ಬಂಟ್ವಾಳ: ಬಂಟ್ವಾಳ ಬಂಟರ ಭವನದಲ್ಲಿ 27ರಂದು ಆಳ್ವಾಸ್ ನುಡಿಸಿರಿ ವಿರಾಸತ್ ಬಂಟ್ವಾಳ ಘಟಕವತಿಯಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.
ಸಂಜೆ 5.45ಕ್ಕೆ ಸಭಾ ಕಾರ್ಯಕ್ರಮ ನಡೆಯುವುದು. 45 ನಿಮಿಷಗಳ ಸಭಾ ಕಾರ್ಯಕ್ರಮವಿದ್ದು, ಬಳಿಕ ಆಳ್ವಾಸ್ ನ 350 ವಿದ್ಯಾರ್ಥಿಗಳಿಂದ 3 ಗಂಟೆ 30 ನಿಮಿಷಗಳ ಕಾಲ ಆಳ್ವಾಸ್ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ.
ಅಂದು ಸಂಜೆ ಆಳ್ವಾಸ್ ಕಾಲೇಜಿನ ಪ್ರತಿಭಾನ್ವಿತ ಕಲಾವಿದರಿಂದ ಕೇರಳದ ’ಮೋಹಿನಿಯಾಟಂ’, ಮಧುಮಾಸದ ರೂಪಕ ’ಬಡಗುತಿಟ್ಟು ಯಕ್ಷಗಾನ’, ಆಂಧ್ರದ ’ಬಂಜಾರ ನೃತ್ಯ’, ಮಣಿಪುರಿ ’ಸ್ಟಿಕ್ ಡ್ಯಾನ್ಸ್’ (ಸ್ಟಂಟ್), ಶ್ರೀಲಂಕಾದ ’ನೃತ್ಯ ವೈಭವ’, ಸಾಹಸಮಯ ರೋಪ್, ’ಮಲ್ಲಕಂಬ’, ಆನಂದ ತಾಂಡವ ’ಭರತ ನಾಟ್ಯ’, ಆನಂದ ಮಂಗಳಂ ದೇರ್ ’ಕಥಕ್’, ಗುಜರಾತಿನ ’ಹೂಡೋ ರಾಸ್’, ಮಹಾರಾಷ್ಟ್ರದ ’ಲಾವಣಿ ನೃತ್ಯ’, ಪಶ್ಮಿಮ ಬಂಗಾಳದ ’ಪುರುಲಿಯಾ ನೃತ್ಯ’, ತೆಂಕು ತಿಟ್ಟಿನ ಯಕ್ಷಗಾನ ’ವೇದೋದ್ಧರಣ, ಮಣಿಪುರ ದೋಲ್ ಚಲಮ್, ಒರಿಸ್ಸಾದ ’ಗೋಟಿಪೂವ ಮತ್ತು ಯೋಗ ನೃತ್ಯ’, ಸಮಕಾಲೀನ ನೃತ್ಯ, ವಂದೇ ಮಾತರಂ ಮತ್ತಿತರ ದೇಶ-ವಿದೇಶಗಳ ವಿವಿಧ ಪ್ರಕಾರದಿಂದ ಕೂಡಿದ ಶಾಸ್ತ್ರೀಯ ಮತ್ತು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.
ಕಾರ್ಯಕ್ರಮವು ಸಮಯಕ್ಕೆ ಸರಿಯಾಗಿ ಆರಂಭಗೊಳ್ಳಲಿದ್ದು, 15 ನಿಮಿಷ ಮುಂಚಿತವಾಗಿ ಆಸೀನರಾಗಿರಬೇಕು ಎಂದು ಪ್ರಕಟಣೆ ತಿಳಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ವಿಶ್ವ ನುಡಿಸಿರಿ ಹಿನ್ನೆಲೆಯಲ್ಲಿ ಬಂಟ್ವಾಳ ತಾಲ್ಲೂಕು ಘಟಕ ರಚಿಸಲಾಗಿದ್ದು, ಇದೀಗ ಮತ್ತೆ ವಿಶ್ವ ನುಡಿಸಿರಿ ನಡೆಸಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ನಿರ್ಧರಿಸಿದ್ದಾರೆ. ಇದರಿಂದಾಗಿ ಪ್ರತೀ ತಾಲ್ಲೂಕು ಘಟಕ ಆಶ್ರಯದಲ್ಲಿ ’ಆಳ್ವಾಸ್ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಸಮಿತಿ ಸಂಚಾಲಕ ಡಾ.ಯೋಗೀಶ ಕೈರೋಡಿ ತಿಳಿಸಿದ್ದಾರೆ.