ಕೊಕ್ಕಡ ಗ್ರಾಮದ ಆಲಡ್ಕ ನಿವಾಸಿ ಬಾಬು ಗೌಡ (62), ಪತ್ನಿ ಗಂಗಮ್ಮ (55), ಎಂಡೋಸಲ್ಫಾನ್ ಪೀಡಿತ ಮಗ ಸದಾನಂದ ಗೌಡ (32), ನಿತ್ಯಾನಂದ (30) ಶವಗಳು ಮನೆ ಸಮೀಪದ ಕೆರೆಯಲ್ಲಿ ಗುರುವಾರ ಬೆಳಗ್ಗೆ ಪತ್ತೆಯಾಗಿದೆ. ಈ ಕುಟುಂಬದ ಮತ್ತೋರ್ವ ಸದಸ್ಯ ದಯಾನಂದನೋರ್ವನೇ ಬದುಕುಳಿದ ವ್ಯಕ್ತಿ.
ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಗ್ರಾಮ ಸಹಿತ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾರಕ ಪರಿಣಾಮ ಬೀರಿದ ಎಂಡೋಸಲ್ಫಾನ್ ವಿಷ ಸಿಂಪಡಣೆಯ ಪರೋಕ್ಷ ಪರಿಣಾಮ ಈ ಸಾವು.
ಇಬ್ಬರು ಪುತ್ರರು ಎಂಡೋಸಲ್ಫಾನ್ ಪ್ರಭಾವದಿಂದಾಗಿ ತೊಂದರೆ ಅನುಭವಿಸುತ್ತಿದ್ದವರು. ಸದಾನಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರೆ, ಮತ್ತೋರ್ವ ದಯಾನಂದ ತೃತೀಯ ಲಿಂಗಿಯಾಗಿದ್ದ. ಸರಿ ಇದ್ದ ಪುತ್ರ ನಿತ್ಯಾನಂದ ಮಂಗಳೂರಿನ ಬೇಕರಿ, ಕಡಬ ಸಮೀಪ ಮರದ ಮಿಲ್ಲಿನಲ್ಲಿ ಕೆಲಸ ಮಾಡಿಕೊಂಡಿದ್ದು, ಅಪಘಾತದಲ್ಲಿ ಗಾಯಗೊಂಡಿದ್ದ. ಬಾಬು ಗೌಡರಿಗೆ ಇದೇ ಚಿಂತೆ ಆವರಿಸಿಕೊಂಡಿತ್ತು. ತನ್ನ ನಂತರ ಈ ಮಕ್ಕಳ ಗತಿಯೇನು ಎಂಬ ಯೋಚನೆಯಿಂದ ಈ ನಿರ್ಧಾರಕ್ಕೆ ಬಂದಿರಬಹುದು ಎನ್ನಲಾಗಿದೆ.
ಕೊಕ್ಕಡದ ಎಂಡೋ ಪಾಲನಾ ಕೇಂದ್ರಕ್ಕೆ ಸದಾನಂದನನ್ನು ಸೇರಿಸಲಾಯಿತಾದರೂ, ಈತನನ್ನು ಪಾಲನೆ ಮಾಡುವಷ್ಟು ವ್ಯವಸ್ಥೆ ಅಲ್ಲಿರಲಿಲ್ಲ ನಿತ್ಯಾನಂದನಿಗೆ ಬೈಕ್ ತೆಗೆಸಿಕೊಂಡಲಾಗಿತ್ತು. ಆ ಬೈಕ್ ಎರಡು ಸಲ ಅಪಘಾತವಾಗಿತ್ತು. ಅಪಘಾತದಲ್ಲಿ ಕಾಲಿಗೆ ಗಾಯವಾಗಿ ಕೆಲಸ ಮಾಡಲು ಅಸಾಧ್ಯವಾಗಿತ್ತು. ಇದು ಬಾಬು ಗೌಡರನ್ನು ಚಿಂತಗೆ ತಳ್ಳಿತ್ತು. ಸರಿಯಾಗಿದ್ದ ಒಬ್ಬ ಮಗನ ಸ್ಥಿತಿಯೂ ಈ ರೀತಿಯಾಗಿದ್ದರಿಂದ ದಂಪತಿಗಳು ಕೊರಗುತ್ತಿದ್ದರು.
ಕೊನೆಯ ಮಗ ದಯಾನಂದ ಮಂಗಳೂರಿನಲ್ಲಿರುತ್ತಿದ್ದ. ಆತನ ಸ್ಥಿತಿ ಕಂಡು ದಂಪತಿ ನಿತ್ಯ ಮರುಗುತ್ತಿದ್ದರು. ಕೆಲ ದಿನಗಳ ಹಿಂದೆಯೇ ಬಾಬು ಗೌಡರು ಕೆರೆಯೊಂದಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಬುಧವಾರ ಮಧ್ಯಾಹ್ನ ಎರಡನೇ ಮಗ ನಿತ್ಯಾನಂದ ಮನೆಯಿಂದ ಹೊರಹೋದವನು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಹೊರನಡೆದಿದ್ದ. ಆತ ಮನೆ ಸಮೀಪದ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ರಾತ್ರಿಯಾದರೂ ಮನೆಗೆ ಮಗ ಬರದಿದ್ದನ್ನು ಕಂಡು ಆತ ಆತ್ಮಹತ್ಯೆ ಮಾಡಿಕೊಂಡಿರುವುದು ದಿಟ ಎಂದು ತಿಳಿದ ಬಾಬು ಗೌಡ, ಗಂಗಮ್ಮ, ಮಗ ಸದಾನಂದ ಜೊತೆ ರಾತ್ರಿ 9 ಗಂಟೆಯ ಸುಮಾರಿಗೆ ತನ್ನ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಊರವರಿಗೆ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದಿದೆ. ಧರ್ಮಸ್ಥಳ ಪೊಲೀಸರು ಬಂದು ಸ್ಥಳ ಪರಿಶೀಲಿಸಿದಾದ ಒಂದೇ ಕೆರೆಯಲ್ಲಿ ಮೂವರು ಹಾಗೂ ಇನ್ನೊಬ್ಬ ಮತ್ತೊಂದು ಕರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂತು.
ಬಾಬು ಗೌಡರಿಗೆ ಆರ್ಥಿಕ ಮುಗ್ಗಟ್ಟಿರಲಿಲ್ಲ. ಮಕ್ಕಳ ಈ ಸ್ಥಿತಿಯಿಂದ ಕುಟುಂಬ ಆತ್ಮಹತ್ಯೆಗೆ ಶರಣಾಯಿತು. ಸ್ಥಳಕ್ಕೆ ಎಸ್‌ಪಿ ಭೂಷಣ್ ಜಿ. ಭೋರಸೆ, ಡಿವೈಎಸ್‌ಪಿ ಸಿ.ಆರ್. ರವೀಶ್, ಬೆಳ್ತಂಗಡಿ ತಹಸೀಲ್ದಾರ್ ತಿಪ್ಪೆಸ್ವಾಮಿ ಭೇಟಿ ನೀಡಿದರು.