ಸಮಾಜದ ಭವಿಷ್ಯವನ್ನು ತೀರ್ಮಾನ ಮಾಡಬೇಕು ಎಂದಿದ್ದರೆ, ಆಕಾಶದಲ್ಲಿರುವ ಗ್ರಹ, ನಕ್ಷತ್ರಗಳನ್ನು ಎಣಿಕೆ ಮಾಡುವುದಲ್ಲ. ನಾಡಿನ ಮಕ್ಕಳಲ್ಲಿ ಗ್ರಹ, ನಕ್ಷತ್ರಗಳ ಕಾಂತಿ ಮಿನುಗಿದರೆ, ಉತ್ತಮ ಭವಿಷ್ಯವಿದೆ ಎಂದರ್ಥ. ಶಿಕ್ಷಣ ಕ್ಷೇತ್ರದ ಜೊತೆಗೆ ಶಾರದೋತ್ಸವ ನಡೆಸುವುದು ಉತ್ತಮ ಕಾರ್ಯವಾಗಿದೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು
ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಸುಭಾಷ್ ನಗರ ದಕ್ಷಿಣ ಕನ್ನಡ ಜಿಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಸುಭಾಷ್ ಯುವಕ ಮಂಡಲ, ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ವತಿಯಿಂದ 100ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಮೊದಲ ದಿನದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ನಮ್ಮ ನಾಡು ಮುಂದುವರೆಯಬೇಕು ಎಂದಿದ್ದರೆ, ಸಮಾಜಕ್ಕೆ ಉತ್ತಮವಾದ ವಿದ್ಯೆ ಬೇಕು. ನೂರು ವರ್ಷಗಳಿಂದ ನಡೆಯುತ್ತಿರುವ ಶಾರದೋತ್ಸವ ಜನರಲ್ಲಿ ಉತ್ತಮ ಸಂಸ್ಕಾರ ಒದಗಿಸಲು ಪ್ರೇರಣೆಯಾಗಿದೆ ಎಂದರು. ಬದುಕಿನ ಭವಿಷ್ಯ ಭದ್ರವಾಗಬೇಕು ಎಂದಿದ್ದರೆ, ನಮ್ಮ ಪ್ರಯತ್ನ ಮತ್ತು ದೇವರ ಅನುಗ್ರಹ ಎರಡೂ ಬೇಕು. ಶಾರದಾ ಮಹೋತ್ಸವ ಪೂಜೆಯೊಂದಿಗೆ ಶೈಕ್ಷಣಿಕ ಚಟುವಟಿಕೆಯಲ್ಲೂ ಮುನ್ನಡೆಯುತ್ತಿರುವ ಈ ಪರಿಸರದ ಅಭಿವೃದ್ಧಿಯೂ ಇದರಿಂದ ಸಾಧ್ಯವಾಗುತ್ತಿದೆ. ಇದಕ್ಕಾಗಿ ಸಂಸ್ಥೆಯ ಎಲ್ಲರೂ ಅಭಿನಂದನೀಯ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ದಾನಿಗಳ ನೆರವಿನಿಂದ ನಿರ್ಮಿಸಲಾದ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿ, ಹಿರಿಯರು ಸ್ಥಾಪಿಸಿದ ಶಾಲೆಗಳು ಇಂದಿಗೂ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿವೆ. ಬಂಟ್ವಾಳ ಕ್ಷೇತ್ರದಲ್ಲಿ ಶಾಂತಿ ಮತ್ತು ಸಾಮರಸ್ಯ, ಸಹಬಾಳ್ವೆ ಕನಸಾಗಿದ್ದು, ಶಾಂತಿಯ ವಾತಾವರಣ ನಿರ್ಮಾಣವಾದಾಗ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಸಜೀಪಮೂಡದಲ್ಲಿ ಸಾಮರಸ್ಯದ ಬೆಸುಗೆ:
ಪ್ರಾಸ್ತಾವಿಕವಾಗಿ ಮಾತನಾಡಿದ ಶತಮಾನೋತ್ಸವ ಶಾರದಾ ಪೂಜಾ ಸಮಿತಿ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ನೂರು ವರ್ಷಗಳ ಇತಿಹಾಸ ಹಾಗೂ ಹಿರಿಯರ ಕೊಡುಗೆಗಳನ್ನು ಸ್ಮರಿಸಿ, ಶಾರದೋತ್ಸವ ಸಹಿತ ಊರ ಪ್ರತಿಯೊಂದು ಕಾರ್ಯಕ್ರಮದಲ್ಲೂ ಸಾಮರಸ್ಯದ ಬೆಸುಗೆ ಇದೆ. ಹೊರೆಕಾಣಿಕೆ ಮೆರವಣಿಗೆಯಲ್ಲೂ ಇದರ ಪ್ರತಿಫಲನವಾಗಿದೆ ಎಂದರು.
ಸಜೀಪಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಅತಿಥಿಗಳಾಗಿ ರೋಹನ್ ಕಾರ್ಪೊರೇಷನ್ ಮಂಗಳೂರು ಎಂ.ಡಿ ಡಾ. ರೋಹನ್ ಮೊಂತೇರೊ, ಮುಂಬೈ ಟೆಕ್ನೋನೇತ್ರ ಫರ್ನೇಸಸ್ ನಿರ್ದೇಶಕರಾದ ಬಿ.ರಾಮಪ್ರಸಾದ್ ರಾವ್, ಮೂಡೂರು ಪಡೂರು ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಹಿರಿಯ ಪ್ರಾಥಮಿಕ ಶಾಲೆ, ಜ್ಯೂನಿಯರ್ ಕಾಲೇಜಿನ ಸ್ಥಳದಾನಿಗಳಾದ ಕಸ್ತೂರಿ ಐತಾಳ್ ಕಲ್ಲಾಡಿಗೋಳಿ, ಮುಂಬೈ ಎನ್ ಕ್ಯೂಬ್ ಎಥಿಕಲ್ಸ್ ಸಿಒಒ ಜಿನರಾಜ್ ಪೂಜಾರಿ, ಬಳ್ಳಾರಿ ಜೆಎಸ್ ಡಬ್ಲ್ಯು ಸ್ಟೀಲ್ ಲಿಮಿಟೆಡ್ ಜಿ.ಎಂ ಸಂತೋಷ್ ಕೊಂಡೆ ಕಾಂತಾಡಿಗುತ್ತು, ಮುಂಬಯಿ ಉದ್ಯಮಿ ಹರಿಪ್ರಸಾದ್ ಶೆಟ್ಟಿ ನಗ್ರಿಗುತ್ತು, ಉದ್ಯಮಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಸಜಿಪಮೂಡ ಸರಕಾರಿ ಪದವಿಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಲ ವೆಂಕಟರಮಣ ಭಟ್ ಗೋಳಿಪಡ್ಪು, ಶಾಲಾ ಮುಖ್ಯೋಪಾಧ್ಯಾಯ ಗೋಪಾಲ ಸಫಲ್ಯ, ಶ್ರೀ ಶಾರದಾ ಪೂಜಾ ಸಮಿತಿ ಅಧ್ಯಕ್ಷ ಶೋಭಿತ್ ಪೂಂಜ, ಸುಭಾಷ್ ಯುವಕ ಮಂಡಲ ಅಧ್ಯಕ್ಷ ಎಸ್. ಶ್ರೀಕಾಂತ್ ಶೆಟ್ಟಿ, ಶ್ರೀ ಶಾರದಾ ಪೂಜಾ ಮಹಿಳಾ ಸಮಿತಿ ಅಧ್ಯಕ್ಷೆ ಪುಷ್ಪಾವತಿ ರಮೇಶ್ ಪೆರ್ವ ಉಪಸ್ಥಿತರಿದ್ದರು. ಶತಮಾನೋತ್ಸವ ಶಾರದಾ ಪೂಜಾ ಸಮಿತಿ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಸ್ವಾಗತಿಸಿದರು. ಸಮಿತಿ ಉಪಾಧ್ಯಕ್ಷ ಗಿರೀಶ್ ಕುಮಾರ್ ಪೆರ್ವ ವಂದಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಬಿ.ರಾಮಚಂದ್ರ ರಾವ್ ಮತ್ತು ಶಿಕ್ಷಕ ಶಿವಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಈ ವೇಳೆ ದಾನಿಗಳು, ಹಿತೈಷಿಗಳನ್ನು ಗೌರವಿಸಲಾಯಿತು.