ಬಂಟ್ವಾಳ ತಾಲೂಕು ಕಚೇರಿ ಸಿಬ್ಬಂದಿ ನವ್ಯಾ ಎಸ್. ರಾವ್ ತಂಡದ ಸದಸ್ಯೆ
ಬಂಟ್ವಾಳ ತಾಲೂಕು ಕಚೇರಿಯಲ್ಲಿ ಗ್ರಾಮಕರಣಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನವ್ಯಾ ಎಸ್. ರಾವ್ ಅವರು ಶ್ರೀ ಶಂಕರ ಚಾನೆಲ್ ಪ್ರಸ್ತುತಪಡಿಸುವ ಭಜನ್ ಸಾಮ್ರಾಟ್ ಸೀನಿಯರ್ಸ್ 4 ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಭಾಗವಹಿಸಿದ್ದಾರೆ. ಮಂಗಳೂರಿನ ಸಪ್ತಸ್ವರ ಬಳಗ ಅಂತಿಮ ಸುತ್ತಿಗೆ ತೇರ್ಗಡೆ ಹೊಂದಿದ್ದು ಅದರ ಸದಸ್ಯೆಯಾಗಿ ನವ್ಯಾ ಪಾಲ್ಗೊಂಡರು.
ಡಿಸೆಂಬರ್ 24ರಂದು ಚೆನ್ನೈನ ಶ್ರೀಮಠ ವೆಂಕಟ ಸುಬ್ಬರಾವ್ ಆಡಿಟೋರಿಯಂನಲ್ಲಿ ತಂಡ ಪಾಲ್ಗೊಂಡಿತ್ತು.
ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರದಲ್ಲಿ ನಡೆದ ಮೊದಲ ಸುತ್ತಿನಲ್ಲಿ ತೇರ್ಗಡೆ ಹೊಂದಿ, ಸೆಮಿಫೈನಲ್ಸ್ ಹಂತಕ್ಕೇರಿದ ಈ ತಂಡ ವಿವಿಧ ಹಂತಗಳಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ.ತಾಲೂಕು ಕಚೇರಿಯ ಸಿಬ್ಬಂದಿ ನವ್ಯ ಎಸ್ ಎನ್ ರಾವ್ ಒಂದು ವರ್ಷದಿಂದ ತಾಲೂಕು ಕಚೇರಿಯಲ್ಲಿ ಗ್ರಾಮಕರಣಿಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಮಂಗಳೂರಿನ ಕುಳಾಯಿಯಲ್ಲಿರುವ ನಾಗರಾಜ್ ಮತ್ತು ಪುಷ್ಪಲತಾ ದಂಪತಿ ಪುತ್ರಿಯಾಗಿರುವ ನವ್ಯಾ, ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತವನ್ನು ಪ್ರವೃತ್ತಿಯಾಗಿ ಮುಂದುವರಿಸುವ ಹಂಬಲ ಹೊಂದಿದ್ದಾರೆ. ಸಪ್ತಸ್ವರ ತಂಡದ ವೈಷ್ಣವಿ ಮಯ್ಯ ಅವರಲ್ಲಿ ಸಂಗೀತಾಭ್ಯಾಸ ಮಾಡುತ್ತಿರುವ ಇವರು, ಕ್ರಿಸ್ಟೋಫರ್ ನಿನಾಸಂ ಇವರ ನಿರ್ದೇಶನದಲ್ಲಿನ ನಾಟಕಗಳಲ್ಲಿ ಪಾತ್ರ ವಹಿಸಿರುತ್ತಾರೆ.
ಸಪ್ತಸ್ವರ ಬಳಗದ ಸದಸ್ಯರಾದ ವೈಷ್ಣವಿ ಮಯ್ಯ, ರಜನಿ ಚಿಪ್ಳೂನ್ಕರ್ , ಸುಕನ್ಯಾ ಆಚಾರ್ಯ ಹಾಗೂ ಪಲ್ಲವಿ ಭಟ್ ಮಂಗಳೂರಿನವರಾಗಿದ್ದು ಕರ್ನಾಟಕ ಶಾಸ್ರ್ತೀಯ ಸಂಗೀತದಲ್ಲಿ ವಿದ್ವತ್ ಹಾಗೂ ಸೀನಿಯರ್ ಕಲಿಯುತ್ತಿದ್ದಾರೆ. ಹಾರ್ಮೋನಿಮಂನಲ್ಲಿ ಕುಳಾಯಿಯ ವಿಜಯ್ ಆಚಾರ್ಯ ಹಾಗೂ ತಬಲದಲ್ಲಿ ಹಳೆಯಂಗಡಿಯ ಪ್ರದೀಪ್ ಆಚಾರ್ಯ ತಂಡವನ್ನು ಫೈನಲ್ ಹಂತ ತಲುಪಿಸುವಲ್ಲಿ ಸಹಕರಿಸಿರುತ್ತಾರೆ.