ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಕಬಡ್ಡಿ ಕ್ರೀಡೆಯ ಬೆಳವಣಿಗೆ, ನಿಯಮಾವಳಿ ಹಾಗೂ ತೀರ್ಪುಗಾರಿಕೆಯ ವಿವಿಧ ವಿಚಾರಗಳ ಕುರಿತು ಚರ್ಚಿಸುವ ಉದ್ದೇಶದಿಂದ ಜಿಲ್ಲಾ ಕಬಡ್ಡಿ ಸಂಘಟಕರು, ಆಟಗಾರರು ಹಾಗೂ ತೀರ್ಪುಗಾರರ ಸಮ್ಮಿಲನ ಮತ್ತು ಕಾರ್ಯಾಗಾರಬಿ.ಸಿ.ರೋಡ್‌ನ ಸರ್ಕಾರಿ ನೌಕರರ ಸಭಾಭವನದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮಾರ್ಗದರ್ಶನದಲ್ಲಿ ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತಾಲೂಕು ಅಸೋಸಿಯೇಷನ್ ಅಧ್ಯಕ್ಷ ಪುಷ್ಪರಾಜ್ ಚೌಟ ಅಧ್ಯಕ್ಷತೆಯಲ್ಲಿ ಹಾಗೂ ತೀರ್ಪುಗಾರರ ಮಂಡಳಿ ಅಧ್ಯಕ್ಷ ಸುರೇಶ್ ಮೈರಡ್ಕ ಅವರ ನೇತೃತ್ವದಲ್ಲಿ ಕಾರ್ಯಾಗಾರ ನಡೆಯಿತು.
ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ: ಪುಷ್ಪರಾಜ್ ಚೌಟ
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ತಾಲೂಕು ಅಸೋಸಿಯೇಷನ್ ಅಧ್ಯಕ್ಷ ಪುಷ್ಪರಾಜ್ ಚೌಟ, “ಗ್ರಾಮೀಣ ಭಾಗದಲ್ಲಿ ಕಬಡ್ಡಿ ಆಟಗಾರರು ಉದಯವಾಗಬೇಕು ಮತ್ತು ಅವರು ರಾಜ್ಯ ಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದವರೆಗೆ ಬೆಳೆಯಬೇಕು ಎಂಬುದೇ ನಮ್ಮ ಆಶಯ. ಅಮೆಚೂರ್ ಅಸೋಸಿಯೇಷನ್ನಿನ ನೀತಿ-ನಿಯಮಗಳನ್ನು ಪಾಲಿಸಿಕೊಂಡು ಕಬಡ್ಡಿ ಆಟಕ್ಕೆ ಪ್ರತಿಯೊಬ್ಬರೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು,” ಎಂದು ಕರೆ ನೀಡಿದರು. ಜೊತೆಗೆ, ಅಸೋಸಿಯೇಷನ್‌ನ ಉದ್ದೇಶಗಳನ್ನು ಈಡೇರಿಸಲು ತಾಲೂಕು ಅಧ್ಯಕ್ಷನಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.
ನೂತನ ನಿಯಮಾವಳಿ ಕುರಿತು ಮಾಹಿತಿ
ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ಕೃಷ್ಣಾನಂದ ರಾವ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಕಬಡ್ಡಿ ಕ್ರೀಡೆಯ ನೂತನ ನಿಯಮಾವಳಿಗಳು, ತೀರ್ಪುಗಾರಿಕೆಯ ವಿಧಾನ, ಪಂದ್ಯ ನಿರ್ವಹಣೆ ಹಾಗೂ ತೀರ್ಪುಗಾರರು ಗಮನಿಸಬೇಕಾದ ಪ್ರಮುಖ ಅಂಶಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಜಿಲ್ಲೆಯ ಕಬಡ್ಡಿ ಕ್ರೀಡೆಯ ಬೆಳವಣಿಗೆ, ಪಂದ್ಯಗಳ ಆಯೋಜನೆ, ಆಟಗಾರರ ಶಿಸ್ತು ಹಾಗೂ ತೀರ್ಪುಗಾರಿಕೆಯ ಗುಣಮಟ್ಟ ಸುಧಾರಣೆ ಸೇರಿದಂತೆ ವಿವಿಧ ಪ್ರಮುಖ ವಿಚಾರಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಕಬಡ್ಡಿ ತೀರ್ಪುಗಾರರು, ಆಟಗಾರರು, ತಂಡಗಳ ವ್ಯವಸ್ಥಾಪಕರು ಹಾಗೂ ಸಂಘಟಕರು ಭಾಗವಹಿಸಿದ್ದರು.
ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಫ್ರಾನ್ಸಿಸ್ ವಿ.ವಿ., ಗೌರವ ಸಲಹೆಗಾರರಾದ ಪುರುಷೋತ್ತಮ ಪೂಜಾರಿ, ರತನ್ ಶೆಟ್ಟಿ, ಜಿಲ್ಲಾ ತೀರ್ಪುಗಾರರ ಮಂಡಳಿಯ ಮಾಜಿ ಸಂಚಾಲಕ ಕೃಷ್ಣಪ್ಪ ಬಂಗೇರ, ರಾಜ್ಯ ತೀರ್ಪುಗಾರರ ಮಂಡಳಿ ಸಂಚಾಲಕ ಪ್ರಭಾಕರ ನಾರಾವಿ, ತಾಲೂಕು ಅಸೋಸಿಯೇಷನ್ ಗೌರವಾಧ್ಯಕ್ಷ ಬೇಬಿ ಕುಂದರ್, ಉಪಾಧ್ಯಕ್ಷ ನಾಗೇಶ್ ಶಂಭೂರ್ ಹಾಗೂ ತಾಲೂಕು ತೀರ್ಪುಗಾರರ ಮಂಡಳಿ ಸಂಚಾಲಕ ಹಬೀಬ್ ಮಾಣಿ ಉಪಸ್ಥಿತರಿದ್ದರು. ಸುರೇಶ್ ಮೈರಡ್ಕ ಸ್ವಾಗತಿಸಿದರು, ಪುರುಷೋತ್ತಮ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು ಮತ್ತು ದೀಪಕ್ ಪೆರಾಜೆ ಧನ್ಯವಾದ ಸಮರ್ಪಿಸಿದರು.