ಮೋಜಿಗಾಗಿ ಮಾದಕ ವಸ್ತುಗಳನ್ನು ಸೇವಿಸುವವರು ಯೌವನದಲ್ಲಿ ಅದರ ಸಂಪೂರ್ಣ ದಾಸರಾಗುವ ಮೂಲಕ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಈ ಸಾಮಾಜಿಕ ಪಿಡುಗು ಪ್ರಸ್ತುತ ಸಮಾಜದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವುದು ಖೇದಕರ ಎಂದು ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಂಗಾಧರ ಆಳ್ವ ಹೇಳಿದರು.
ಕ್ರೆಸೆಂಟ್ ಯಂಗ್ ಮೆನ್ಸ್ ಅಸೋಸಿಯೇಶನ್ ತುಂಬೆ ’ಮಾದಕ ಬದುಕು ಭಯಾನಕ’ ಎಂಬ ಘೋಷಣೆಯೊಂದಿಗೆ ತುಂಬೆ ಗ್ರಾಮದಾದ್ಯಂತ ಡಿ. 31ರಿಂದ ಜ. 8ರವರೆಗೆ ಹಮ್ಮಿಕೊಂಡಿರುವ ಮಾದಕ ವ್ಯಸನದ ಕುರಿತು ಜಾಗೃತಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಶನಿವಾರ ಬೆಳಗ್ಗೆ ತುಂಬೆ ಜಂಕ್ಷನ್‌ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದ ಎಲ್ಲಡೆ ಬೇರು ಬಿಟ್ಟಿರುವ ಈ ಸಾಮಾಜಿಕ ಪಿಡುಗಿನ ಹಿಂದೆ ದೊಡ್ಡ ಜಾಲವೇ ಕಾರ್ಯಾಚರಿಸುತ್ತಿದ್ದು ಅದರ ವಿರುದ್ಧ ನಾವು ಧ್ವನಿ ಎತ್ತದಿದ್ದರೆ ಮುಂದೊಂದು ದಿನ ಅದು ನಮ್ಮ ಮನೆಗೂ ಬರಬಹುದು ಎಂದು ಅವರು ಹೇಳಿದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ತುಂಬೆ ಕುನಿಲ್ ಇಲ್ಮ್ ಸ್ಕೂಲ್ ಬಳಿಯಿಂದ ತುಂಬೆ ಜಂಕ್ಷನ್‌ವರೆಗೆ ತುಂಬೆ ಪದವಿ ಪೂರ್ವ ಕಾಲೇಜು, ಸರಕಾರಿ ಶಾಲೆಯ ವಿದ್ಯಾರ್ಥಿಗಳು, ಊರಿನ ನಾಗರಿಕರಿಂದ ಆಕರ್ಷಕ ಜಾಥ ನಡೆಯಿತು. ಬಳಿಕ ವೇದಿಕೆಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವಿದ್ಯಾರ್ಥಿಗಳು ಮಾದಕ ವ್ಯಸನದ ದುಷ್ಪರಿಣಾಮವನ್ನು ಬಿಂಭಿಸುವ ಬೀದಿ ನಾಟಕವನ್ನು ಪ್ರದರ್ಶಿಸಿದರು.
ಬಂಟ್ವಾಳ ಗ್ರಾಮಾಂತರ ಠಾಣೆ ಉಪ ನಿರೀಕ್ಷಕ ಎ.ಕೆ.ರಕ್ಷಿತ್ ಗೌಡ ಮಾದಕ ಬದುಕು ಭಯಾನಕ’ ಅಭಿಯಾನದ ವಿಶೇಷ ಲೋಗೋಕ್ಕೆ ಸಹಿ ಹಾಕುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಮಾದಕ ಬದುಕು ಭಯಾನಕ ಅಭಿಯಾನ ಸಂಚಾಲಕ ಮುಹಮ್ಮದ್ ಇರ್ಫಾನ್ ಟಿ. ಅಧ್ಯಕ್ಷತೆ ವಹಿಸಿದ್ದರು. ತುಂಬೆ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಫೈಝಿ ಕಾರ್ಯಕ್ರಮದಲ್ಲಿ ಪ್ರತಿಜ್ಞೆ ಬೋಧಿಸಿದರು. ಮಂಗಳೂರು ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಮನೋ ವೈದ್ಯಕೀಯ ವಿಭಾಗದ ಹಿರಿಯ ವೈದ್ಯ ಡಾ. ಅರುಣ್ ಭಟ್ ಪಿ. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ತುಂಬೆ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವೆಂಕಟೇಶ್ ಕಾರಂತ, ತುಂಬೆ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ತುಂಬೆ ದ.ಕ.ಜಿ.ಪಂ.ಮಾ.ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯಿನಿ ಯಮುನಾ, ಕುನಿಲ್ ಇಲ್ಮ್ ಸ್ಕೂಲ್‌ನ ಮುಖ್ಯ ಶಿಕ್ಷಕಿ ಸಲೀನ ಎಂ.ಆರ್., ತುಂಬೆ ಗ್ರಾಮ ಪಂಚಾಯತ್ ಸದಸ್ಯ ಝಹೂರ್ ಅಹ್ಮದ್, ತುಂಬೆ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಅಬ್ದುಲ್ಲ ಉಪಸ್ಥಿತರಿದ್ದರು.
ಇಮ್ತಿಯಾಝ್ ಶಾ ಸ್ವಾಗತಿಸಿದರು. ಇಮ್ತಿಯಾಝ್ ಎ.ಕೆ. ಕಾರ್ಯಕ್ರಮ ನಿರೂಪಿಸಿದರು.