ವಿಶೇಷ ವರದಿ

ಮೃತ್ಯುಸ್ವರೂಪಿಯಾದ ಬಿ.ಸಿ.ರೋಡ್ ಫ್ಲೈಓವರ್

ಬಿ.ಸಿ.ರೋಡ್ ಫ್ಲೈಓವರ್ ನಿರ್ಮಾಣ ಸಂದರ್ಭ ಯಾರೂ ಜನರಿಗೆ ಇದು ಬೇಕೇ ಎಂದು ಕೇಳಲಿಲ್ಲ. ಕಟ್ಟಿಯೇಬಿಟ್ಟರು. ಇದೀಗ ಫ್ಲೈಓವರ್ ಕೂಡ ಮೃತ್ಯುಸ್ವರೂಪಿಯಾಗಿದೆ.

ಕೆಲವು ವರ್ಷಗಳ ಹಿಂದೆ ಇದ್ದ ಬಿ.ಸಿ..ರೋಡಿಗೂ ಈಗಿನ ಬಿ.ಸಿ.ರೋಡಿಗೂ ವ್ಯತ್ಯಾಸ ಇದೆ ಎಂದಾದರೆ ಅದು ಬದಲಾವಣೆ ಸಹಜ ರೂಪ ಎಂದುಕೊಳ್ಳಬಹುದು. ಆದರೆ ಬಿ.ಸಿ.ರೋಡಿನ ಜನರನ್ನು ಕೇಳದೆಯೇ ಹಲವು ಕೆಲಸಗಳು ಇಲ್ಲಿ ಆಗಿವೆ. ಎದ್ದು ಕಾಣುವುದು ಫ್ಲೈಓವರ್.

ಆದರೆ ಈ ಫ್ಲೈಓವರ್ ಕಟ್ಟುವಾಗ ಆರಂಭದಲ್ಲೇ ವಿಘ್ನ ಬಂದೊದಗಿತ್ತು. ನಿರ್ಮಾಣ ಹಂತದಲ್ಲಿರುವಾಗಲೇ ಕೆಲ ರಚನೆಗಳು ಕುಸಿದಿತ್ತು. ಹಾಗೂ ಹೀಗೂ ಫ್ಲೈಓವರ್ ಕಟ್ಟಿಯಾಯಿತು. ಆದರೆ ಯಾವುದೇ ಸುರಕ್ಷತಾ ಕ್ರಮಗಳೂ ಇಲ್ಲಿ ಅಳವಡಿಕೆ ಆಗಲಿಲ್ಲ. ಜೋರಾಗಿ ಮಳೆ ಬಂದರೆ ಫ್ಲೈಓವರ್ ನಲ್ಲಿದ್ದ ನೀರು ಕೆಳಗೆ ಪ್ರೋಕ್ಷಣೆ ಆಗುತ್ತದೆ.

ರಾತ್ರಿ ಪ್ರಯಾಣವನ್ನೂ ಘನಘೋರ.

ಫ್ಲೈಓವರ್ ನಿರ್ಮಾಣವೇ ವಿಚಿತ್ರ. ಹೆಬ್ಬಾವಿನಂತೆ ಬಳಸಿಕೊಂಡು ಕಟ್ಟಲಾದ ಫ್ಲೈಓವರ್ ನೇರವೇ ಇಲ್ಲ. ಯಾರನನನ್ನು ಮೆಚ್ಚಿಸಲು ಹೀಗೆ ಮಾಡಿದರೋ ದೇವರೇ ಬಲ್ಲ!

ಬಿ.ಸಿ.ರೋಡಿನ ಬ್ರಹ್ಮಶ್ರೀ ವೃತ್ತದ ಬಳಿಯಿಂದ ಮಂಗಳೂರಿಗೆ ಸಾಗುವಾಗ ಫ್ಲೈಓವರ್ ಹತ್ತುವ ಜಾಗ ಮೊದಲ ಅಪಘಾತ ವಲಯ. ಇನ್ನೊಂದು ಅದು ಇಳಿಯುವ ಜಾಗ. ಅಲ್ಲೇ ಮುಂದೆ ಡಿವೈಡರ್ ಗಳನ್ನು ತುಂಡು ಮಾಡಿ ವಾಹನಗಳನ್ನು ತಿರುಗಿಸಲು ವ್ಯವಸ್ಥೆ ಮಾಡಲಾಗಿದೆ. ಇದೊಂದು ದೊಡ್ಡ ಡೇಂಜರ್ ಝೋನ್.

ಹೀಗಂದು ನಡೆದಾಡುವ ಜನಸಾಮಾನ್ಯರು, ಸಾರ್ವಜನಿಕರು ಹೇಳುತ್ತಲೇ ಇದ್ದರೂ ಫ್ಲೈಓವರ್ ನಿರ್ಮಾಣದ ಬಳಿಕ ಅದರ ಮೇಲೆ ಹಲವು ಪ್ರಯೋಗಗಳೂ ನಡೆದವು. ಒಂದು ಹಂತದಲ್ಲ ಟ್ರಾಫಿಕ್ ಸುಗಮವಾಗಲು ಇಲ್ಲಿ ದ್ವಿಮುಖ ಸಂಚಾರ ಏರ್ಪಡಿಸಿದರೆ ಹೇಗೆ ಎಂಬ ಆಲೋಚನೆಯೂ ಅಧಿಕಾರಿಗಳಿಗೆ ಮೂಡಿತ್ತು. ಸುದೈವವಶಾತ್ ಅದು ಜಾರಿಯಾಗಲಿಲ್ಲ.

ಫ್ಲೈಓವರ್ ನಲ್ಲಿ ಸಾಗುವ ವಾಹನಗಳ ವೇಗಕ್ಕೆ ಹೇಗೂ ಮಿತಿ ಇಲ್ಲ. ಫ್ಲೈಓವರೂ ಸರಿ ಇಲ್ಲ. ಇಂಥ ವಕ್ರ ಫ್ಲೈ ಓವರ್ ನಲ್ಲೇ ರಾತ್ರಿ ಓಡಾಡುವ ದ್ವಿಚಕ್ರವಾಹನ ಸವಾರರ ಹಿಂದೆ ಘನ ವಾಹನವೇನಾದರೂ ಬಂದರೆ ಬದಿಗೆ ಸರಿಯಲೂ ಕಾಣಿಸುವುದಿಲ್ಲ.

ಇಂಥದ್ದೊಂದು ಸಂದರ್ಭ ಸೋಮವಾರ ರಾತ್ರಿ ಫ್ಲೈಓವರ್ ನಲ್ಲಿ ಬೈಕಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿ ಗಲಿಬಿಲಿಗೊಂಡೋ ಹಿಂಬದಿ ವಾಹನದ ಪ್ರಖರ ಲೈಟಿಗೆ ಎದುರೇನಿದೆ ಎಂದು ಕಾಣಿಸದೆಯೋ ಫ್ಲೈಓವರ್ ನಿಂದಲೇ ಉರುಳಿ ಬಿದ್ದು ಸಾವನ್ನಪ್ಪಿದ್ದಾರೆ.

ಪಾಣೆಮಂಗಳೂರು ಸಮೀಪ ಬೋಳಂಗಡಿ ನಿವಾಸಿ ವರದೇಶ್ (35) ನಿಯಂತ್ರಣ ತಪ್ಪಿ ಕೆಳಕ್ಕುರುಳಿ ತೀವ್ರ ಗಾಯಗೊಂಡಿದ್ದರು. ಕೂಡಲೇ ಅಲ್ಲಿದ್ದ ಜನರು ಒಟ್ಟಾಗಿ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದರು. ಆದರೆ ಬೆಳಗಿನ ಜಾವ ವರದೇಶ್ ಅಸು ನೀಗಿದರು . ವರದೇಶ್ ವೃತ್ತಿಯಲ್ಲಿ ಇಲೆಕ್ಟ್ರೀಶಿಯನ್ ಆಗಿದ್ದು, ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ತಂದೆ ಮಾರಪ್ಪ ಪೂಜಾರಿ ನಿಧನದ ಹಿನ್ನೆಲೆಯಲ್ಲಿ ಕಳೆದ ವಾರವಷ್ಟೇ ಊರಿಗೆ ಬಂದಿದ್ದರು.

ವರದೇಶ್ ಸಾವಿಗೆ ಏನು ಕಾರಣ? ಯಾರನ್ನು ಕೇಳೋಣ, ಫ್ಲೈಓವರ್ ಕಟ್ಟಿದವರನ್ನೋ, ಫ್ಲೈಓವರ್ ವಕ್ರವಾಗಿ ನಿರ್ಮಾಣವಾಗಲು ಕಾರಣರಾದವರನ್ನೋ, ವ್ಯವಸ್ಥೆಯನ್ನೋ, ಜನರೇ ಪ್ರಶ್ನಿಸಬೇಕು.

ಜನಾಭಿಪ್ರಾಯ ಸಂಗ್ರಹಿಸದೆ ನಿರ್ಮಾಣಗೊಂಡ ಬಿ.ಸಿ.ರೋಡ್ ಫ್ಲೈ ಓವರ್ ಈಗ ಜನರ ಸಾವಿಗೂ ಕಾರಣವಾಗುತ್ತಿದೆ ಎಂಬುದಂತೂ ಆಘಾತಕಾರಿ ವಿಷಯ.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts