ಕೊನೆಗೂ ಬಂಟ್ವಾಳಕ್ಕೆ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖಾ ಕಚೇರಿ ಆರಂಭಕ್ಕೆ ಹಸಿರು ನಿಶಾನೆ ದೊರಕಿದೆ.
www.bantwalnews.com report
ರಾಜ್ಯದ ಮೂರು ಕಡೆ ಕಚೇರಿ ತೆರೆಯಲು ಸರಕಾರ ಆದೇಶ ಹೊರಡಿಸಿದ್ದು ಅವುಗಳಲ್ಲಿ ಬಂಟ್ವಾಳವೂ ಒಂದು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಉಳಿದ ಎರಡು ಪ್ರದೇಶಗಳು.
ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವಾಹನ ನೋಂದಣಿಗಳನ್ನು ಅನುಸರಿಸಿ ಈ ಪ್ರದೇಶಗಳಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಕಚೇರಿ ತೆರೆಯಲು ಈ ಮೊದಲೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಕಚೇರಿಗೆ ಸೂಕ್ತ ಜಾಗ ಹಾಗೂ ಸಿಬ್ಬಂದಿ ವ್ಯವಸ್ಥೆ ಕಲ್ಪಿಸಲು ಅನುವು ಮಾಡಲು ಸರಕಾರ ಸೂಚನೆ ನೀಡಿದೆ.
ಕಚೇರಿ ಪ್ರಾರಂಭಿಸುವ ಬಗ್ಗೆ ಹುದ್ದೆಗಳ ಮಂಜೂರಾತಿ, ಪೀಠೋಪಕರಣಗಳ ಖರೀದಿ, ಕಚೇರಿ ಹಾಗೂ ಇನ್ನಿತರ ಅಗತ್ಯಗಳಿಗಾಗಿ ಅನುದಾನದ ಮಂಜೂರಾತಿ ಬಗ್ಗೆ ಪ್ರಸ್ತಾವನೆಯನ್ನು ಪಡೆದು ಪರಿಶೀಲಿಸಿ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಸಾರಿಗೆ ಇಲಾಖೆಯ ಉಪಕಾರ್ಯದರ್ಶಿ ಕೆ. ಬೀರೇಶ್ ತಿಳಿಸಿದ್ದಾರೆ.
ಎಆರ್‌ಟಿಓ ಕಚೇರಿ ಬಂಟ್ವಾಳದಲ್ಲೇ ಸ್ಥಾಪನೆಗೊಂಡರೆ ಈ ಭಾಗದ ಜನ ಸಾರಿಗೆ ಇಲಾಖೆಗೆ ಸಂಬಂಧಪಟ್ಟ ಕೆಲಸಗಳಿಗಾಗಿ ಜಿಲ್ಲಾ ಕೇಂದ್ರದಲ್ಲಿ ಅಲೆದಾಡುವುದು ತಪ್ಪುತ್ತದೆ. ದಿನವಿಡೀ ಕೆಲಸ ಬಿಟ್ಟು ಮಂಗಳೂರಿನ ಪ್ರಾಧಿಶೀಕ ಕಚೇರಿಯಲ್ಲಿ ಇದ್ದು ಕೆಲಸ ಮಾಡಿಕೊಳ್ಳಬೇಕಾದ ಕೆಲವು ಬಾರಿ ಎರಡು ಮೂರು ದಿನ ಹೋದರೂ ಕೆಲಸವಾಗದೆ ವಾಪಸ್ಸಾದ ಉದಾಹರಣಗಳಿವೆ. ಈ ನಿಟ್ಟಿನಲ್ಲಿ ತಾಲೂಕು ಕೇಂದ್ರದಲ್ಲು ಎಆರ್‌ಟಿಓ ಕಚೇರಿ ಆರಂಭವಾದರೆ ಈ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಬಹು ಬೇಡಿಕೆಯ ಮಿನಿ ವಿಧಾನಸೌಧ, ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣ, ಮೆಸ್ಕಾಂ ನೂತನ ಕಟ್ಟಡ, ನಿರೀಕ್ಷಣ ಮಂದಿರ ಮಂಜೂರುಗೊಂಡು ನಿರ್ಮಾಣಹಂತದಲ್ಲಿದೆ. ಈ ನಡುವೆ ಬಂಟ್ವಾಳಕ್ಕೆ ಹೊಸ ಎಆರ್‌ಟಿಓ ಕಚೇರಿಯನ್ನು ಸರಕಾರ ಮಂಜೂರುಗೊಳಿಸಿದ್ದು ಇಲ್ಲಿನ ಒಟ್ಟು ಪ್ರಗತಿಗೆ ಪೂರಕವಾಗಿದೆ.