ವಿಟ್ಲ: ಎತ್ತಿನಹೊಳೆ ಯೋಜನೆ ಕರಾವಳಿಯನ್ನು ಬತ್ತಿಸುವ ಯೋಜನೆ, ಸಾಧ್ಯವಾದರೆ ಸಮುದ್ರದ ನೀರನ್ನು ಶುದ್ಧೀಕರಿಸಿ ತೆಗೆದುಕೊಂಡು ಹೋಗುವ ಯೋಜನೆಯನ್ನು ಸರಕಾರ ಮಾಡಲಿ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀದತ್ತ ಜಯಂತ್ಯುತ್ಸವ, ಶ್ರೀದತ್ತ ಮಹಾಯಾಗ ಸಪ್ತಾಹ ಸಮಾಪ್ತಿ ಕಾರ್ಯಕ್ರಮದಲ್ಲಿ ಕಿರು ಹೊತ್ತಗೆ ಬಿಡುಗಡೆಗೊಳಿಸಿ ಹಾಗೂ ಬೋಳಾರ ನಾರಾಯಣ ಶೆಟ್ಟಿ 16ನೇ ವರ್ಷದ ಪ್ರಶಸ್ತಿಯನ್ನು ಖ್ಯಾತ ಯಕ್ಷಗಾನ ಕಲಾವಿದ ಶೀನಪ್ಪ ರೈ ಸಂಪಾಜೆ ಅವರಿಗೆ ಪ್ರಧಾನ ಮಾಡಿದ ಬಳಿಕ ಆಶೀರ್ವಚನ ನೀಡಿದರು.
ಭಗವಾನ್ ದತ್ತಾತ್ರೇಯರು ಆತ್ಮನಿಷ್ಠ ಸಂಸ್ಕೃತಿಯನ್ನು ಸಮಾಜಕ್ಕೆ ನೀಡಿದ್ದಾರೆ. ಭಾರತ ದೇಶದ ಮಹತ್ವ ಆಧ್ಯಾತ್ಮ ತತ್ವದಲ್ಲಿರುವುದರಿಂದ ದೇಶಕ್ಕೆ ವಿಶೇಷ ಶಕ್ತಿ ಇದೆ. ತತ್ವಶಾಸ್ತ್ರವನ್ನು ತಿಳಿಸಿದಾತ ದತ್ತಾತ್ರೇಯ ಎಂದು ತಿಳಿಸಿದರು.
ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಹಾದಿ ತಪ್ಪು ಯುವ ಶಕ್ತಿಯನ್ನು ಸರಿ ದಾರಿಗೆ ತರುವಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಪಾತ್ರ ಮಹತ್ವದ್ದಾಗಿದೆ. ಗುರುಸೇವೆಯಲ್ಲಿ ತೊಡಗಿಕೊಳ್ಳುವುದರಿಂದ ಜೀವನದಲ್ಲಿ ಮಾಡಿದ ಪಾಪ ಕಾರ್ಯವನ್ನು ಕಳೆಯಬಹುದಾಗಿದೆ. ಆಧ್ಯಾತ್ಮದ ಧೀಶಕ್ತಿ ಮನೆ ಮನದಲ್ಲಿ ಬೆಳಗಿದಾಗ ನಮ್ಮ ಸಂಸ್ಕೃತಿ ಮುಂದಿನ ಪೀಳಿಗೆಗೆ ತಲುಪುತ್ತದೆ. ನಮ್ಮದೆಂಬ ಭಾವನೆ ಪ್ರತಿಯೊಬ್ಬನಲ್ಲಿ ಮೂಡಿದಾಗ ಸಮಾಜದ ಏಳಿಗೆ ಸಾಧ್ಯ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ ಶೇಣವ, ಮುಂಬೈ ಗುರುದೇವ ಸೇವಾ ಬಳಗದ ಅಧ್ಯಕ್ಷ ಕೃಷ್ಣ ಎಲ್ ಶೆಟ್ಟಿ, ಮುಂಬಯಿ ನೇರೋಲ್ ಅಯ್ಯಪ್ಪ ದೇವಸ್ಥಾನ ಅಧ್ಯಕ್ಷ ಕಿಶೋರ್ ಕುಮಾರ್ ಎಂ ಶೆಟ್ಟಿ, ದೋಹಾ ಕತಾರ್‌ನ ಬೋಳಾರ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.
ಮಂಗಳೂರು ಬೋಳಾರ ನಾರಾಯಣ ಶೆಟ್ಟಿ ಪ್ರತಿಷ್ಠಾನದ ವತಿಯಿಂದ ದಿ.ಬೋಳಾರ ನಾರಾಯಣ ಶೆಟ್ಟಿ ಜನ್ಮ ಶತಮಾನೋತ್ಸವದ ಸವಿನೆನಪಿನಲ್ಲಿ ಬೋಳಾರ ನಾರಾಯಣ ಶೆಟ್ಟಿ 16ನೇ ವರ್ಷದ ಪ್ರಶಸ್ತಿಯನ್ನು ಖ್ಯಾತಯಕ್ಷಗಾನ ಕಲಾವಿದ ಶೀನಪ್ಪ ರೈ ಸಂಪಾಜೆ ಅವರಿಗೆ ಪ್ರಧಾನ ಮಾಡಲಾಯಿತು.
ಬೆಳಿಗ್ಗೆ ಶ್ರೀ ದತ್ತಮಾಲಾಧಾರಿಗಳಿಂದ ಕನ್ಯಾನ ಮುಗುಳಿ ರಸ್ತೆಯ ಮುಖ್ಯದ್ವಾರದಿಂದಒಡಿಯೂರುಕ್ಷೇತ್ರದವರೆಗೆ ನಾಮ ಸಂಕೀರ್ತನಾಯಾತ್ರೆ ನಡೆಯಿತು. ಶ್ರೀ ಗುರುಚರಿತ್ರೆ-ವೇದ ಪಾರಾಯಣ ಸಮಾಪ್ತಿ, ಶ್ರೀ ದತ್ತಮಹಾಯಾಗದ ಪೂರ್ಣಾಹುತಿ, ಕಲ್ಪೋಕ್ತ ಪೂಜೆ, ಮಹಾಪೂಜೆ, ಶ್ರೀ ದತ್ತ ಸಂಪ್ರದಾಯದಂತೆ ಮಧುಕರೀ, ಮಂತ್ರಾಕ್ಷತೆ, ಸಂಜೆ ರಂಗಪೂಜೆ, ವಿಶೇಷ ಬೆಳ್ಳಿ ರಥೋತ್ಸವ, ಉಯ್ಯಾಲೆ ಸೇವೆ ನಡೆಯಿತು.