ವಿಟ್ಲ: ಅರ್ಪಣಾ ಭಾವ ನಮ್ಮಲ್ಲಿದ್ದಾಗ ಅಹಂಭಾವ ನಮ್ಮಲ್ಲಿ ಮೂಡಲು ಸಾಧ್ಯವಿಲ್ಲ. ಒಳ್ಳೆಯ ವಿಚಾರಗಳನ್ನು ಆಚರಣೆಯಲ್ಲಿ ತಂದಾಗ ಪ್ರಚಾರ ಸ್ವಾಭಾವಿಕವಾಗಿ ಸಿಗುತ್ತದೆ. ಲೌಕಿಕ ಹಾಗೂ ಅಲೌಕಿಕ ಚಿಂತನೆ ಮಾಡಿದರೆ ಬದುಕನ್ನು ರೂಪಿಸುವ ದಾರಿಗಳು ಹಲವಿದೆ. ಧರ್ಮದ ಸೂತ್ರವನ್ನು ಮರೆತರೆ ಯಾವುದನ್ನೂ ಮುನ್ನಡೆಸಲು ಸಾಧ್ಯವಿಲ್ಲ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಶ್ರೀಶಂಕರ ಟಿವಿಯಲ್ಲಿ ಪ್ರಸಾರವಾಗಲಿರುವ ಒಡಿಯೂರು ದತ್ತಾವದೂತ ಸರಣಿ ಕಾರ್ಯಕ್ರಮವನ್ನು ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.
ಅಂತರಾತ್ಮನ ಅರಿವಿನ ಬಗ್ಗೆ ಮುಂದಡಿ ಇಡುವಾಗ ತೊಡಕುಗಳು ಸಾಮಾನ್ಯವಾಗಿರುತ್ತದೆ. ಸಂತನನ್ನು ಗುರುತಿಸುವ ಕಾರ್ಯ ಸಮಾಜ ನಡೆಯುತ್ತದೆ. ಅಂತಹ ಸಮಾಜದ ಋಣ ಸಂತನ ಮೇಳಿರುವುದರಿಂದ ಸಮಾಜದ ನಂಟು ಸಂತನಿಗೆ ಅಗತ್ಯ. ದೀಪ ಬೆಳಕಿನಿಂದ ನಾವು ಬೆಳಗಬೇಕೆಂಬ ದೃಷ್ಠಿ ನಮ್ಮೊಳಗಿರಬೇಕು. ಆದ್ಯಾತ್ಮದ ಬೆಳಕು ಆತ್ಮೋನ್ನತೆಯೆಡೆಗೆ ಕೊಂಡೊಯ್ಯುವ ಬೆಳಕಾಗಿದ್ದು, ಅದು ಶಾಶ್ವತವಾದ ಬೆಳಕು ಎಂದು ತಿಳಿಸಿದರು.
ಸಾಹಿತಿ ಮುಳಿಯ ಶಂಕರ ಭಟ್ಟ ಮಾತನಾಡಿ ಗುರು ಸಂಕಲ್ಪದಿಂದ ಕ್ಷೇತ್ರ ಬೆಳೆದಿದ್ದು, ಜತೆಗೆದಿದ್ದವರು ಸಾಕ್ಷಿ ಮಾತ್ರ. ಸ್ವಾಮೀಜಿಯವರ ಮುಂದೆ ಕನ್ನಡಿ ಹಿಡಿಯುವ ಕೆಲಸವನ್ನು ಸಾಹಿತಿಯಾಗಿ ಮಾಡಿದ್ದು, ಅದನ್ನು ಕಾಣುವ ದೃಷ್ಠಿ ಸಮಾಜಕ್ಕೆ ಬಿಟ್ಟದ್ದಾಗಿದೆ. ಆತ್ಮೋನ್ನತಿಗಾಗಿ ಕೆಲಸ ಮಾಡದೆ ಸಮಾಜ ಮುಖಿ ಕಾರ್ಯವಾಗಿ ಧಾರ್ಮಿಕ, ಆಧ್ಯಾತ್ಮ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಮಾಜಕ್ಕೆ ವಿಶಿಷ್ಠ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಸಾಧ್ವೀ ಶ್ರೀ ಮಾತಾನಂದಮಯಿ ದಿವ್ಯ ಸಾನಿಧ್ಯವಹಿಸಿದ್ದರು. ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ ತಾರಾನಾಥ ಕೊಟ್ಟಾರಿ, ಮಂಗಳೂರು ಗುರುದೇವಸೇವಾ ಬಳಗದ ಅಧ್ಯಕ್ಷ ಜಯಂತ್ ಜೆ ಕೋಟ್ಯಾನ್, ಒಡಿಯೂರು ಗುರುದೇವಸೇವಾ ಬಳಗದ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ, ಒಡಿಯೂರುಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಸುರೇಶ್ ರೈ, ದೂರದರ್ಶನದ ವರದಿಗಾರ ಎನ್ ಎನ್ ಕಿಣಿ ಮತ್ತಿತರರು ಉಪಸ್ಥಿತರಿದ್ದರು.
ರೇಣುಕಾ ಎಸ್ ರೈ ಪ್ರಾರ್ಥಿಸಿದರು. ಹಿರಿಯ ವರದಿಗಾರ ಲಕ್ಷ್ಮೀ ಮಚ್ಚಿನ ಪ್ರಸ್ತಾವನೆಗೈದರು. ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆ ಮೇಲ್ವಿಚಾರಕ ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.
ಸರಣಿಯ ಒಂದು ಚಿತ್ರ:
ದಕ್ಷಿಣದ ಗಾಣಗಾಪುರ ಎಂದು ಖ್ಯಾತಿ ಪಡೆದ ಒಡಿಯೂರು ಕ್ಷೇತ್ರದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ಭಕ್ತಿ-ಭಾವದ ಸಿಂಚನವಾಗುತ್ತದೆ. ಒಡಿಯೂರು ಶ್ರೀಗಳು ಕೈಗೊಂಡ ಹತ್ತಾರು ಸಮಾಜಮುಖಿ ಚಟುವಟಿಕೆಗಳ ಕುರಿತು ವಿಸ್ತೃತ ಮಾಹಿತಿಗಳನ್ನು ಒಡಿಯೂರ ದತ್ತಾವಧೂತ ಎಂದು ಚಿತ್ರಿಸಿ ನ.೧೯ರಿಂದ ಪ್ರತೀ ಶನಿವಾರ ಸಂಜೆ ೭ ಗಂಟೆಗೆ ಶ್ರೀ ಶಂಕರ ವಾಹಿನಿಯಲ್ಲಿ ಹತ್ತು ಕಂತುಗಳಲ್ಲಿ ಧಾರಾವಾಹಿ ರೂಪದಲ್ಲಿ ನೀಡಲಾಗುತ್ತದೆ.
ಕ್ಷೇತ್ರದ ಪರಿಚಯ, ಶಿಕ್ಷಣ ಚಟುವಟಿಕೆ, ಗ್ರಾಮವಿಕಾಸದಂತಹ ಸಂಸ್ಕಾರ ನೀಡುವ ಸಮಾಜಮುಖಿ ಕಾರ್ಯಗಳ ಮಾಹಿತಿಯನ್ನೊಳಗೊಂಡಂತೆ ಚಿತ್ರೀಕರಣ ನಡೆಸಲಾಗಿದೆ. ಶ್ರೀ ಗುರುದೇವದತ್ತ ಸಂಸ್ಥಾನಂ ನಿರ್ಮಿಸಿ, ಕೃಷ್ಣಕಾಂತ್ ಚಿತ್ರೀಕರಣ, ಶ್ರೀಕಾಂತ್ ಸಂಕಲನ ಮಾಡಿದ್ದು ಪತ್ರಕರ್ತ ಲಕ್ಷ್ಮೀ ಮಚ್ಚಿನ ಸಾಹಿತ್ಯ, ನಿರ್ದೇಶನ ಮಾಡಿದ್ದಾರೆ. ಇತರ ರಾಜ್ಯಗಳ ಹಾಗೂ ಹೊರದೇಶದ ಭಕ್ತರಿಗೂ ವೀಕ್ಷಣೆಗೆ ಅನುವಾಗುವಂತೆ ಇಂಗ್ಲಿಷ್ ಭಾಷಾನುವಾದ ಮಾಡಲಾಗಿದೆ.