ಬಂಟ್ವಾಳ: ಕೃಷಿ ವಿಜ್ಞಾನಿ ಹರೀಶ್ ಶೆಣೈ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗ ಪಿ.ಎಚ್.ಡಿ. ನೀಡಿದೆ. ಅವರು ಎಫೆಕ್ಟ್ ಆಫ್ ಆರ್ಗನಿಕ್ ಎಂಡ್ ಇನ್ ಆರ್ಗನಿಕ್ ಸೋರ್ಸಸ್ ಆಫ್ ನೈಟ್ರೋಜನ್ ಒನ್ ಗ್ರೋಥ್ ಎಂಡ್ ಯಿಲ್ಡ್ ಆಫ್ ಖರೀಫಾ ರೈಸ್ (ಒರೈಸಾ ಸಟೈವಾ ಎಲ್) ಎಂಬ ಮಹಾಪ್ರಬಂಧವನ್ನು ಮಂಗಳೂರು ವಿವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಸಂಶೋಧನಾ ಮಾರ್ಗದರ್ಶಕರಾದ ಡಾ. ಸಿದ್ದರಾಜು ಎಂ. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಮಾರ್ಚ್ 28ರಂದು ನಡೆದ ಮಂಗಳೂರು ವಿವಿ ಘಟಿಕೋತ್ಸವದಲ್ಲಿ ಅವರಿಗೆ ಪಿ.ಎಚ್.ಡಿ. ಪ್ರದಾನ ಮಾಡಲಾಗಿದೆ.
ಮಂಗಳೂರಿನ ಎಕ್ಕೂರಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಳೆದ 16 ವರ್ಷಗಳಿಂದ ಬೇಸಾಯಶಾಸ್ತ್ರ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಶೆಣೈ, ಕೃಷಿ ಕ್ಷೇತ್ರದಲ್ಲಿನ ನೂತನ ತಂತ್ರಜ್ಞಾನಗಳನ್ನು ರೈತರಿಗೆ ಮುಟ್ಟಿಸುವಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದ್ದು ಕೃಷಿಕರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಡಾ. ಹರೀಶ್ ಶೆಣೈ ಮೂಲತಃ ಮೂಡುಬಿದಿರೆ ತಾಲೂಕಿನ ಮಿಜಾರು ಶೆಣೈ ಮನೆತನದವರಾಗಿದ್ದು, ಪ್ರಸ್ತುತ ಬಂಟ್ವಾಳದ ಬಿ.ಸಿ.ರೋಡಿನ ಸಂಚಯಗಿರಿ ಬಡಾವಣೆಯಲ್ಲಿ ವಾಸ್ತವ್ಯವಿದ್ದಾರೆ.