19ರಂದು ಬಂಟ್ವಾಳ ತಾಲೂಕು ಮಟ್ಟದ ಕರಾವಳಿ ಉತ್ಸವ 12ರಂದು ಬೆಳಗ್ಗೆ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಭವನದಲ್ಲಿ ಮತ್ತೊಂದು ಪೂರ್ವಸಿದ್ಧತಾ ಸಭೆ
ಬಂಟ್ವಾಳ: ತಾಲೂಕು ಮಟ್ಟದ ಕರಾವಳಿ ಉತ್ಸವ ನಡೆಸುವ ಹಿನ್ನೆಲೆಯಲ್ಲಿ ದಿನ ನಿಗದಿಪಡಿಸಲು ಹಾಗೂ ಸಾರ್ವಜನಿಕರ ಗಮನ ಸೆಳೆಯುವಂತೆ ಉತ್ಸವ ನಡೆಸಲು ಬಂಟ್ವಾಳ ತಾಲೂಕು ಮಟ್ಟದ ಸಭೆಯೊಂದು ಶುಕ್ರವಾರ ಬಿ.ಸಿ.ರೋಡಿನಲ್ಲಿ ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಿತು.
ಆದರೆ ಸಭೆಯ ಆರಂಭದಲ್ಲೇ ಜನಪ್ರತಿನಿಧಿಗಳ ಗೈರುಹಾಜರಿ ಎದ್ದುಕಂಡಿತು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಪ್ರಮುಖ ಜನಪ್ರತಿನಿಧಿಗಳು, ಅಧಿಕಾರಿಗಳು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುತ್ತಾರೆ ಎಂದು ಗುರುವಾರ ಮಾಹಿತಿಯನ್ನೂ ನೀಡಲಾಗಿತ್ತು.ಶುಕ್ರವಾರ ಬೆಳಗ್ಗೆ ನಡೆದದ್ದೇ ಬೇರೆ. ಜನಪ್ರತಿನಿಧಿಗಳು ಹಾಗೂ ಪೊಲೀಸ್ ಸೇರಿದಂತೆ ಪ್ರಮುಖ ಇಲಾಖೆ ಅಧಿಕಾರಿಗಳು, ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿಗಳು ಇಲ್ಲದೆ ಮಹತ್ವದ ನಿರ್ಧಾರ ತೆಗೆದುಕೊಳ್ಳೋದು ಹೇಗೆ ಎಂಬುದೇ ಸಹಾಯಕ ಕಮೀಷನರ್ ಸಹಿತ ವೇದಿಕೆಯಲ್ಲಿದ್ದ ಅಧಿಕಾರಿಗಳಿಗೆ ಚಿಂತೆಯಾಯಿತು.
ಆದರೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯ ದಿನಾಂಕ, ಜಾಗದ ಕುರಿತು ತಮ್ಮ ಅಭಿಪ್ರಾಯ ತಿಳಿಸಿದರು.
ಕೊನೇ ಹಂತದಲ್ಲಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ ಸಭೆಗೆ ಆಗಮಿಸಿದರು. ಆದರೆ ಇತರ ಜನಪ್ರತಿನಿಧಿಗಳು ಹಾಗೂ ಪ್ರಮುಖರು ಬಾರದೇ ಇದ್ದ ಕಾರಣ ಸೋಮವಾರ ಮತ್ತೊಂದು ಸಭೆ ಕರೆಯುವ ಬಗ್ಗೆ ನಿರ್ಧರಿಸಲಾಯಿತು. ಹಾಗೂ 19ರಂದು ಕರಾವಳಿ ಉತ್ಸವ ನಡೆಸುವುದು ಎಂದು ತೀರ್ಮಾನಿಸಲಾಯಿತು.
ಮತ್ತೊಂದು ಪೂರ್ವಸಿದ್ಧತಾ ಸಭೆ
ಸಭೆ ಮುಗಿದ ಬಳಿಕ ತಾಲೂಕು ಕಚೇರಿಯಿಂದ ಪತ್ರಿಕಾ ಪ್ರಕಟಣೆಯೊಂದನ್ನು ತಹಸೀಲ್ದಾರ್ ಹೊರಡಿಸಿದ್ದು, ಇದರಲ್ಲಿ ಡಿಸೆಂಬರ್ 19ರಂದು ಕರಾವಳಿ ಉತ್ಸವ ತಾಲೂಕು ಮಟ್ಟದಲ್ಲಿ ನಡೆಯಲಿದ್ದು, ಪೂರ್ವಸಿದ್ಧತಾ ಸಭೆ ಸಹಾಯಕ ಕಮೀಷನರ್ ನೇತೃತ್ವದಲ್ಲಿ 12ರಂದು ಬೆಳಗ್ಗೆ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಭವನದಲ್ಲಿ ನಡೆಯಲಿದೆ ಎಂದು ತಿಳಿಸಿದೆ.
ಎಲ್ಲವೂ ಇರಲಿ
ಮಂಗಳೂರಿನಲ್ಲಿ ಡಿ.21ರಂದು ಕರಾವಳಿ ಉತ್ಸವ ಆರಂಭಗೊಳ್ಳಬೇಕು. ಹೀಗಾಗಿ ಅದಕ್ಕೂ ಮುನ್ನ ತಾಲೂಕು ಮಟ್ಟದ ಕರಾವಳಿ ಉತ್ಸವ ಆಚರಿಸಬೇಕು. ಅದಕ್ಕಾಗಿ ಡಿ.19ರಂದು ಉತ್ಸವ ನಡೆಸೋಣ ಎಂದು ಸಹಾಯಕ ಕಮೀಷನರ್ ಹೇಳಿದರು. ಮೆರವಣಿಗೆ, ಅದ್ದೂರಿ ಸಭಾ ಕಾರ್ಯಕ್ರಮ, ರಾಷ್ಟ್ರ ಮಟ್ಟದ ಸಾಧಕರಿಗೆ ಸನ್ಮಾನ, ವಸ್ತು ಪ್ರದರ್ಶನ ಎಲ್ಲವನ್ನೂ ಏರ್ಪಡಿಸಬೇಕು ಎಂದು ಹೇಳಿದರು.
ಈ ಎಲ್ಲ ಕಾರ್ಯಕ್ರಮವನ್ನು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆಯೊಳಗೆ ಪೂರ್ಣಗೊಳಿಸಬೇಕೆಂದು ಅಭಿಪ್ರಾಯಪಟ್ಟರು.
ಉತ್ಸವ ಆಚರಣೆಯ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸುವುದು ಮತ್ತು ಇದಕ್ಕೆ ಬೇಕಾದಷ್ಟು ಆಯವ್ಯಯವನ್ನು ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಶಿಕ್ಷಣಾಧಿಕಾರಿ ಲೊಕೇಶ್ ಅವರು ಮಾತನಾಡಿ ಜಿಲ್ಲೆಯು ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿರುವುದರಿಂದ ಇದನ್ನು ಉಳಿಸುವ ನಿಟ್ಟಿನಲ್ಲಿ ಕರಾವಳಿ ಉತ್ಸವದಂತಹ ಕಾರ್ಯಕ್ರಮ ಇಲ್ಲಿ ಅವಶ್ಯವಿದೆ ಎಂದು ತಿಳಿಸಿದರು. ಉತ್ಸವದ ಅಂದಾಜು ಬಜೆಟನ್ನು ತಯಾರಿಸಿ ಮತ್ತು ಸಂಪನ್ಮೂಲ ಕ್ರೋಡೀಕರಣಗೊಳಿಸುವ ರೀತಿಯನ್ನು ತಿಳಿಸಿದರೆ ಅದಕ್ಕೆ ಸರಿಯಾಗಿ ಕಾರ್ಯಕ್ರಮದ ರೂಪಿಸಬಹುವುದು ಎಂದು ಬಂಟ್ವಾಳ ಲೋಕೊಪಯೋಗಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಉಮೇಶ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು. ತಹಶಿಲ್ದಾರ್ ಪುರಂದರ ಹೆಗ್ಡೆ, ತಾಪಂ ಕಾರ್ಯನಿರ್ವಣಾಧಿಕಾರಿ ಸಿಪ್ರಿಯನ್ ಮಿರಾಂದ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.