ಬಂಟ್ವಾಳ: ಡಿ ‘ಗ್ರೂಪ್ ನೌಕರರ ನಾಲ್ಕು ದಶಕಗಳ ಬೇಡಿಕೆ ಕುರಿತು ಸರಕಾರದ ಗಮನವನ್ನು ಸೆಳೆಯಲು ಬೆಳಗಾವಿ ಸುವರ್ಣ ಸೌಧದ ಎದುರು ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಅನಿರ್ದಿಷ್ಟವಾದಿ ಮುಷ್ಕರ ಆರಂಭಗೊಂಡಿದೆ.
ತಾಲೂಕು ಜಿಲ್ಲೆ ಹಾಗೂ ರಾಜ್ಯದ ರಾಜಧಾನಿಯಲ್ಲಿ ಹಲವಾರು ಬಾರಿ ಮುಷ್ಕರ ಹಾಗೂ ಪಾದಯಾತ್ರೆ ನಡೆಸಲಾಗಿತ್ತು. ಆದರೂ ಸರಕಾರ ಗ್ರಾಮ ಸಹಾಯಕರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿರುವ ಮುಷ್ಕರನಿರತರು, 2013 ರ ಬೆಳಗಾವಿಯ ಸುವರ್ಣ ಸೌಧದಲ್ಲಿ ಜರಗಿದ ಚಳಿಗಾಲದ ಅಧಿವೇಶನದಲ್ಲಿ ಗ್ರಾಮ ಸಹಾಯಕರ ಬೇಡಿಕೆಯನ್ನು ಘೋಷಣೆ ಮಾಡಲು ಸರಕಾರಕ್ಕೆ ಒತ್ತಾಯಿಸಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
38 ವರ್ಷಗಳಿಂದ ಬೇಡಿಕೆಯನ್ನು ಸಲ್ಲಿಸುತ್ತ ಬಂದ್ದಿದ್ದರೂ ಯಾವುದೇ ಸರಕಾರವೂ ಗ್ರಾಮ ಸಹಾಯಕರ ಬೇಡಿಕೆಯನ್ನು ಈಡೇರಿಸುವತ್ತ ಗಮನವನ್ನು ಹರಿಸಿಲ್ಲ. ಸಮಾನ ವೇತನ ನಿಗದಿ ಪಡಿಸಿಲ್ಲ ದಿನದ 24 ಗಂಟೆ ಸರಕಾರದ ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಪ್ರಾಮಾಣಿಕತೆಯಿಂದ ಮಾಡುತ್ತ ಬಂದಿರುವ ಗ್ರಾಮ ಸಹಾಯಕರನ್ನು ಸರಕಾರವು ಗುಲಾಮರಂತೆ ನಡೆಸಿಕೊಂಡು ಹೋಗುತ್ತಿದೆ. ಗ್ರಾಮ ಸಹಾಯಕರನ್ನು ಡಿ’ ಗ್ರೂಪ್ ನೌಕರರೆಂದು ಪರಿಗಣಿಸಬೇಕು, ಸರಕಾರದ ಇತರ ನೌಕರರಿಗೆ ಸಿಗುವಂತಹ ಸೌಲಭ್ಯ. ಪಿಂಚಣಿ. ರಜೆ ಇನ್ನಿತರ ಸೌಲಭ್ಯ ಒದಗಿಸಬೇಕು ಎಂದು ಮುಷ್ಕರನಿರತರು ಒತ್ತಾಯಿಸಿದ್ದಾರೆ.