ಬಂಟ್ವಾಳ: ಸ್ವಚ್ಛ ಭಾರತ್ ಮಿಷನ್ ನಡಿ ಬಂಟ್ವಾಳ ಪುರಸಭೆ ನಡೆಸುತ್ತಿರುವ 51 ನೇ ವಾರದ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಬಿ.ಸಿ.ರೋಡಿನಲ್ಲಿ ಸ್ವಚ್ಛತಾ ಡ್ರೈವ್ ಕಾರ್ಯಕ್ರಮ ಗುರುವಾರ ತಾಲೂಕು ಕಚೇರಿ ಎದುರು ನಡೆಯಿತು.
ಈ ಸಂದರ್ಭ ಮಾತನಾಡಿದ ಬಂಟ್ವಾಳ ಪುರಸಭೆಯ ಸ್ವಚ್ಛತೆಯ ರಾಯಭಾರಿ ಪ್ರೊ. ತುಕಾರಾಮ ಪೂಜಾರಿ, ಸ್ವಚ್ಛತೆ ಎನ್ನುವುದು ಒಂದು ದಿನದ ಬಿರುಗಾಳಿಯಾಗುವ ಬದಲು ನಿತ್ಯ ನಿರಂತರ ಸುರಿಯುವ ಮುಂಗಾರು ಮಳೆಯಾಗಬೇಕು ಎಂದರು.
ಪುರಸಭೆಯ ಅಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ ನಿರ್ಮಲ ಬಂಟ್ವಾಳ ಯೋಜನೆಯಡಿ ಬಂಟ್ವಾಳ ಪುರಸಭೆ ನಿರಂತರವಾಗಿ ಸ್ವಚತಾ ಕಾರ್ಯವನ್ನು ನಡೆಸಿಕೊಂಡು ಬರುತ್ತಿದೆ. ಹಲವಾರು ಸಂಘಟನೆಗಳು ಈ ಕಾರ್ಯಕ್ಕೆ ಸಹಕಾರ ನೀಡಿ ಪ್ರೋತ್ಸಾಹಿಸಿದೆ ಎಂದರು. ಪುರಸಭಾ ಸದಸ್ಯರಾದ ಇಕ್ಬಾಲ್ ಗೂಡಿನಬಳಿ ಹಾಗೂ ಸುಗುಣ ಕಿಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ಸ್ವಾಗತಿಸಿ, ಮುಖ್ಯಾಧಿಕಾರಿ ಸುಧಾಕರ ಎಂ.ಎಚ್ ಪ್ರಸ್ತಾವಿಸಿದರು. ಸಮುದಾಯ ಅಧಿಕಾರಿ ಮತ್ತಡಿ ವಂದಿಸಿದರು. ರಾಜೀವ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು. ಆರೋಗ್ಯಾಧಿಕಾರಿ ರತ್ನಪ್ರಸಾದ್ ಸಹಕರಿಸಿದರು. ಈ ಸಂದರ್ಭ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗೂಡಿನಬಳಿ ವಾರ್ಡ್‌ನ್ನು ಬಯಲು ಶೌಚ ಮುಕ್ತ ವಾರ್ಡನ್ನಾಗಿ ಗುರುತಿಸುವಲ್ಲಿ ಶ್ರಮಿಸಿದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ತಾಲೂಕು ಕಚೇರಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.