ಭಾರತೀಯ ಮೌಲ್ಯಗಳನ್ನು ಸಮರ್ಥವಾಗಿ ಬಿಂಬಿಸಿದವರು ಸ್ವಾಮಿ ವಿವೇಕಾನಂದ. ಹಿಂದೂ ಸನಾತನ ಧರ್ಮವನ್ನು ಪ್ರಪಂಚಕ್ಕೆ ತೊರಿಸಿಕೊಟ್ಟವರೂ ಅವರೇ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
www.bantwalnews.com report
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಗುರುವಾರ ಆಯೋಜಿಸಲಾದ ವಿವೇಕಾನಂದ ಜಯಂತಿ ಆಚರಣೆಯನ್ನು ಹಾಗೂ ರೇಡಿಯೋ ಪಾಂಚಜನ್ಯ ಬಾನುಲಿ ಕೇಂದ್ರವನ್ನು ಉದ್ಘಾಟಿಸಿ ನಿರ್ಮಲಾ ಸೀತಾರಾಮನ್ ಮಾತನಾಡಿದರು.
ಹಿಂದೂ ಎಂದರೆ ಅದೊಂದು ಜೀವನ ಮಾರ್ಗ ಎನ್ನುವುದನ್ನು ಈ ದೇಶ ಸರ್ವೋಚ್ಛ ನ್ಯಾಯಾಲಯವೇ ಅಭಿಪ್ರಾಯಿಸಿದೆ. ಹಿಂದೂ ಜೀವನದ ಸಕಲ ಸಾರಗಳನ್ನು ಪ್ರತಿಯೊಬ್ಬರೂ ತಿಳಿದಿರಬೇಕಾದ ಅಗತ್ಯವಿದೆ. ಆ ಕುರಿತು ಮಾತನಾಡುವ ಆತ್ಮಸ್ಥೈರ್ಯವನ್ನೂ ಬೆಳೆಸಿಕೊಳ್ಳಬೇಕಿದೆ. ವಿವೇಕಾನಂದರು ಹೇಳಿದ ವಿಚಾರಗಳು ಸನಾತನ ಸಂಸ್ಕೃತಿಯ ಸಾರ ಎಂದರು.
ದಿಕ್ಸೂಚಿ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಪ್ರಚಾರ ಪ್ರಮುಖ್ ಪ್ರದೀಪ್, ಸ್ವಾಮಿ ವಿವೇಕಾನಂದರ ಬದುಕಿನ ಅಧ್ಯಯನವನ್ನು ಪ್ರತಿಯೊಬ್ಬನೂ ನಡೆಸಬೇಕು. ವಿವೇಕಾನಂದರ ಜೀವನ ಇಂದಿಗೂ ಪ್ರಸ್ತುತವಾಗಿರುವುದು ಗಮನಾರ್ಹ. ತಾನು ಹೇಳಿದ ಸಂಗತಿಗಳನ್ನು ಪ್ರಾಯೋಗಿಕವಾಗಿಯೂ ಮಾಡಿತೋರಿಸಿದ ಧೀಮಂತ ಅವರು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ನಮ್ಮ ದೇಶವನ್ನು ಸಂತರು, ಸನ್ಯಾಸಿಗಳು ಹೊರಗಿನಿಂದ ರಕ್ಷಿಸಿದರೆ ತಾಯಂದಿರು ಒಳಗಿನಿಂದ ಕಾಪಾಡುತ್ತಿದ್ದಾರೆ. ಆದರೆ ದುರಂತವೆಂದರೆ ಈ ಎರಡೂ ವರ್ಗಗಳನ್ನು ಹಾದಿತಪ್ಪಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ನಮ್ಮದು ಪುರುಷ ಪ್ರಧಾನ ಸಮಾಜವೆಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ನಿಜವಾಗಿ ಇದು ಮಾತೃಪ್ರಧಾನ ವ್ಯವಸ್ಥೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ನೋಟು ಅಮಾನ್ಯೀಕರಣದ ಬಗೆಗೆ ಮಾತನಾಡಿದ ಸಂಗತಿಗಳ ಕಿರು ಹೊತ್ತಗೆಯನ್ನು ಬಿಡುಗಡೆಗೊಳಿಸಲಾಯಿತು ಮತ್ತು ಮೋದಿಯವರ ಮಾತುಗಳನ್ನು ಧ್ವನಿವರ್ಧಕದಲ್ಲಿ ಕೇಳಿಸಲಾಯಿತು. ವಿವೇಕಾನಂದ ಜಯಂತಿಯ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ಬಹುಮಾನವನ್ನು ನಳಿನ್ ಕುಮಾರ್ ಕಟೀಲ್ ವಿತರಿಸಿದರು.
ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್, ವಿವೇಕಾನಂದ ಕಾಲೇಜಿನ ಸ್ಥಾಪಕ ಸಂಚಾಲಕ ಕೆ.ರಾಮ ಭಟ್, ರೇಡಿಯೋ ಪಾಂಚಜನ್ಯ ಸಮಿತಿಯ ಕಾರ್ಯದರ್ಶಿ ಶ್ರೀಕಾಂತ್ ಕೊಳತ್ತಾಯ ಉಪಸ್ಥಿತರಿದ್ದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಅಂಕಿತಾ, ಭೂಮಿಕಾ, ಪ್ರಣಮ್ಯ ಹಾಗೂ ವೈಣವಿ ಪ್ರಾರ್ಥಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಪ್ರಸ್ತಾವನೆಗೈದು, ಸ್ವಾಗತಿಸಿದರು. ರೇಡಿಯೋ ಪಾಂಚಜನ್ಯದ ಅಧ್ಯಕ್ಷ ಗೋಪಾಕೃಷ್ಣ ಕುಂಟಿನಿ ವಂದಿಸಿದರು. ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣೀಜ್ಯ ವಿಭಾಗದ ಮುಖ್ಯಸ್ಥೆ ವಿಜಯ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಡಾ.ಸುಧಾ ಎಸ್ ರಾವ್ ಅತಿಥಿಗಳನ್ನು ಪರಿಚರಿಸಿದರು.