ಕವರ್ ಸ್ಟೋರಿ

ಸ್ಮಾರ್ಟ್ ಆಗಲು ಹೊರಟ ಶಾಲೆಗಳಲ್ಲಿ ಬೆಂಚು ಡೆಸ್ಕುಗಳ ಕೊರತೆ  | ಬಂಟ್ವಾಳ ವಲಯದ 44 ಸರಕಾರಿ ಶಾಲೆಗಳ ಬೇಡಿಕೆ ಪಟ್ಟಿ ಸಲ್ಲಿಕೆ

ಶಾಲೆಗಳು ಕೆಲ ದಿನಗಳಲ್ಲೇ ಆರಂಭಗೊಳ್ಳುತ್ತವೆ. ಆದರೆ ಸರಕಾರಿ ಶಾಲೆಗಳು ಎಷ್ಟು ಗಟ್ಟಿಮುಟ್ಟು ಇವೆ ಎಂಬುದನ್ನು ನೋಡಹೊರಟರೆ, ಬಂಟ್ವಾಳದ ಸುಮಾರು 40ಕ್ಕೂ ಸರಕಾರಿ ಅಧಿಕ ಶಾಲೆಗಳು ದುರಸ್ತಿಗಾಗಿ ಕಾದಿವೆ ಎಂಬ ಅಂಕಿಅಂಶಗಳು ದೊರಕುತ್ತವೆ.

ಪ್ರತಿ ವರ್ಷದಂತೆ ಈ ವರ್ಷವೂ ಸಮಸ್ಯೆಗಳ ಕುರಿತು ಇಲಾಖೆಗಳು ಕೋರುವ ಪಟ್ಟಿಗೆ ಆಯಾ ಶಾಲೆಗಳಿಂದ ಬೇಡಿಕೆಗಳ ಸೇರ್ಪಡೆ ಆಗಿವೆ. ಆದರೆ ಅನುದಾನ ಬರುತ್ತದೆಯೇ ಅಥವಾ ಕೇವಲ ಬೇಡಿಕೆಗಳನ್ನು ಮೇಲಧಿಕಾರಿಗಳಿಗೆ ಕಳುಹಿಸುವ ಕೆಲಸವಷ್ಟೇ ಮಾಡುವುದೇ ಎಂದು ಪೋಷಕ ಪ್ರತಿನಿಧಿಗಳು ಕೇಳುತ್ತಿದ್ದಾರೆ.

ಬಂಟ್ವಾಳದಲ್ಲಿ 44 ಶಾಲೆಗಳಿಗೆ ಬೇಕು ನೆರವು:

ಜಾಹೀರಾತು

ಬಂಟ್ವಾಳ ವಲಯದಲ್ಲಿ 44 ಸರಕಾರಿ ಶಾಲೆಗಳಲ್ಲಿ ಮೂಲಸೌಕರ್ಯದ ವ್ಯವಸ್ಥೆ ಕೈಗೊಳ್ಳುವಂತೆ ಇಲಾಖೆ ಪಟ್ಟಿ ಸಿದ್ದಪಡಿಸಿಕೊಂಡಿದೆ. ಬಂಟ್ವಾಳ ವಲಯದಲ್ಲಿ ಉಳ್ಳಾಲ ತಾಲೂಕಿನ ಕೆಲ ಗ್ರಾಮಗಳ ಶಾಲೆಗಳೂ ಸೇರುತ್ತವೆ.

ವಲಯದಲ್ಲಿ 42 ಕಿರಿಯ, 152 ಹಿರಿಯ ಪ್ರಾಥಮಿಕ ಶಾಲೆ ಹಾಗೂ 39 ಪ್ರೌಢಶಾಲೆಗಳು ಸೇರಿ ಒಟ್ಟು 233 ಶಾಲೆಗಳಿವೆ. ಈ ಪೈಕಿ 43 ಸರಕಾರಿ ಶಾಲೆಗಳಲ್ಲಿ ಕಟ್ಟಡ, ಕಂಪೌಂಡ್ ವಾಲ್, ಶೌಚಾಲಯ ಅಗತ್ಯದ ಬಗ್ಗೆ ಶಾಲೆಗಳಿಂದಲೇ ಬೇಡಿಕೆ ಬಂದಿದೆ. ಈಗಾಗಲೇ ಬೆಂಚ್ ಹಾಗೂ ಡೆಸ್ಕ್ ಬೇಕು ಎಂದು ಕಲ್ಲಡ್ಕ, ನೀರ್ಕಜೆ ಹಾಗೂ ವಿಟ್ಲ ಆರ್ ಎಂಎಸ್ಎ ಶಾಲೆಯಿಂದ ಬೇಡಿಕೆ ಸಲ್ಲಿಕೆಯಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸ್ಮಾರ್ಟ್ ಎಜುಕೇಶನ್ ಗೆ ಆದ್ಯತೆ ನೀಡುವ ಕಾರಣದಿಂದ ಸ್ಮಾರ್ಟ್ ಕ್ಲಾಸ್ ರೂಂ ನಿರ್ಮಾಣ ಅಗತ್ಯವಾಗಿದೆ. ಸುಮಾರು 12 ಶಾಲೆಗೆ ಸದ್ಯ ಸ್ಮಾರ್ಟ್ ತರಗತಿ ಕೋಣೆ ಅಗತ್ಯವಿದೆ. ಆದರೆ ಸ್ಮಾರ್ಟ್ ತರಗತಿ ನಡೆಸುವ ವೇಳೆ ಅದಕ್ಕೆ ಪೂರಕ ಸೌಲಭ್ಯವನ್ನು ಯಾರು ಒದಗಿಸುವುದು, ಸರಕಾರವೇ ಅಥವಾ ಸಾರ್ವಜನಿಕರೇ ಎಂಬುದು ಪ್ರಶ್ನೆ.

ತರಗತಿ ಕೊಠಡಿ ಬೇಕಾದ ಶಾಲೆಗಳು:

ಸರಕಾರಿ ಶಾಲೆಗಳಾದ ಕಲ್ಲಡ್ಕದಲ್ಲಿ 7, ಮೂಲರಪಟ್ಣ ಉರ್ದು 2, ಕಾವಲಕಟ್ಟೆ ಉರ್ದು 3, ಉಳಿಬೈಲು 2, ವಿಟ್ಲ ಆರ್ ಎಂಎಸ್ ಎ 10, ಒಕ್ಕೆತ್ತೂರು 2, ಚಂದಳಿಕೆ 1, ನಯನಾಡು 3, ಮಂಚಿ 2, ಮೂಡಂಬೈಲು 3, ಕಲ್ಲಂಗಳ ಕೇಪು ಶಾಲೆಗಳಲ್ಲಿ 3. ಕೊಠಡಿಗಳ ಬೇಡಿಕೆ ಇದೆ.

ಶೌಚಗೃಹ ಸಮಸ್ಯೆ:

ಬಾಯ್ತುಂಬಾ ಸ್ವಚ್ಛತೆಯ ಪಾಠ ಮಾಡುವ ಸರಕಾರಗಳು ಶಾಲೆಗಳ ಶೌಚಗೃಹ ದುರಸ್ತಿ, ಬೇಡಿಕೆಗಳ ವಿಷಯ ಬಂದಾಗ ಅನುದಾನ ನೀಡಲು ಲೆಕ್ಕಾಚಾರ ಮಾಡುತ್ತದೆ ಎಂದು ಪೋಷಕ ಪ್ರತಿನಿಧಿಗಳು ದೂರುತ್ತಾರೆ. ಹಲವು ಶಾಲೆಗಳಲ್ಲಿ ಶೌಚಗೃಹದ ಕೊರತೆ ಇದೆ. ರಿಪೇರಿ ಅಗತ್ಯವೂ ಇದೆ. ಕಲ್ಲಡ್ಕ 2, ಕಾವಲಕಟ್ಟೆ ಉರ್ದು 2, ವಿಟ್ಲ ಆರ್ ಎಂಎಸ್ ಎ 10, ಒಕ್ಕೆತ್ತೂರು 1, ಮಂಚಿ 1, ಸುಜೀರು 1, ಮಂಚಿ ಪ್ರಾಥಮಿಕ 8, ಸಾಲೆತ್ತೂರು ಶಾಲೆಗೆ 4 ಶೌಚಾಲಯ ಬೇಕಾಗಿದೆ.

ಕಂಪೌಂಡ್ ಕುಸಿದು ಎರಡು ವರ್ಷವಾಯಿತು

ಬಿ.ಸಿ.ರೋಡಿನ ಪೇಟೆಯಲ್ಲೇ ಇರುವ ಬಿ.ಮೂಡ ಅಜ್ಜಿಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್ ಕುಸಿದು ಎರಡು ವರ್ಷಗಳಾದರೂ ಇನ್ನೂ ನಿರ್ಮಾಣಕ್ಕೆ ಕಾಲ ಕೂಡಿ ಬಂದಿಲ್ಲ. ಹೀಗೆ ಹಲವು ಸರಕಾರಿ ಶಾಲೆಗಳಿಗೆ ಕಂಪೌಂಡ್ ವಾಲ್ ಇದ್ದರೆ ಇನ್ನೂ ಹಲವೆಡೆ ಕಂಪೌಂಡ್ ವಾಲ್ ಮಾಡಲು ಅನುದಾನ ನೀಡುವಂತೆ ಸರಕಾರಿ ಶಾಲೆಗಳು ಇಲಾಖೆಗೆ ಮನವಿ ಸಲ್ಲಿಸಿದೆ.‌

ನಲ್ಕೆಮಾರ್ ಶಾಲೆ, ಕೊಡಂಗೆ, ಕಲ್ಲಡ್ಕ, ಮೂಲರಪಟ್ಣ ಉರ್ದು, ರಾಯಿ, ಬಂಟ್ವಾಳ ಮೂಡ, ಉಳಿ, ಕಾವಲಕಟ್ಟೆ ಉರ್ದು, ಮೂಡುಪಡುಕೋಡಿ, ಒಕ್ಕೆತ್ತೂರು, ಬೋಳಂತಿಮೊಗರು, ಮಜಿ, ಸಿದ್ದಕಟ್ಟೆ, ಸಜೀಪ ಮುನ್ನೂರು,  ನಂದಾವರ, ಸಜೀಪನಡು, ಮಂಚಿ, ಕೇಪು, ಚೆನ್ನೈತ್ತೋಡಿ, ಹೂಹಾಕುವಕಲ್ಲು, ಕೊಯ್ಲ, ಕಲ್ಲರಕೋಡಿ, ಕನ್ಯಾನ, ಮಣಿನಾಲ್ಕೂರು, ಶಂಭೂರು, ಮೊಂಟೆಪದವು, ನಾವೂರು ಶಾಲೆಗಳಿಗೆ  ಕಂಪೌಂಡ್ ವಾಲ್ ಅಗತ್ಯತೆ ಇದೆ ಎಂದು ಶಾಲೆಗಳಿಂದ ಇಲಾಖೆಗೆ ಬೇಡಿಕೆ ಪಟ್ಟಿ ಸಲ್ಲಿಕೆಯಾಗಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.