Categories: ಅನಿಕತೆ

ಹೆಜ್ಜೆ ಮೇಲೆ ಹೆಜ್ಜೆ ಇಟ್ಟೇ ಬನ್ನಿ..

ಬದಲಾಗುವುದಕ್ಕೆ ಸ್ವಲ್ಪ ಸಮಯ ಬೇಕು.. ಸಮಯ ಬರಬೇಕಾದರೆ ಮನಸ್ಸು ಬೇಕು.

  • ಅನಿತಾ ನರೇಶ್ ಮಂಚಿ

ಬಯ್ದುಕೊಳ್ಳುತ್ತಲೇ ಮನೆಯೊಳಗಿನ ಕಸ ಗುಡಿಸಿ, ತೆಗೆದು, ಪೊರಕೆ ಸಮೇತ ಹೊರ ಬಂದ ಕನಕಾಂಗಿ ಪಕ್ಕದ ಮನೆಯ ಹೊರ ಭಾಗದಲ್ಲಿ  ಯಾರಿದ್ದಾರೆ ಎಂದು ಕಣ್ಣಾಡಿಸುತ್ತಲೇ ಅವರ ಕಾಂಪೋಂಡು ಗೋಡೆಯ ಸಮೀಪ ಬಂದು ಇನ್ನೇನು ಕಸ ಎಸೆಯಬೇಕು ಎನ್ನುವಷ್ಟರಲ್ಲಿ ಸರೋಜಮ್ಮನೂ ಕೈಯಲ್ಲಿ ಕಸ ಹಿಡಿದು ಹೊರ ಬರುವುದು ಕಾಣಿಸಿತು.

ಅಕ್ಕಪಕ್ಕದ ಮನೆಗಳಾದ ಕನಕಾಂಗಿ ಸರೋಜಮ್ಮನವರದ್ದು ಉತ್ತಮ ಭಾಂದವ್ಯ. ಅವರ ಮನೆಯ ಕಸ ಇವರಂಗಳದಲ್ಲಿ ಇವರದ್ದು ಅವರ ಕಾಂಪೋಂಡಿನ ಒಳಗೆ ಎಂದು ಅನಾದಿಕಾಲದಿಂದಲೇ ನಡೆದುಕೊಂಡು ಬಂದ ಪದ್ಧತಿಯನ್ನು ಇನ್ನೂ ಜೀವಂತವಾಗಿ ಕಾಪಿಟ್ಟ ಪರಂಪರೆ ಇವರದ್ದು. ಆದಷ್ಟೂ ಒಬ್ಬರಿಗೊಬ್ಬರು ಕಾಣದಂತೆ ಆ ಕೆಲಸವನ್ನು ಮಾಡುತಿದ್ದರಷ್ಟೇ. ಉಳಿದಂತೆ ಅವರು ಸ್ನೇಹಿತರೇ. ಅವರ ಮನೆಯ ಚಹಾ ಪುಡಿ ಇವರ ಮನೆಯ ಪಾತ್ರೆಯಲ್ಲಿ, ಇವರ ಮನೆಯ ಸಕ್ಕರೆ ಅವರ ಪಾನಕ ಲೋಟದಲ್ಲಿ… ಹೀಗೆ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಬಾಳುವವರೇ.

ಇಂದೀಗ ಎದುರು ಬದುರಾಗಿ ನಿಂತಾಗಿದೆ. ಎದುರೆದುರೇ  ಎಸೆಯಲೇನು ಅವರು ವಿಪಕ್ಷದ ಸಭಾಸದರೇ? ಇಬ್ಬರೂ ಸಿಕ್ಕಿಹಾಕಿಕೊಂಡೆವು ಎಂಬ ಭಾವವನ್ನು ಹೊಂದಿದವರಾಗಿದ್ದ ಕಾರಣ ಮಾತು ಕಸದಿಂದಲೇ ಶುರು ಆಗಿದ್ದು ಸಹಜ. ವಯಸ್ಸಿನಲ್ಲಿ ಕೊಂಚ ಹಿರಿಯವಳಾದ ಸರೋಜನೇ ಮೊದಲು ಮಾತಿನ ಬಾಣ ಬಿಟ್ಟಳು.

ರ್ರೀ..  ಕನಕಾಂಗಿ … ಇನ್ನು ಮುಂದೆ ನಮ್ಮನೆ ಕಸವನ್ನು  ಪ್ಲಾಸ್ಟಿಕ್ ಬೇರೆ, ಕೊಳೆಯುವ ವಸ್ತುಗಳು ಬೇರೆ ಅಂತೆಲ್ಲಾ ವಿಂಗಡಿಸಿ ಬೇರೆ ಬೇರೆ ಕಸದ ತೊಟ್ಟಿಗೆ ಹಾಕ್ಬೇಕಂತೆ. ನಿನ್ನೆ ಮೈಕ್ ನಲ್ಲಿ ಕೂಗಿ ಕೂಗಿ ಹೇಳ್ತಾ ಇದ್ದರು.

ಸ್ವಚ್ಛ ಭಾರತ ಅಭಿಯಾನ ಪ್ರಾರಂಭ ಆಗೋ ಮೊದಲು ನಾವೇನು ಕಸ ಗುಡಿಸ್ತಾ ಇರ್ಲಿಲ್ವಾ, ಬಟ್ಟೆ ಒಗೀತಾ ಇರ್ಲಿಲ್ವಾ? ಯಾರೋ ಒಬ್ರು ಬಂದು ಹೇಳಿದ ಮೇಲೆ ಮಾಡ್ತಾ ಇರೋದಾ..? ಕನಕಾಂಗಿ ಕೈಯಲ್ಲಿದ್ದ ಪೊರಕೆ ಜಳಪಿಸುತ್ತಲೇ ಸರೋಜನ ಕಡೆ ನೋಡಿದಳು.

ಹುಂ.. ಯಾರು ಹೇಳಿದ್ರು ನೀವು ಗುಡಿಸ್ತಾ ಇರ್ಲಿಲ್ಲ ಅಂತ.. ನಮ್ಮನೆ ಅಂಗಳದಲ್ಲಿ ಬೀಳ್ತಾ ಇದ್ದ ಕಸ ನಿಮ್ಮನೇದೇ ತಾನೇ?

ನೋಡ್ರೀ ಸುಮ್ನೆ ಕಾಲು ಕೆರ್ಕೊಂಡು ಜಗಳಕ್ಕೆ ಬಂದ್ರೆ ನಾನು ಸುಮ್ನಿರೋ ಪೈಕಿ ಅಲ್ಲ.. ನಿಮ್ಮನೆ ಮಕ್ಳು ತಿಂದ ಕಿತ್ತಳೆ ಸಿಪ್ಪೆ, ದಾಳಿಂಬೆ ಸಿಪ್ಪೆ ಬೀಳ್ತಾ ಇದ್ದಿದ್ದು ನಮ್ಮನೆ ಕಾಂಪೋಡೊಳಗೆ ಅನ್ನೋದು ಮರ್ತು ಹೋಯ್ತಾ ನಿಮ್ಗೆ

ಅಯ್ಯಾ.. ಅದ್ಯಾಕೆ ಇದ್ದದ್ದನ್ನು ಇದ್ದಂತೆ ಹೇಳಿದ್ರೆ ಈ ಕಡುಕೋಪ? ನಿಮ್ಮ ನಾಯಿ ಮರಿಗೆ ಸುಸ್ಸು ಮಾಡ್ಸೋಕೆ ನಮ್ಮನೆ ಮುಂದಿರೋ ಲೈಟ್ ಕಂಬ ಎಷ್ಟು ಸಲ ಉಪಯೋಗಿಸಿಲ್ಲ ನೀವು

ಅದೇನು ನಿಮ್ಮನೆ ಮುಂದಿದ್ದು ಬಿಟ್ರೆ ನಿಮ್ಮದೇ ಸ್ವಂತದ್ದಾ? ಸರಕಾರದ್ದು ತಾನೇ? ಸರಕಾರ ಬರೀ ನಿಮ್ದಾ? ನಮ್ಮದೂ ತಾನೇ? ಗೆಲುವಿನ ನಗೆಯಿತ್ತು ಕನಕಾಂಗಿಯ ಮುಖದಲ್ಲಿ.

ಹುಂ… ಮನೆ ಮುಂದಿರೋ ಲೈಟ್ ಕಂಬ ಹೇಗೆ ನನ್ನ ಸ್ವಂತದ್ದಲ್ಲ ನಮ್ಮೆಲ್ಲರದ್ದು ಅಂತೀವೋ ಹಾಗೇ ಮನೆ ಎದುರಿನ ರಸ್ತೆ, ಅಕ್ಕ ಪಕ್ಕದ ಬೀದಿ, ನಾವು ಓಡಾಡೋ ಜಾಗ, ಸಾರ್ವಜನಿಕ ಸ್ಥಳಗಳಾದ ಆಸ್ಪತ್ರೆ, ಬಸ್ ನಿಲ್ದಾಣ, ರೈಲು ನಿಲ್ದಾಣ, ಇಂತವನ್ನೆಲ್ಲಾ ಹೇಗೆ ನಮ್ಮದು ಅಂತ ಬಿಡು ಬೀಸಾಗಿ ಉಪಯೋಗಿಸಿಕೊಳ್ತೀವೋ ಹಾಗೆಯೇ ಸ್ವಚ್ಛವಾಗಿ ಇಟ್ಕೊಳ್ಳಿ ಅಂತ ತಾನೇ ಅಭಿಯಾನದವರು ಹೇಳ್ತಿರೋದು. ಇನ್ನು ಮುಂದೆ ನಾನಂತೂ ನಮ್ಮನೆ ಕಸವನ್ನು ನಿಮ್ಮನೆ ಕಾಂಪೋಂಡಿನೊಳಗೆ ಎಸೆಯಲ್ಲ. ನೀವೇನು ಹೇಳ್ತೀರಿ..

ಹುಂ. ಕಣ್ರೀ ಸರೋಜಾ, ನಾನು ಇದನ್ನು ಆಲೋಚಿಸಿಯೇ ಇರ್ಲಿಲ್ಲ. ನಮ್ಮ ಮನೆ ಕೊಳಕಿದ್ರೆ ಹೇಗೆ ಬೇಸರ ಆಗುತ್ತೋ ಹಾಗೇ ನಮ್ಮ ಬೀದಿ, ನಮ್ಮೂರು, ನಮ್ಮ ರಾಜ್ಯ, ದೇಶ ಕೂಡಾ ಕೊಳಕಿರಬಾರದಲ್ವಾ..  ಇಂತದ್ದು ನಮಗೂ ಗೊತ್ತಿರುತ್ತೆ, ಇನ್ನೊಬ್ರಿಗೆ ಹೇಳೋದಕ್ಕೆ.. ನಾವುಗಳು ಅನುಸರಿಸುವ ಗೊಡವೆಗೆ ಹೋಗೋದಿಲ್ಲ ಅಲ್ವಾ..

ಹೌದು.. ನಾನು ನನ್ನ ಮಕ್ಕಳಿಗೆ ಹೇಳಿದ್ದೀನಿ. ಹಣ್ಣಿನ ಸಿಪ್ಪೆ, ತರಕಾರಿ ಸಿಪ್ಪೆ, ಕಾಫಿ, ಚಹಾ ದ ಚರಟ ಇವುಗಳನ್ನೆಲ್ಲಾ  ಸಣ್ಣ ಪ್ಲಾಸ್ಟಿಕ್ ಬಕೆಟ್ಟಿಗೆ ಹಾಕಿ ಅದರ ಮೇಲೆ ತೆಳ್ಳನೆಯ ಮಣ್ಣಿನ ಪದರ ಹರಡಿ ಸಾವಯವ ಗೊಬ್ಬರ ಮಾಡಿ ಅಂತ. ನಮ್ಮ ಮನೆಯಲ್ಲಿರೋ ಹೂಗಿಡಗಳಿಗೆ, ತರಕಾರಿ ಗಿಡಗಳಿಗೆ ನಾವೇ ಮಾಡಿದ ಗೊಬ್ಬರ ಬಳಸಿದರೆ ದುಡ್ಡೂ ಉಳಿಯುತ್ತೆ,

ಇದು ಒಳ್ಳೇ ಉಪಾಯ. ಕಸ ಕರಗುತ್ತೆ, ಸ್ವಚ್ಛತೆಯೂ ಆಗುತ್ತೆ. ನಾನಂತು ಇವತ್ತಿಂದ್ಲೇ ಹೀಗೇ ಮಾಡ್ತೀನಪ್ಪ.

.. ಇದೇನ್ರೀ ನೀವು ಮಾಡಿದ್ದು? ಮಾತಾಡ್ತಾ ಮಾತಾಡ್ತಾ, ಕೈಯಲ್ಲಿ ಹಿಡಿದ ಕಸ ನಮ್ಮನೆ ಕಾಂಪೋಂಡು ಒಳಗೆ ಎಸೆದು ಬಿಟ್ರಲ್ಲಾ

ಅಯ್ಯೋ.. ಅಭ್ಯಾಸಬಲ ಕಣ್ರೀ.. ಬದಲಾಗುವುದಕ್ಕೆ ಸ್ವಲ್ಪ ಸಮಯ ಬೇಕು.. ಸಮಯ ಬರಬೇಕಾದರೆ ಆ ಮನಸ್ಸು ಬೇಕು.. ಇವತ್ತೊಂದಿನ ಕಾಂಪೋಂಡ್ ಗುಡಿಸ್ಕೊಳ್ಳಿ.. ಇನ್ನು ಮೇಲೆ ಹೀಗಾಗಲ್ಲ.. ಪ್ರಾಮಿಸ್..

ಸರಿ ಬಿಡಿ.. ರಸ್ತೆಯ ಕಸವನ್ನೇ ತೆಗೆಯುವ ಶಪಥ ಮಾಡಿದ್ದೀವಂತೆ ನಾವು.. ಇದೇನು ಹೆಚ್ಚಾಗಲ್ಲ ಬಿಡಿ. ಬನ್ನಿ ನೀವೂ ಕೈ ಜೋಡಿಸಿ.

ಮತ್ತು ನೀವೂ ಕೂಡಾ.. ಬದಲಾವಣೆಯತ್ತ  ನಾವು ಇಡುವ ಒಂದು ಹೆಜ್ಜೆ, ನಮ್ಮ ಮಕ್ಕಳು ನಡೆಯುವ ರಾಜಮಾರ್ಗವಾಗಬಹುದು..

Anitha Naresh Manchi

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿಯ ರಾಮ ನರೇಶ್ ಮಂಚಿ ಅವರ ಪತ್ನಿ ಅನಿತಾ ನರೇಶ್ ಮಂಚಿ, ಕನ್ನಡದ ಪ್ರಸಿದ್ಧ ಲೇಖಕಿ. ಕೊಡೆ ಕೊಡೆ ನನ್ನಕೊಡೆ ಕಾಲೇಜು ಪಠ್ಯವಾಗಿದೆ. ಎರಡು ಲಘು ಬರಹ ಸಂಕಲನ, ಮೂರು ಕಥಾಸಂಕಲನ ಬಿಡುಗಡೆಗೊಂಡಿವೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಕಥೆ, ಲೇಖನಗಳು ಪ್ರಕಟಗೊಂಡಿವೆ. ಅವರ ಕಥೆಗಳು ಬೇರೆ ಭಾಷೆಗೂ ಅನುವಾದಗೊಂಡಿವೆ. ವಿಜಯವಾಣಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಅನಿತಾ ಅವರಿಗೆ ಮಂಗಳೂರಿನ ಕನ್ನಡ ರತ್ನ ಪ್ರಶಸ್ತಿ. ಕೊಡಗಿನ ಗೌರಮ್ಮ ಪ್ರಶಸ್ತಿ, ಅಕ್ಷರ ಶ್ರೀ ಪ್ರಶಸ್ತಿ ದೊರಕಿವೆ.

Share
Published by
Anitha Naresh Manchi