ತುಳುನಾಡಿನ ಪ್ರಸಿದ್ಧ ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಕಾವೇರಿ ಸಂಕ್ರಮಣದ ಪ್ರಯುಕ್ತ ನಡೆಯುವ ಸಂಪ್ರದಾಯಬದ್ಧ ಪುದ್ದಾರ್ ಅಗೆಲು ಸೇವೆ ಶುಕ್ರವಾರ ನೆರವೇರಿತು. ಕಾವೇರಿ ಸಂಕ್ರಮಣದಂದು ನಡೆಯುವ ಈ ವಿಶೇಷ ಸೇವೆಯಲ್ಲಿ ಹೊಸ ಅಕ್ಕಿಯಿಂದ ತಯಾರಿಸಿದ ಅನ್ನ ಹಾಗೂ ವಿವಿಧ ತರಕಾರಿಗಳಿಂದ ಸಿದ್ಧಪಡಿಸಿದ ಪದಾರ್ಥಗಳನ್ನು ದೈವಕ್ಕೆ ಸಮರ್ಪಿಸುವುದು ಇಲ್ಲಿನ ವಿಶೇಷ
ಕ್ಷೇತ್ರದಲ್ಲಿ ಸಾಮಾನ್ಯವಾಗಿ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ಅಗೆಲು ಸೇವೆ ನಡೆಯುತ್ತದೆ. ಆದರೆ ಕಾವೇರಿ ಸಂಕ್ರಮಣದ ದಿನ ಸೋಮವಾರ ಅಥವಾ ಶನಿವಾರ ಬಂದರೆ, ಆ ದಿನಗಳಲ್ಲಿ ಅಗೆಲು ಸೇವೆ ನಡೆಸದ ಕ್ಷೇತ್ರದ ಸಂಪ್ರದಾಯದಂತೆ ಬದಲಾದ ದಿನದಲ್ಲಿ ಪುದ್ದಾರ್ ಅಗೆಲು ಸೇವೆ ನೆರವೇರಿಸಲಾಗುತ್ತದೆ. ಈ ಬಾರಿ ಶನಿವಾರದ ಕಾರಣದಿಂದ ಶುಕ್ರವಾರವೇ ಸೇವೆ ನಡೆಸಲಾಗಿದೆ.
ಹೊಸ ಅಕ್ಕಿಯ ಅನ್ನದ ನೈವೇದ್ಯ:
ಪುದ್ದಾರ್ ಅಗೆಲು ಸೇವೆಯ ಅಂಗವಾಗಿ ಭಕ್ತರು ಹೊಸ ಅಕ್ಕಿ ಹಾಗೂ ವಿವಿಧ ಬಗೆಯ ತರಕಾರಿಗಳನ್ನು ಕ್ಷೇತ್ರಕ್ಕೆ ಸಮರ್ಪಿಸುತ್ತಾರೆ. ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಅಗೆಲು ಸೇವೆಯಲ್ಲಿ ಬಳಸಲಾಗುತ್ತದೆ.ಗ್ರಾಮದ ಭಕ್ತರು ಈ ಸೇವೆಯಲ್ಲಿ ವಿಶೇಷ ಆಸಕ್ತಿಯಿಂದ ಪಾಲ್ಗೊಂಡು, ತಮ್ಮ ಭಕ್ತಿಭಾವದ ಕಾಣಿಕೆಯಾಗಿ ಅಕ್ಕಿ, ತರಕಾರಿಗಳನ್ನು ಸಮರ್ಪಿಸುವುದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ. ಭಕ್ತರು ಅರ್ಪಿಸಿದ ತರಕಾರಿಗಳನ್ನು ಅಗೆಲಿನ ಪದಾರ್ಥಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಮಧ್ಯಾಹ್ನ ವಿಶೇಷ ಪೂಜೆ
ಪುದ್ದಾರ್ ಅಗೆಲು ಸೇವೆಯ ಪ್ರಯುಕ್ತ ಮಧ್ಯಾಹ್ನ ವಿಶೇಷ ಪೂಜೆ ನಡೆಯಿತು. ಕ್ಷೇತ್ರದ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಪಣೋಲಿಬೈಲು ಕ್ಷೇತ್ರದಲ್ಲಿ ಅಗೆಲು ಸೇವೆ ಮತ್ತು ಕೋಲ ಸೇವೆಗಳು ಪ್ರಮುಖ ಆರಾಧನಾ ಕ್ರಮಗಳಾಗಿದ್ದು, ವಿವಿಧ ಭಾಗಗಳಿಂದ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಸೇವೆ ಸಲ್ಲಿಸಿದರು.