನಿಂದ ತರಕಾರಿ ತಾರದೇ ಒಂದು ತಿಂಗಳ ಮೇಲಾಯ್ತು ಗೊತ್ತಾ

ಅಯ್ಯೋ ಅದ್ಯಾಕ್ರೀ? ದಿನಾ ಊಟಕ್ಕೆ ತರಕಾರಿ ಇಲ್ಲದೆ ಅದು ಹೇಗೆ ಅಡುಗೆ ಮಾಡ್ತೀರಾ? ಆರೋಗ್ಯಕ್ಕೆ ತೊಂದ್ರೆ ಅಲ್ವೇನ್ರೀ..?

ತರಕಾರಿ ಇಲ್ಲದೇ ಅಡುಗೆ ಮಾಡಿದೆ ಅಂತೆಲ್ಲಿ ಹೇಳಿದೆ ನಾನು? ತರಕಾರಿ ತರ್ಲಿಲ್ಲ ಅಂತ ಮಾತ್ರ ಅಲ್ವಾ ಹೇಳಿದ್ದು ತುಂಟ ನಗುವಿತ್ತು ಸರೋಜಮ್ಮನ ಮುಖದಲ್ಲಿ.

ಜಾಹೀರಾತು

ಅಂದ್ರೇ..

ಅಂತಾದ್ದೇನಿಲ್ಲ ಕಣ್ರೀ.. ನಾಲ್ಕಾರು ಚೀಲದಲ್ಲಿ ತರಕಾರಿ ಬೀಜ ಹಾಕಿ ಗಿಡ ಮಾಡಿದ್ದೀನಿ. ಬಸಳೆ, ಹರುವೆ ಪಾಲಕ್ ಅಂತಹ ಸೊಪ್ಪು ತರಕಾರಿ, ಅಲಸಂಡೆ, ತೊಂಡೆ. ಟೊಮೇಟೋ, ಎಲ್ಲಾ ನಮ್ಮ ತಾರಸಿಯಲ್ಲೇ ಬೆಳೆಯುತ್ತದೆ. ನಮ್ಮ ಖರ್ಚಿಗೆ ಸಾಕಾಗುವಷ್ಟು. ಹಾಗಾಗಿ ಮಾರ್ಕೆಟ್ಟಿನ ಕಡೆ ಹೋಗಲಿಲ್ಲ ಅಂದಿದ್ದು

ಜಾಹೀರಾತು

ಹೋ.. ಹೌದಾ.. ಸರಿ ಸರಿ ಅದನ್ನೊಮ್ಮೆ ನೋಡ್ಬೇಕು ನಂಗೂ.. ಈಗ ಮಾರ್ಕೆಟ್ಟಿಗೆ ಹೋಗ್ಲಿಲ್ಲ ಅಂದ್ರೆ ತಾಜಾ ತರಕಾರಿಗಳೆಲ್ಲಾ ಖಾಲಿ ಆಗ್ಬಿಡುತ್ತೆ.. ಬರ್ತೀನ್ರೀ..

ರೀ ಕನಕಾಂಗಿ ನಿಲ್ರೀ.. ಎಲ್ಲಿ ಒಮ್ಮೆ ತಿರುಗಿ … ಅಯ್ಯೋ ಅಯ್ಯೋ ಎಷ್ಟು ಚೆಂದದ ಹೂವು ಮುಡಿದಿದ್ದೀರಾ ನೀವು. ನಿಮ್ಮ ಉದ್ದ ಜಡೆಗೆ ತುಂಬಾ ಅಲಂಕಾರವಾಗಿ ಕಾಣಿಸ್ತಾ ಇದೆ.  ಎಲ್ಲಿಂದ ತಂದ್ರಿ? ಎಷ್ಟು ಫ್ರೆಶ್ ಇದೆ. ನಂಗೂ ಹೂ ಮುಡಿಯೋದು ಅಂದ್ರೆ ತುಂಬಾ ಇಷ್ಟ. ಆದ್ರೆ ಮಾರ್ಕೆಟಲ್ಲಿ ಅದರ ರೇಟ್ ಕೇಳಿದ್ರೆ ತಲೆ ತಿರುಗುತ್ತಪ್ಪ. ಮೊದ್ಲೆಲ್ಲಾ ನಮ್ಮೋರು ಮನೆ ಹೊರಗೆ ಹೋಗುವಾಗ ಒಂದು ಮೊಳ ಆದ್ರೂ ಹೂ ಕೊಡಿಸದೆ ಇರ್ತಾ ಇರ್ಲಿಲ್ಲ. ಈಗ ನಾನೇ ಇರೋ ಈ ಕೊತ್ತಂಬರಿ ಕಟ್ಟಿನ ಕೂದಲಿಗೆ ಮಲ್ಲಿಗೆ ಮಾಲೆ ಬೇರೆ ಕೇಡು ಅಂತ ಆಸೆಯಾದ್ರೂ ಹೂ ತೆಗೋಳ್ಳೋದು ಬಿಟ್ ಬಿಟ್ಟಿದ್ದೀನಿ.  ಹೇಗೂ ಮಾರ್ಕೆಟ್ಟಿಗೆ ಹೋಗ್ತೀರಲ್ಲ. ಇಂತದ್ದೇ ಹೂವು ನಂಗು ಎರಡು ತನ್ನಿ. ನಾಳೆ ಮದುವೆ ಮನೆಗೆ ಹೋಗೋದಿದೆ. ಎಲ್ರೂ ಮದುಮಗಳ ಹೂವಿನ ಜಡೆ ನೋಡೋ ಬದ್ಲು ನನ್ನ ತಲೇಲಿರೋ ಹೂವನ್ನೇ ನೋಡ್ಬೇಕು ಸರೋಜಮ್ಮನ ಕಣ್ಣುಗಳು ಹೂವಿನ ಮೇಲೆಯೇ ನೆಟ್ಟಿದ್ದಂತೆ ಮಾತುಗಳು ಹೊರಬಿದ್ದವು.

ಅರ್ರೇ.. ಹೌದಾ ಅಷ್ಟು ಚೆನ್ನಾಗಿದೆಯಾ ನಾನು ಮುಡಿದ ಹೂವು. ಇದು ನಮ್ಮ ಹಿತ್ತಲಲ್ಲೇ ಇರೋ ಹೂವು ಕಣ್ರೀ.

ಜಾಹೀರಾತು

ಹೌದೇನ್ರೀ.. ನಿಜಾನಾ.. ನೀವ್ಯಾವಾಗ ಹಿತ್ತಲಲ್ಲಿ ಗಿಡ ನೆಟ್ಟಿದ್ದು.

ಅಷ್ಟು ಬೇಗ ನಿಮ್ಮುಪದೇಶನಾ ನೀವೇ ಮರೆತರೆ ಹೇಗೆ ಸರೋಜಮ್ಮಾ.. ಕಳೆದ ಸಲ ನೀವು ಹೇಳಿದ್ರಿ ಅಲ್ವಾ ತರಕಾರಿ ಸಿಪ್ಪೆ, ಟೀ ಕಾಫಿ ಚರಟ, ಎಲ್ಲಾ ಸೇರಿಸಿ ಗೊಬ್ಬರ ಮಾಡಬಹುದು ಅಂತ. ನನಗು ಆ ಉಪಾಯ ಇಷ್ಟ ಆಯ್ತು. ಅದನ್ನೇ ಮಾಡಿದೆ. ನಮ್ಮನೆಯವ್ರೆಲ್ಲಾ ಗೊಬ್ಬರ ಮಾಡೋದು ಮಾಡ್ತೀಯಾ ಅದನ್ನೆಲ್ಲಿ ಬಳಸೋದು? ಅಂದ್ರು. ನನಗು ಅದನ್ನೇನು ಮಾಡೋದು ಆಂತ ಅರ್ಥ ಆಗ್ಲಿಲ್ಲ. ಮರುದಿನ ಮನೆಗೆ ಬರುವಾಗ ಒಂದಿಷ್ಟು ಹೂವಿನ ಬೀಜ ತಂದ್ಕೊಟ್ರು. ಹಾಲಿನ ಖಾಲಿ ಪ್ಯಾಕೆಟ್ಟಿಗೆ ಗೊಬ್ಬರ ಮತ್ತು ಮರಳು ಸಮ ಪ್ರಮಾಣದಲ್ಲಿ ತುಂಬಿ ಅದರಲ್ಲಿ ಬೀಜ ಹಾಕಿ ದಿನಾ ಸ್ವಲ್ಪ ನೀರು ಹಾಕಿದೆ.ಪುಟಾಣಿ ಹಸಿರು ಗಿಡ ಬೀಜದಿಂದ ಎಷ್ಟು ಚೆನ್ನಾಗಿ ಹೊರಗೆ ಬಂತು ಗೊತ್ತಾ. ಮೊದಲನೇ ದಿನ  ತಲೆ ಮೇಲೆ ಟೊಪ್ಪಿ ಇಟ್ಕೊಂಡ ಹುಡುಗನಂತೆ ಕಾಣ್ತಾ ಇತ್ತದು. ನೋಡೋದಕ್ಕೆ ತುಂಬಾ ಕುಷಿ ಆಯ್ತು. ಮೆಲ್ಲಮೆಲ್ಲನೆ ಗಿಡಕ್ಕೆ ಕೈಕಾಲಿನಂತೆ ಎಲೆಗಳು, ನಿಧಾನಕ್ಕೆ ರೆಂಬೆಗಳು, ಅದರ್ ತುದಿಯಲ್ಲಿ ಮೊಗ್ಗು.. ಅರಳಿದ ಹೂವು.. ಏನೇ ಹೇಳಿ ಸರೋಜಮ್ಮ. ನಾವು ಕೈಯಾರೆ ನೆಟ್ಟು ಬೆಳೆಸಿದ ಗಿಡದಲ್ಲರಳಿದ ಹೂವುಗಳು  ಕೊಡುವ ಸಂತಸ ಎಷ್ಟೇ ದುಡ್ಡು ಕೊಟ್ಟು ಕೊಂಡುಕೊಂಡ ಹೂಗಳಲ್ಲಿರೋದಿಲ್ಲ ಅಲ್ವಾ

ಸರಿ ಹಾಗಿದ್ರೆ ಇವತ್ತು ನಿಮ್ಮ ಮಾರ್ಕೆಟ್ ಪ್ರೋಗ್ರಾಮ್ ಕ್ಯಾನ್ಸಲ್ ಮಾಡಿ. ತೆಗೊಳ್ಳಿ. ಹರುವೆ ಗಿಡ.   ನಾಳೆ ಅಡುಗೆ ಕೆಲಸ ಇಲ್ಲ ನಂಗೆ.  ಹರುವೆ ಗಿಡ ಬೆಳೆದ್ರೆ ರುಚಿ ಇರಲ್ಲ ಅಂತ ಕಿತ್ತೆ. ಇವತ್ತಿನ ನಿಮ್ಮಡುಗೆಗೆ ಸಾಕಾಗುತ್ತೆ ನೋಡಿ

ಜಾಹೀರಾತು

ತುಂಬಾ ಥ್ಯಾಂಕ್ಸ್ ಕಣ್ರೀ.. ಇರಿ ಒಂದು ನಿಮಿಷ.. ಬಂದೆ ಈಗ..

ಕನಕಾಂಗಿಯ ಕೈಯಲ್ಲಿ ಹಿಡಿದು ಬರುತ್ತಿರುವ  ಎರಡು ಹೂಗಳನ್ನು ನೋಡಿ ಸರೋಜಮ್ಮನ ಮುಖವೂ ಹೂವಿನಂತೆ ಅರಳಿತ್ತು.

ನಿಮ್ಮಲ್ಲೇ ಬೆಳೆದ ಹೂವು ಹಣ್ಣು ತರಕಾರಿಗಳು ತಾಜಾ ಮತ್ತು ವಿಷಮುಕ್ತವಾಗಿರುತ್ತವೆ. ಒಂದಿಷ್ಟು ಮನಸ್ಸು ಮಾಡಿ ಇದ್ದಷ್ಟು ಜಾಗದಲ್ಲೇ ಉಪಯುಕ್ತವಾದದ್ದನ್ನು ಬೆಳೆಸಿ, ಉಪಯೋಗಿಸಿ, ಹಂಚಿ, ಆನಂದಿಸಿ..

ಜಾಹೀರಾತು

ಈ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ಮೈಲ್ ಮಾಡಿ: bantwalnews@gmail.com

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Anitha Naresh Manchi

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿಯ ರಾಮ ನರೇಶ್ ಮಂಚಿ ಅವರ ಪತ್ನಿ ಅನಿತಾ ನರೇಶ್ ಮಂಚಿ, ಕನ್ನಡದ ಪ್ರಸಿದ್ಧ ಲೇಖಕಿ. ಕೊಡೆ ಕೊಡೆ ನನ್ನಕೊಡೆ ಕಾಲೇಜು ಪಠ್ಯವಾಗಿದೆ. ಎರಡು ಲಘು ಬರಹ ಸಂಕಲನ, ಮೂರು ಕಥಾಸಂಕಲನ ಬಿಡುಗಡೆಗೊಂಡಿವೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಕಥೆ, ಲೇಖನಗಳು ಪ್ರಕಟಗೊಂಡಿವೆ. ಅವರ ಕಥೆಗಳು ಬೇರೆ ಭಾಷೆಗೂ ಅನುವಾದಗೊಂಡಿವೆ. ವಿಜಯವಾಣಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಅನಿತಾ ಅವರಿಗೆ ಮಂಗಳೂರಿನ ಕನ್ನಡ ರತ್ನ ಪ್ರಶಸ್ತಿ. ಕೊಡಗಿನ ಗೌರಮ್ಮ ಪ್ರಶಸ್ತಿ, ಅಕ್ಷರ ಶ್ರೀ ಪ್ರಶಸ್ತಿ ದೊರಕಿವೆ.

Share
Published by
Anitha Naresh Manchi
Tags: #anikathe