ಗೋಳ್ತಮಜಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಲಿಂಜ ಪರಿಸರದಲ್ಲಿ ರಸ್ತೆ ಬದಿಯಲ್ಲಿ ಹರಡಿಕೊಂಡಿದ್ದ ತ್ಯಾಜ್ಯ ವಿಲೇವಾರಿಗೆ ಸಂಭಂಧಪಟ್ಟಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಪಂಚಾಯಿತಿ ಅಲ್ಲೀಗ ಸಿಸಿ ಕ್ಯಾಮರಾ ಅಳವಡಿಸಿದೆ.
ಗೋಳ್ತಮಜಲು ಗ್ರಾಮ ಪಂಚಾಯಿತಿ ವತಿಯಿಂದ ಆ ಪ್ರದೇಶದಲ್ಲಿ ಅಳವಡಿಸಲಾದ ಕ್ಯಾಮರಾ ಕಸ ಎಸೆಯುವವರನ್ನು ಪತ್ತೆ ಹಚ್ಚಲಿದೆ.
ಯಾರೋ ಕೋಳಿತ್ಯಾಜ್ಯ ಸಹಿತ ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ರಾತ್ರೋರಾತ್ರಿ ವಾಹನಗಳಲ್ಲಿ ಬಂದು ತ್ಯಾಜ್ಯ ಎಸೆಯುವುದಲ್ಲದೆ, ಹಗಲಲ್ಲೂ ಯಾರೂ ಇಲ್ಲದ ವೇಳೆ ಕಸ ಎಸೆಯುವ ಪ್ರವೃತ್ತಿಯನ್ನು ರೂಢಿಸಿಕೊಂಡಿದ್ದರು. ಇಲ್ಲಿಗೆ ಸಮೀಪದ ಅಂಗನವಾಡಿಯಲ್ಲಿ ಮಕ್ಕಳು ಹೋಗಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾಲದಕ್ಕೆ ರಸ್ತೆಯಲ್ಲಿ ಬೀದಿ ನಾಯಿಗಳು ತ್ಯಾಜ್ಯವನ್ನು ಎಳೆದಾಡಿಕೊಳ್ಳುವುದು, ದಾರಿಹೋಕರನ್ನು ಕಚ್ಚಲು ಬರುವುದನ್ನು ಮಾಡುತ್ತಿದ್ದವು. ಇದರಿಂದ ಸ್ಥಳೀಯವಾಗಿ ಭೀತಿಯ ವಾತಾವರಣವೂ ಸೃಷ್ಟಿಯಾಗಿತ್ತು. ಪಂಚಾಯಿತಿ ಆಡಳಿತ ಸ್ವಚ್ಛಗೊಳಿಸಿದ ಬಳಿಕವೂ ಕಸ ಎಸೆಯುವ ಪ್ರವೃತ್ತಿಯನ್ನು ಮುಂದುವರಿಸುತ್ತಿರುವ ಕುರಿತು ಊರವರು ಗಮನ ಸೆಳೆದಿದ್ದರು.