ಬಂಟ್ವಾಳ: ಭಾರತೀಯ ಪಾರಂಪರಿಕ ರಂಗಭೂಮಿಯಲ್ಲಿ ಯಕ್ಷಗಾನ ಕ್ಷೇತ್ರದ ಪ್ರಾತಿನಿಧಿಕ ಕಲಾವಿದ ದಶಾವತಾರಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ವರನಟ ಡಾ.ಕೆ.ಗೋವಿಂದ ಭಟ್ ಸೂರಿಕುಮೇರು ಅವರಿಗೆ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ರಿ. ಸಂಪಾಜೆ ವತಿಯಿಂದ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಏಪ್ರಿಲ್ 13ರಂದು ನಡೆಯಲಿದೆ.
ಬೆಳಗ್ಗೆ 11ರಿಂದ ಅಪರಾಹ್ನ 5 ಗಂಟೆವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಗೋವಿಂದ ಸ್ಮರಣೆ, ಸ್ಮರಣ ಭೋಜನ ಮತ್ತು ಗೋವಿಂದಾರ್ಪಣ ಎಂಬ ಹೆಸರಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡುವರು. ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮತ್ತು ಮಂಗಳೂರು ವಿ.ವಿ. ಕುಲಪತಿ ಪ್ರೊ.ಪಿ.ಎಲ್. ಧರ್ಮ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರಮುಖರು ಈ ವೇಳೆ ಗೋವಿಂದ ಭಟ್ ಅವರ ಕುರಿತು ಮಾತನಾಡುವರು. ಬಳಿಕ ಸ್ಮರಣ ಭೋಜನ ನಂತರ, ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ವತಿಯಿಂದ ಗೋವಿಂದಾರ್ಪಣ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಪ್ರಕಟಣೆ ತಿಳಿಸಿದೆ.