ಬಂಟ್ವಾಳನ್ಯೂಸ್ ವರದಿ
ಬಸ್‌ಬೇ ಹಾಗೂ ರಸ್ತೆ ಅಗಲೀಕರಣಕ್ಕಾಗಿ ಬಿ.ಸಿ.ರೋಡ್ ಕೈಕಂಬದ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ತೆಗೆದಿರುವ ಹೊಂಡದಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ಕೈಕಂಬದ ಅಂಗಡಿ ಮಾಲಕರು, ಆಟೊ ಚಾಲಕರ ಸಹಿತ ಸಾರ್ವಜನಿಕರು ಮಂಗಳವಾರ ಬೆಳಗ್ಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಬಂಟ್ವಾಳ ಬ್ಯಾರಿ ಫೌಂಡೇಶನ್ ಅಧ್ಯಕ್ಷ ರಹೀಂ ಪಿ., ಉಪಾಧ್ಯಕ್ಷ ಕೆ.ಎಚ್.ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ, ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್. ಮಾತನಾಡಿದರು.
ಬಸ್‌ಬೇ ಹಾಗೂ ರಸ್ತೆ ಅಗಲೀಕರಣಕ್ಕಾಗಿ ಜಿಲ್ಲಾಧಿಕಾರಿ ಡಾ. ಜಗದೀಶ್‌ರ ಆದೇಶದ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಬಂಟ್ವಾಳ ಟ್ರಾಫಿಕ್ ಪೊಲೀಸರು ಕೈಕಂಬ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ಆಳದ ಹೊಂಡ ನಿರ್ಮಿಸಿದ್ದಾರೆ. ತಿಂಗಳು ಕಳೆದರೂ ಹೊಂಡಕ್ಕೆ ಜಲ್ಲಿ, ಡಾಂಬರು ಹಾಕದೆ ಕಾಮಗಾರಿಯನ್ನು ಅರ್ಧದಲ್ಲೇ ನಿಲ್ಲಿಸಿರುವುದರಿಂದ ಹೊಂಡ ದಾಟುವ ಸಂದರ್ಭದಲ್ಲಿ ವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳು ಬಿದ್ದು ಗಾಯಗೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಅಭಿವೃದ್ಧಿ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ರಸ್ತೆ ಅಗಲೀಕರಣ ಹಾಗೂ ಬಸ್‌ಬೇ ನಿರ್ಮಾಣಕ್ಕೆ ಯಾರದ್ದೇ ವಿರೋಧವಿಲ್ಲ. ಆದರೆ ಬಸ್‌ಬೇ ಹಾಗೂ ರಸ್ತೆ ಅಗಲೀಕರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಆಳವಾದ ಹೊಂಡ ತೆಗೆದು ಕಾಮಗಾರಿ ಅರ್ಧದಲ್ಲಿ ನಿಲ್ಲಿಸಿರುವುದರಿಂದ ಕೈಕಂಬದ ಅಂಗಡಿ, ಹೊಟೇಲ್ ಮಾಲಕರು, ಆಟೊ ಚಾಲಕರು, ಪ್ರಯಾಣಿಕರು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹೊಂಡ ದಾಟುವಾಗ ಬಿದ್ದು ಗಾಯಗೊಳ್ಳುತ್ತಿರುವ ಪ್ರಕರಣಗಳು ನಿತ್ಯವೂ ಇಲ್ಲಿ ನಡೆಯುತ್ತಿದ್ದು ಈ ಬಗ್ಗೆ ಜಿಲ್ಲಾಧಿಕಾರಿ, ಬಂಟ್ವಾಳ ತಹಶೀಲ್ದಾರ್, ಪುರಸಭೆ ಹಾಗೂ ಬಂಟ್ವಾಳ ಪೊಲೀಸರಿಗೆ ಮನವಿ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಒಂದು ವಾರದೊಳಗೆ ಹೊಂಡಗಳಿಗೆ ಜಲ್ಲಿ ತುಂಬಿ ಡಾಂಬರು ಹಾಕಿ ಕಾಮಗಾರಿ ಪೂರ್ಣಗೊಳಿಸಿದ್ದರೆ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ, ಬಂಟ್ವಾಳ ತಹಶೀಲ್ದಾರ್, ಪುರಸಭೆ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಲು ಆಗಮಿಸಿದ ಬಂಟ್ವಾಳ ತಹಶೀಲ್ದಾರ್ ಪುರದಂರ ಹೆಗ್ಡೆ ಮಾತನಾಡಿ, ಇಲ್ಲಿ ಹೊಂಡ ತೆಗೆದಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದಾಗ ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಗೊಂದಲದ ವಾತಾವರಣ ನಿರ್ಮಾಣವಾಯಿತು.
ಪ್ರತಿಭಟನೆಯಲ್ಲಿ ಯೂಸುಫ್ ಆಲಡ್ಕ, ಇಸಾಕ್ ತಲಪಾಡಿ, ಮುಸ್ತಫಾ, ಪ್ರಶಾಂತ್, ರಮೇಶ್, ಇಕ್ಬಾಲ್ ನಂದರಬೆಟ್ಟು ಸಹಿತ ಆಟೋ ಚಾಲಕರು, ಅಂಗಡಿ, ಹೊಟೇಲ್ ಮಾಲಕರು ಉಪಸ್ಥಿತರಿದ್ದರು.