ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದ ಪ್ರತಿಷ್ಠಾ ದಿನದ ಕಾರ್ಯಕ್ರಮದ ಸುಧರ್ಮ ಸಭೆ ಶುಕ್ರವಾರ ಸಂಜೆ ನಡೆಯಿತು.
ಹೊರನಾಡು ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ಡಾ.ಜಿ.ಭೀಮೇಶ್ವರ ಜೋಷಿ ದೀಪಪ್ರಜ್ವಲನ ಮಾಡಿ ಮಾತನಾಡಿ, ದೇವರ ಅನುಗ್ರಹ ನಿರಂತರವಾಗಿ ಹರಿಯುವ ವ್ಯವಸ್ಥೆ ಮಾಡಿಕೊಂಡರೆ ಬದುಕು ಸಾರ್ಥಕವಾಗುತ್ತದೆ. ದೇವತಾ ಸಾನಿಧ್ಯಕ್ಕೆ ಅಳತೆಗೊಲು ಇಲ್ಲ. ಸಣ್ಣ ಗುಡಿ, ದೊಡ್ಡ ದೇವಾಲಯಗಳಲ್ಲಿ ಚೈತನ್ಯಬೊಂದೇ. ಮೂಲತತ್ವ ಉಳಿಸಿಕೊಂಡು ಹೋಗಬೇಕು. ಬದುಕು ಸೃಜನಶೀಲವಾಗಬೇಕು ಎಂದರು
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಸಮಾಜ, ಧರ್ಮದ ಸಂಸ್ಕಾರ ಉಳಿವಿಗೆ ದೇವರಲ್ಲಿ ಅಚಲವಾದ ವಿಶ್ವಾಸ ಅಗತ್ಯ. ನಾವು ಹಿಂದು ಧರ್ಮದಲ್ಲಿ ಹುಟ್ಟಿದ್ದೇವೆ ಎಂದು ಧೈರ್ಯದಿಂದ ಹೇಳಬಹುದು. ದೇವಸ್ಥಾನ ಜೀರ್ಣೋದ್ಧಾರದಿಂದ ಧರ್ಮದ ಉಳಿವು ಸಾಧ್ಯ ಎಂದರು
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಶಿವನ ಆಂತರ್ಯದಲ್ಲಿ ವಿಷ್ಣು ಇದ್ದಾನೆ, ವಿಷ್ಣುವಿನ ಆಂತರ್ಯದಲ್ಲಿ ಶಿವನಿದ್ದಾನೆ. ಧರ್ಮ, ಸಂಸ್ಕೃತಿ ಉಳಿವಿಗೆ ಬ್ರಹ್ಮಕಲಶೋತ್ಸವ ಅಗತ್ಯ ಎಂದರು.
ಕದಂಬ ಫೌಂಡೇಶನ್ ಸ್ಥಾಪಕ ಕೇಂದ್ರ ಮಾಜಿ ಸಚಿವ ಅನಂತಕುಮಾರ ಹೆಗಡೆ ಮಾತನಾಡಿ, ಹಿಂದುತ್ವ ಎಂಬುದು ನಿರಂತರ ಪ್ರವಾಹ. ಹಿಂದುತ್ವವನ್ಮು ಅರ್ಥಮಾಡಿಕೊಳ್ಳಲು ಯೋಗ್ಯತೆ ಬೇಕು ಎಂದರು.
ವಾದಕ್ಕೆ ಪ್ರತಿವಾದ ಇದೆ. ಎಡಚರದ್ದು ವಾದವೂ ಅಲ್ಲ, ವಿತಂಡವಾದ. ಇಡಿಯಾಗಿದ್ದದ್ದನ್ನು ಒಡೆಯುವುದನ್ನು ಎಡಚಿಂತಕರ ವಾದವಾಗಿದೆ. ಆಚರಣೆಗಳಿಗೆ ಶಾಸ್ತ್ರೀಯವಾದ ನೆಲೆಗಟ್ಟಿದೆ. ಭವತಿ ಇತಿ ಭೂತಂ. ನಗತೀ ಇತಿ ನಾಗ. ಭೂತ ಮತ್ತು ನಾಗ ಶಬ್ದದ ಉಗಮದ ಕುರಿತು ಹೇಳಿದ ಹೆಗಡೆ, ಹೀನಂ ದೂಷಯತಿ ಇತಿ ಹಿಂದು ಎಂದರು. ನಮ್ಮ ಸಂಸ್ಕೃತಿ, ಮಾತೇ ನನಗೆ ಆಧಾರ. ವ್ಯಾವಹಾರಿಕ ಕಲ್ಪನೆಯಲ್ಲಿ ದೇವಸ್ಥಾನಕ್ಕೆ ಬರೋದಲ್ಲ, ಅಲ್ಲಿ ಸಂಪೂರ್ಣವಾಗಿ ಶರಣಾಗತನಾಗಬೇಕು, ಖಾಲಿಯಾಗಿ ನೋಡಿ, ಆ ಶಕ್ತಿಯ ಆವಿರ್ಭಾವ ಹೇಗೆ ಎಂದು ಗೊತ್ತಾಗುತ್ತದೆ . ಕಲ್ಮಶವೇ ತುಂಬಿದ ಬದುಕನ್ನು ತ್ಯಜಿಸಿ ಎಂದರು.ಈ ಜಗತ್ತಿನ ಮಹಾಸೃಷ್ಟಿಯ ಚೈತನ್ಯ ಮಹಾಲಿಂಗ. ನಾವು ಸಾಮಾನ್ಯವಾಗಿ ದ್ವೈತ ಭಾವದಿಂದ ಜಗತ್ತನ್ನು ನೋಡುತ್ತೇವೆ. ಇದು ಹೀಗಿದೆ, ಹೀಗಿತ್ತು ಎನ್ನಲು ರೂಪಗಳು ಸೃಷ್ಟಿಯಾದವು ಎಂದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ನಮ್ಮೂರಲ್ಲಿ ಹೊಸ ಯೋಚನೆ, ಕಲ್ಪನೆ ಮಾಡುವವರಿದ್ದರೆ ಅವರನ್ನು ಪ್ರೋತ್ಸಾಹಿಸಬೇಕು. ಬ್ಯಾಕ್ ಟು ಊರು ಪರಿಕಲ್ಪನೆಯಂತೆ ಕೆಲಸ ಮಾಡುತ್ತೇನೆ ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಡಾ.ಟಿ.ಶಾಮ ಭಟ್ ವಹಿಸಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಶುಭ ಹಾರೈಸಿದರು. ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನ ಪ್ರಧಾನ ಅರ್ಚಕ ವೇ.ಮೂ.ವಿದ್ವಾನ್ ಪ್ರಭಾಕರ ಅಡಿಗ, ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಪೆರುವಡಿ ರಾಮಕೃಷ್ಣ ಭಟ್, ದೇಲಂತಮಜಲು ದೇವಸ್ಥಾನದ ಆಡಳಿತ ಮೊಕ್ತೇಸರ ಗಣೇಶ್ ಭಟ್ ದೇಲಂತಮಜಲು, ಉದ್ಯಮಿ ರಶ್ಮಿತ್ ಶೆಟ್ಟಿ ಕೈತ್ರೋಡಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸೇರಾಜೆ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಅರುಣ ಶಾಮ್ ಸ್ವಾಗತಿಸಿದರು. ವಿದ್ಯಾ ಜಯರಾಮ ಭಟ್ ಕಜೆ ಪ್ರಾರ್ಥಿಸಿದರು. ಗಣಪತಿ ಪಿ.ಕೆ. ಪದ್ಯಾಣ ವಂದಿಸಿದರು. ವಿ.ಬಿ.ಹಿರಣ್ಯ ಮತ್ತು ಪ್ರಸನ್ನ ಕೆ. ಕಾರ್ಯಕ್ರಮ ನಿರ್ವಹಿಸಿದರು.ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ, ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಸೇರಾಜೆ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಾಮಸುದರ್ಶನ ಹೊಸಮೂಲೆ, ಕಾರ್ಯದರ್ಶಿ ಕೃಷ್ಣ ಎಂ.ಆರ್, ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು ಉಪಸ್ಥಿತರಿದ್ದರು