ವಿಶೇಷ ವರದಿ

ನೀವು ಕೇಳ್ತಾ ಇದ್ದೀರಿ ರೇಡಿಯೋ ಪಾಂಚಜನ್ಯ 90.8 ಎಫ್.ಎಂ.

  • ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಸಮುದಾಯ ಬಾನುಲಿ
  • 12ರಂದು ಕೇಂದ್ರ ಸಚಿವೆ ನಿರ್ಮಲಾ ಸಿತಾರಾಮನ್ ಅವರಿಂದ ಲೋಕಾರ್ಪಣೆ
  • ಇದು ಜೀವ ಜೀವದ ಸ್ವರ ಸಂಚಾರ
  • ಜಿಲ್ಲೆಯ ಮೂರನೇ ಸಮುದಾಯ ರೇಡಿಯೋ ಕೇಂದ್ರವಿದು
  • ದೇಶದಲ್ಲಿವೆ ಒಟ್ಟು 190 ಸಮುದಾಯ ಬಾನುಲಿ ಕೇಂದ್ರಗಳು
  • ಪ್ರಸಿದ್ಧರಲ್ಲದ, ಜನಸಾಮಾನ್ಯರಿಗೆ ವೇದಿಕೆ ಒದಗಿಸುವುದು ಕೇಂದ್ರದ ಉದ್ದೇಶ
  • ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕಾಸರಗೋಡು, ಮಡಿಕೇರಿ ವ್ಯಾಪ್ತಿಗೆ ಪ್ರಸಾರ
  • ಇದೇ ಮೊದಲ ಬಾರಿಗೆ ವೆಬ್ ರೇಡಿಯೋ ಸಮುದಾಯ ಬಾನುಲಿಯಾಗಿ ಜಗತ್ತಿಗೇ ಪ್ರಸಾರ

 bantwalnews.com special report

  • ಹರೀಶ ಮಾಂಬಾಡಿ

  bantwalnews.com  ವಿಶೇಷ

ಜನವರಿ 12ರಿಂದ ಪುತ್ತೂರಷ್ಟೇ ಅಲ್ಲ, ಸುತ್ತಮುತ್ತಲಿನ ಎಫ್ಎಂ ಕೇಳುಗರಿಗೆ ಹೊಸ ಧ್ವನಿ. ಮೊಳಗಲಿದೆ ಪಾಂಚಜನ್ಯ. ಇದು ನೀವು 90.8 ಎಫ್.ಎಂ.ಟ್ಯೂನ್ ಮಾಡಿದರೆ ಸಾಕು. ಪುತ್ತೂರು ಹಾಗೂ ಪರಿಸರದ ವೈವಿಧ್ಯಮಯ ವಿಚಾರಗಳ ಹೂರಣವನ್ನು ಆಲಿಸಬಹುದು. ಮೊದಲ ಕಾರ್ಯಕ್ರಮವಾಗಿ 12ರಂದು ನಡೆಯುವ ವಿವೇಕಾನಂದ ಜಯಂತಿ ಆಚರಣೆಯ ನೇರ ಪ್ರಸಾರ, ವೀಕ್ಷಕ ವಿವರಣೆ.

ಎಲ್ಲವೂ ಸಮುದಾಯದಿಂದ ಬರಬೇಕು, ಎಲ್ಲವೂ ಸಮುದಾಯಕ್ಕೆ ತಲುಪಬೇಕು ಎಂಬ ಆಶಯದೊಂದಿಗೆ ರೇಡಿಯೋ ಪಾಂಚಜನ್ಯ ರೂಪುಗೊಂಡಿದೆ ಎನ್ನುತ್ತಾರೆ ಇದರ ಸಮಿತಿ ಅಧ್ಯಕ್ಷ ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ.

ಪಾಂಚಜನ್ಯ ರೇಡಿಯೋಗಾಗಿ ಪ್ರತ್ಯೇಕ ಆಪ್ ರೂಪುಗೊಂಡಿದೆ. ಜೀವ ಜೀವದ ಸ್ವರ ಸಂಚಾರ ಎಂಬ ಟ್ಯಾಗ್ ಲೈನ್ ನೊಂದಿಗೆ ಭದ್ರಂ ಕರ್ಣೇ ಭಿ ಶ್ರುಣುಯಾಮ ಎಂಬ ಲೋಗೋ ಹೊಂದಿರುವ ಪಾಂಚಜನ್ಯ ತಂಡದ ಸಲಹೆಗಾರರಾಗಿ ಮಣಿಪಾಲ ಸಮುದಾಯ ಬಾನುಲಿ ಕೇಂದ್ರದ ನಿರ್ದೇಶಕರೂ ಆಗಿರುವ ಶಾಮ ಭಟ್ ಇದ್ದಾರೆ. ಶ್ರೀಕಾಂತ ಕೊಳತ್ತಾಯ ಕಾರ್ಯದರ್ಶಿ, ಬಿ.ಟಿ.ರಂಜನ್ ಸದಸ್ಯರು. ಇಡೀ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ,

ಉಪನ್ಯಾಸಕಿಯೂ ಆಗಿರುವ ಆಕಾಶವಾಣಿ ನಿರೂಪಕಿ ವಿದ್ಯಾ ಎಸ್. ಸಹಿತ ಅಧ್ಯಾಪಕರ ತಂಡದ ಪ್ರೋತ್ಸಾಹ, ಪಾಲ್ಗೊಳ್ಳುವಿಕೆ ರೇಡಿಯೋ ಪ್ರಸಾರ ತಂಡದ ಹುರುಪು ಹೆಚ್ಚಿಸಿದೆ.

ಸುಮಾರು 40 ಲಕ್ಷ ರೂ ವೆಚ್ಚದ ಉಪಕರಣಗಳೊಂದಿಗೆ ಸಜ್ಜುಗೊಂಡಿರುವ ರೇಡಿಯೋ ಸ್ಟುಡಿಯೋ ಪುತ್ತೂರು ವಿವೇಕಾನಂದ ಕಾಲೇಜು ಕ್ಯಾಂಪಸ್ ನಲ್ಲಿದೆ.

ಪ್ರತಿನಿತ್ಯ ರೇಡಿಯೋ ಮೊದಲ ಹಂತದಲ್ಲಿ ಒಂದು ಗಂಟೆ ಕಾರ್ಯಕ್ರಮ ಪ್ರಸಾರ ಮಾಡಲಿದೆ. ಸಂಜೆ ಮರುಪ್ರಸಾರ. ಬೆಳಗ್ಗೆ 7ರಿಂದ 8, ಸಂಜೆ 6ರಿಂದ 7ವರೆಗೆ ರೇಡಿಯೋ ಪ್ರಸಾರ ಇರುತ್ತದೆ.

ನೂರಡಿ ಎತ್ತರದ ಟ್ರಾನ್ಸ್ ಮಿಶನ್ ಗೋಪುರ, ಮ್ಯೂಸಿಕ್ ಟೈಪ್, ಟಾಕ್ ಟೈಪ್ ಮಲ್ಟಿಪರ್ಪಸ್ ಸ್ಟುಡಿಯೋದೊಂದಿಗೆ ಸಜ್ಜುಗೊಂಡಿರುವ ರೇಡಿಯೋ ಪಾಂಚಜನ್ಯವು 12ರಂದು ಲೋಕಾರ್ಪಣೆಗೊಳ್ಳುವುದು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲ್, ಕಾಲೇಜಿನ ಸ್ಥಾಪಕರಲ್ಲೊಬ್ಬರಾದ ಉರಿಮಜಲು ರಾಮ ಭಟ್ ಉಪಸ್ಥಿತರಿರುವರು. ಆರೆಸ್ಸೆಸ್ ದಕ್ಷಿಣ ಪ್ರಾಂತ ಸಹಪ್ರಚಾರ ಪ್ರಮುಖ್ ಪ್ರದೀಪ್ ದಿಕ್ಸೂಚಿ ಭಾಷಣ ಮಾಡುವರು.

ಸಮಯ: ಬೆಳಗ್ಗೆ 10 ಗಂಟೆ.

ರೇಡಿಯೋದಲ್ಲಿ ರೆಕಾರ್ಡಿಂಗ್ ಹೀಗಿರುತ್ತೆ..

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts