“ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (IFA) ಸಂಸ್ಥೆಯ ಆರ್ಕೈವ್ ಮತ್ತು ಮ್ಯೂಸಿಯಂಸ್ ಕಾರ್ಯಕ್ರಮದ ಅಡಿಯಲ್ಲಿ, ರಾಣಿ ಅಬ್ಬಕ್ಕ ತುಳು ಸಂಗ್ರಹಾಲಯ ಮತ್ತು ಅಧ್ಯಯನ ಕೇಂದ್ರದ ಹಾಗೂ ಟಾಟಾ ಟ್ರಸ್ಟ್ ಸಹಯೋಗದಲ್ಲಿ ತುಳುನಾಡಿನ ಸಂಸ್ಕೃತಿ, ಜೀವನಶೈಲಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ “ಹಸಿರು ಹೊದಿಕೆಯಡಿ– ತುಳು ಜೀವನದ ಸಾಂಸ್ಕೃತಿಕ ಪರಂಪರೆ” ಎಂಬ ವಿಶೇಷ ವಸ್ತುಪ್ರದರ್ಶನವನ್ನು ಒಂದು ತಿಂಗಳ ಕಾಲ ಆಯೋಜಿಸಲಾಗಿದೆ ಎಂದು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಸ್ಥಾಪಕರಾದ ಪ್ರೊ. ತುಕಾರಾಂ ಪೂಜಾರಿ ಹೇಳಿದರು.
ಬಿ.ಸಿ.ರೋಡ್‌ನ ಸಂಚಯಗಿರಿಯಲ್ಲಿರುವ ಕೇಂದ್ರದ ಆವರಣದಲ್ಲಿ ಶನಿವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಗ್ರಹಾಲಯವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಸಾಂಸ್ಕೃತಿಕ ಆಕರ್ಷಣೆಯಾಗಿದ್ದು, ತುಳುನಾಡಿನ ಸಾಂಪ್ರದಾಯಿಕ ಜೀವನಶೈಲಿಯನ್ನು ಜೀವಂತವಾಗಿ ಪರಿಚಯಿಸುವ ಸಮಗ್ರ ಅನುಭವವನ್ನು ನೀಡುತ್ತಿದೆ. ಇಲ್ಲಿ ಪುರಾತನ ಕೃಷಿ ಉಪಕರಣಗಳು, ಮನೆಬಳಕೆಯ ವಸ್ತುಗಳು, ಜನಪದ ಕಲಾಕೃತಿಗಳು ಹಾಗೂ ಆಚರಣೆಗಳಿಗೆ ಸಂಬಂಧಿಸಿದ ಅಪರೂಪದ ಸಂಗ್ರಹಗಳು ಸಂರಕ್ಷಿಸಲ್ಪಟ್ಟಿವೆ.
ಈ ಬಾರಿ, ಮ್ಯೂಸಿಯಂ ವಿನ್ಯಾಸಕಾರರಾದ ಮಧುಶ್ರೀ ಕಾಮಕ್ ಮತ್ತು ಬ್ರಿಯಾನ್ ನೆಜಿಲ್ ಡಿ’ಸೋಜಾ ಅವರು ಐಎಫ್ ಎ ಹಾಗೂ ಟಾಟಾ ಟ್ರಸ್ಟ್ ನೆರವಿನಲ್ಲಿ ಈ ವಿಶೇಷ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿದ್ದು, ಈ ಪ್ರದರ್ಶನದಲ್ಲಿ ತುಳು ಜನರ ಜೀವನಚಕ್ರವನ್ನು ಪ್ರತಿಬಿಂಬಿಸುವ ಹತ್ತು ಪ್ರಮುಖ ವಸ್ತುಗಳನ್ನು ಆಯ್ಕೆ ಮಾಡಲಾಗಿದೆ. ಹುಟ್ಟಿನಿಂದ ಅಂತ್ಯಕ್ರಿಯೆಗಳವರೆಗೆ ನಡೆಯುವ ಆಚರಣೆಗಳು ಮತ್ತು ದೈನಂದಿನ ಬದುಕಿನ ಅಂಶಗಳನ್ನುನೋಡುಗರಿಗೆ ಪರಿಚಯಿಸಲಾಗುತ್ತದೆ ಎಂದರು.
ಐಎಫ್ ಎ ಕಾರ್ಯಕ್ರಮ ಸಂಯೋಜಕಿ ರುತ್ವಿಕಾ ಮಿಶ್ರಾ ರವರು ಮಾತನಾಡಿ, ಇಂದಿನ ಮಕ್ಕಳು ಈ ಪ್ರದರ್ಶನದ ಜೊತೆ ಜೋಡಿಸಿಕೊಂಡು ಇದರ ಸದುಪಯೋಗ ಪಡಿಸಿಕೊಂಡಾಗ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಿದೆ ಎಂದರು.
ಐಎಫ್ ಎ ಗ್ರ್ಯಾಂಟಿಗಳಾದ ಮಧುಶ್ರೀ ಕಾಮಕ್ ಹಾಗೂ ಬ್ರಿಯಾನ್ ನೆಜಿಲ್ ಡಿ’ಸೋಜಾ ರವರು ಮಾತನಾಡಿ, ಮರದ ತೊಟ್ಟಿಲು, ತೆಂಗಿನಕಾಯಿ ಗೆರಟೆಯಿಂದ ತಯಾರಿಸಿದ ಉಪಕರಣಗಳು ಹಾಗೂ ವಿವಿಧ ಆಚರಣಾತ್ಮಕ ವಸ್ತುಗಳು ಪ್ರದರ್ಶನದ ಪ್ರಮುಖ ಆಕರ್ಷಣೆಗಳಾಗಿವೆ. ಈ ವಸ್ತುಗಳು ತುಳುನಾಡಿನ ಸಂಪ್ರದಾಯ, ಜೀವನೋಪಾಯ ಹಾಗೂ ಪರಿಸರ ಜ್ಞಾನವನ್ನು ಪ್ರತಿಬಿಂಬಿಸುತ್ತವೆ ಎಂದರು.
ಐ ಎಫ್ ಎ ಗ್ರ್ಯಾಂಟಿಗಳಾದ ಮಧುಶ್ರೀ ಕಾಮಕ್, ಬ್ರಿಯಾನ್ ಡಿ’ಸೋಜ, ರಾಣಿ ಅಬ್ಬಕ್ಕ ತುಳು ಬದುಕು ವಸ್ತು ಸಂಗ್ರಹಾಲಯದ ಕಾರ್ಯದರ್ಶಿ ಡಾ.ಆಶಾಲತಾ ಸುವರ್ಣ, ಕು.ಸಿಂಧೂರ, ಪಲ್ಲವಿ, ದಾಮೋದರ ಸಂಚಯಗಿರಿ ಉಪಸ್ಥಿತರಿದ್ದರು.