ಕ್ರೀಡಾಕ್ಷೇತ್ರದ ಹಲವಾರು ಕ್ರೀಡೆಗಳಲ್ಲಿ ಸಾಧನೆ ಮಾಡಲು ವಿಫುಲ ಅವಕಾಶಗಳಿದ್ದರೂ, ವಿದ್ಯಾರ್ಥಿ ಸಮುದಾಯದಲ್ಲಿ ಕ್ರೀಡಾಸಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಒಲಿಂಪಿಕ್ ಕ್ರೀಡಾಪಟು ಸತೀಶ್ ರೈ ಹೇಳಿದರು.
ವಿಟ್ಲ ಶ್ರೀರಾಮ ಮಂದಿರದಲ್ಲಿ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ವಿಭಾಗದ ವೈಟ್ ಲಿಪ್ಟಿಂಗ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ.ಕೆ ಮಾತನಾಡಿ ಕ್ರೀಡಾ ವಿಭಾಗ ಪಠ್ಯದಿಂದ ಪ್ರತ್ಯೇಕ ಎಂಬ ಭಾವನೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆಯಲ್ಲಿ 15 ಗ್ರೇಸ್ ಅಂಕಗಳನ್ನು ನೀಡುವ ಮಹತ್ವದ ನಿರ್ಣಯಕ್ಕೆ ಅನುಮೋದನೆ ಸಿಕ್ಕಿದೆ ಎಂದು ತಿಳಿಸಿದರು.
ಸತೀಶ್ ರೈ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾಲೇಜು ಪ್ರಿನ್ಸಿಪಾಲ್ ಶಂಕರ್ ಪಾಟಾಲಿ ಅಧ್ಯಕ್ಷತೆ ವಹಿಸಿದ್ದರು.
ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ ವಿಟ್ಲ, ಶಿರ್ವ ಸೈಂಟ್ ಮೇರೀಸ್ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ವೇಣುಗೋಪಾಲ ನೋಂಡಾ ಭಾಗವಹಿಸಿದ್ದರು. ಏಕಲವ್ಯ ಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ಕ್ರೀಡಾಪಟುಗಳಾದ ಸುಧೀರ್ ಕುಮಾರ್, ಕಾಮನ್‌ವೆಲ್ತ್ ಪ್ರಶಸ್ತಿ ವಿಜೇತೆ ಚಂದ್ರಶೌರಿ ದೇವಿ ಉಪಸ್ಥಿತರಿದ್ದರು.
ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಕೆ.ರಾಮಚಂದ್ರ ಸ್ವಾಗತಿಸಿದರು. ಅತಿಥಿ ಉಪನ್ಯಾಸಕಿ ಶ್ರೀವಿದ್ಯಾ ವಂದಿಸಿದರು. ವಿದ್ಯಾ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.