ನಮ್ಮ ಭಾಷೆ

ಎಲ್ಲೇ ಇರು, ಎಂತಾದರೂ ಇರು, ಎಂದೆಂದೂ ನೀ ತುಳುವನಾಗಿರು

ಮಲೆಯಾಳಿಗಳು ಎಲ್ಲಿ ಹೋದರೂ ಮಲೆಯಾಳ ಭಾಷೆ ಮಾತನಾಡುತ್ತಾರೆ, ಓದುತ್ತಾರೆ. ಹೊರರಾಜ್ಯ, ದೇಶಗಳಲ್ಲಿರುವ ತುಳುವರೂ ತುಳು ಭಾಷೆಯನ್ನು ಮರೆತಿಲ್ಲ.

 

ಬಿ.ತಮ್ಮಯ್ಯ

www.bantwalnews.com ಅಂಕಣನಮ್ಮ ಭಾಷೆ

ಆಸ್ಟ್ರೇಲಿಯಾದಲ್ಲಿ ಕಳೆದ 30 ವರ್ಷಳಿಂದ ವಾಸವಾಗಿರುವ ಮಂಗಳೂರಿನವರೊಬ್ಬರನ್ನು ಇತ್ತೀಚೆಗೆ ನಾನು ಭೇಟಿಯಾಗಿದ್ದೆ. ಅವರೊಂದಿಗೆ ಅವರ ಮಗ ಇದ್ದ. ಅವನು ಹುಟ್ಟಿದ್ದು ಆಸ್ಟ್ರೇಲಿಯಾದಲ್ಲಿ. ಓದಿದ್ದೂ ಅಲ್ಲೇ. ಎಂಬಿಬಿಎಸ್ ಮುಗಿಸಿ ಎಂಡಿ ಮಾಡುವ ಪ್ರಯತ್ನದಲ್ಲಿರುವುದಾಗಿ ಆತನ ತಂದೆ ತಿಳಿಸಿದರು. ನಾನು ನೇರವಾಗಿ ಆತನಲ್ಲಿ ನಿನಗೆ ಭಾರತ ಹೇಗೆ ಅನಿಸುತ್ತದೆ ಎಂದು ಕೇಳಿದೆ.

ಆ ಹುಡುಗ ನನ್ನ ಬಳಿ ಹೇಳಿದ. ಅಂಕಲ್, ಎಂಕ್ ತುಳು ಬರ್ಪುಂಡು. ಭಾರತ ಎಂಕ್ ಕುಶಿ ಅಂಕಲ್ ಎಂದು ಹೇಳಿದ. ನನಗೆ ಅಚ್ಚರಿಯಾಯಿತು. ನಾನು ಅವರ ತಂದೆಯವರೊಂದಿಗೆ ಕೇಳಿದೆ. ಹೇಗೆ ನಿಮ್ಮ ಮಗನಿಗೆ ಇಷ್ಟು ಚೆನ್ನಾಗಿ ತುಳು ಮಾತನಾಡಲು ಬರುತ್ತದೆ. ಅದಕ್ಕೆ ಅವರು ಉತ್ತರಿಸಿದರು. ನನ್ನ ಅಣ್ಣ, ತಮ್ಮಂದಿರು ಮಂಗಳೂರಲ್ಲಿದ್ದಾರೆ. ಅವರ ಮಕ್ಕಳು ಇಲ್ಲಿದ್ದಾರೆ. ನನ್ನ ಮಕ್ಕಳಿಗೆ ತುಳು ಬರದಿದ್ದರೆ ಅವರು ಇಲ್ಲಿ ಪರಕೀಯರಾಗುತ್ತಾರೆ ಎಂದು ನಾವು ಆಸ್ಟ್ರೇಲಿಯಾದಲ್ಲಿರುವ ನಮ್ಮ ಮನೆಯಲ್ಲಿ ಎಲ್ಲರೂ ತುಳು ಮಾತನಾಡಬೇಕು ಎಂದು ನಿರ್ಧರಿಸಿದೆವು. ಇದರಿಂದಾಗಿ ನನ್ನ ಎರಡು ಮಕ್ಕಳಿಗೂ ತುಳು ಬರುತ್ತದೆ.

ಅವರ ಕೈಕುಲುಕಿ ಹೇಳಿದೆ. ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ತುಳುವನಾಗಿರು.

ಇದು ಭಾಷೆಯನ್ನು ಉಳಿಸುವ ಪರಿ ಎಂದುಕೊಂಡಿದ್ದೇನೆ.

ನಾನು ಕಳೆದ ವರ್ಷ ಪುಣೆಗೆ ಮದುವೆ ನಿಶ್ಚಯವೊಂದರಲ್ಲಿ ಭಾಗವಹಿಸಲು ಹೋಗಿದ್ದೆ. ಹುಡುಗ, ಹುಡುಗಿ ಇಂಜಿನಿಯರುಗಳು. ಹುಡುಗ ಮಂಗಳೂರಿನವರು, ಹುಡುಗಿ ಪುಣೆಯಲ್ಲಿ ಹುಟ್ಟಿ ಬೆಳೆದಾಕೆ.

ಹುಡುಗಿ ತಂದೆ ಸೇನಾ ವಿಭಾಗದಲ್ಲಿದ್ದರು. ಕಳೆದ 40 ವರ್ಷಗಳಿಂದ ಅವರು ಪುಣೆಯಲ್ಲಿ ನೆಲಸಿದ್ದಾರೆ. ಎರಡು ಹೆಣ್ಣುಮಕ್ಕಳ ಪೈಕಿ ದೊಡ್ಡವಳ ಮದುವೆಯಾಗಿದೆ.

ವಿಶೇಷ ಎಂದರೆ, ಪುಣೆಯಲ್ಲೇ ಹುಟ್ಟಿ ಬೆಳೆದ  ಈ ಮಕ್ಕಳು ಮಲೆಯಾಳ ಮನೋರಮಾ ಓದುತ್ತಾರೆ. ಅದನ್ನು ಕಂಡು ಅಚ್ಚರಿಯಿಂದ ನಾನು ಕೇಳಿದೆ. ಆಗ ಅವರು ಹೇಳಿದ್ದಿಷ್ಟು.

ನಮ್ಮ ಮಕ್ಕಳು ಮಲೆಯಾಳ ಅಕ್ಷರಮಾಲೆಯನ್ನು ಶಾಲೆಗೆ ಹೋಗುತ್ತಿದ್ದಾಗ, ಹೊರಡುವ ಮೊದಲು ಕಲಿತು ಹೋಗುತ್ತಿದ್ದರು. ಮನೆಯಲ್ಲಿ ಮಲೆಯಾಳಲ್ಲೇ ಮಾತನಾಡುತ್ತೇವೆ. ದೊಡ್ಡವರಾದ ಮೇಲೆ ಶನಿವಾರ, ಭಾನುವಾರ ಮಲೆಯಾಳ ಸಂಘದಲ್ಲಿ ಅಕ್ಷರಮಾಲೆ ಕಲಿಸಲು ಆರಂಭಿಸಿದರು.

ನೋಡಿ, ಮಲೆಯಾಳಿಗಳು ಎಲ್ಲಿ ಹೋದರೂ ಅವರ ಒಟ್ಟಿಗೆ ಭಾಷೆ, ಸಂಸ್ಕೃತಿ ಹಾಗೂ ಅಕ್ಷರವನ್ನು ಒಯ್ಯುತ್ತಾರೆ. ತುಳು ಲಿಪಿಯನ್ನೂ ಹೀಗೆ ಬೆಳೆಸಬಹುದಲ್ವೇ.

 

ಈ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ವಾಟ್ಸಾಪ್ ನಂಬರ್ ಗೆ ಕಳುಹಿಸಿ: 9448548127 ಅಥವಾ ಈ ಮೈಲ್ ವಿಳಾಸ: bantwalnews@gmail.com

 

 

 

B Thammayya

ತುಳು ಭಾಷೆ ಮಾತಾಡೋದು ಸುಲಭ. ಲಿಪಿ ವಿಚಾರ ಬಂದಾಗ ಹಿಂದೇಟು ಹಾಕುತ್ತೇವೆ. ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಬಿ.ಸಿ.ರೋಡಿನ ಬಿ.ತಮ್ಮಯ್ಯ, ತುಳು ಲಿಪಿಯನ್ನು ಸರಳವಾಗಿಸುತ್ತಾರೆ. ಹಿಂದಿರುಗಿ ನೋಡಿದಾಗ ಸಹಿತ ಹಲವು ಪುಸ್ತಕಗಳನ್ನು ಬರೆದಿರುವ ಅವರು ಕಸಾಪ ತಾಲೂಕು ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Recent Posts