ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪುಟ್ಟ ಊರು ಪದ್ಯಾಣ. ಈ ಊರಿನ ಸುತ್ತಮುತ್ತಲೂ ಹಸಿರು ಹೊದ್ದುಕೊಂಡಂತಿದೆ. ಸುಂದರವಾದ ಈ ಪ್ರಕೃತಿಯ ರಮ್ಯ ಮಡಿಲಲ್ಲಿರುವ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಬಹು ಪುರಾತನ ಹಾಗೂ ಕಾರಣಿಕ ಕ್ಷೇತ್ರವಾಗಿದೆ. 2026ರ ಮಾರ್ಚ್ 30ರಿಂದ ಏಪ್ರಿಲ್ 6ರವರೆಗೆ ಬ್ರಹ್ಮಕಲಶೋತ್ಸವಕ್ಕೆ ಕ್ಷೇತ್ರ ಸಜ್ಜಾಗಿ ನಿಂತಿದೆ. ಊರ, ಪರವೂರ ಭಕ್ತರು ಪ್ರತಿದಿನ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಉತ್ಸಾಹದಲ್ಲಿದ್ದಾರೆ. ನಾಡಿನ ವಿವಿಧ ಸಂತರು, ಮಠಾಧೀಶರು, ಚಿಂತಕರು ಪಾಲ್ಗೊಳ್ಳಲಿದ್ದಾರೆ. padyana brahmakalashotsava
ದೇವಸ್ಥಾನದ ಕುರಿತು ಪೂರಕ ಮಾಹಿತಿಗೆ ಹಾಗೂ ಹೆಚ್ಚಿನ ವಿವರಗಳಿಗೆ https://padyanatemple.in/ ಗೆ ಭೇಟಿ ನೀಡಿರಿ
ಕಾರಣಿಕದ ಕ್ಷೇತ್ರ
ಪಶ್ಚಿಮಮುಖಿಯಾಗಿ ನೆಲೆಯಾಗಿರುವ ಸಪರಿವಾರ ಶ್ರೀ ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥಿಸಿದರೆ ವಿದ್ಯೆ, ಬುದ್ಧಿ, ಆರೋಗ್ಯ, ಉದ್ಯೋಗ, ವಿವಾಹ, ಸತ್ಸಂತಾನ ಹಾಗೂ ಕೃಷಿ ಸಮೃದ್ಧಿಗಳನ್ನು ಅನುಗ್ರಹಿಸುತ್ತಾನೆ ಎನ್ನುವುದಕ್ಕೆ ಹಲವಾರು ನಿದರ್ಶನಗಳು ಇವೆ. ಇಲ್ಲಿ ಹಲವರು ಇದರ ಅನುಭೂತಿಯನ್ನು ಪಡೆದುಕೊಂಡಿದ್ದಾರೆ.
ಕಲಾಪ್ರಿಯನಾದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವರು ಯಕ್ಷಗಾನ, ಸಂಗೀತ, ಸಾಹಿತ್ಯ, ನೃತ್ಯ ಕಲಾಕ್ಷೇತ್ರಗಳಲ್ಲಿ ಪದ್ಯಾಣದ ಕೀರ್ತಿಯನ್ನು ಬೆಳಗಿಸಿದ್ದಾನೆ. ಶ್ರೀ ಕ್ಷೇತ್ರದಲ್ಲಿ ನಡೆಯುವ ಶ್ರೀ ಚಕ್ರ ಪೂಜೆಯು ಬಹಳ ವೈಶಿಷ್ಟ್ಯಪೂರ್ಣವಾಗಿದ್ದು, ಭಕ್ತಿಪೂರ್ವಕವಾಗಿ ಇಲ್ಲಿ ಪೂಜೆಯನ್ನು ಮಾಡಿ ಫಲಪ್ತಾಪ್ತಿಯಾದ ಉದಾಹರಣೆಗಳನ್ನು ಸ್ಥಳೀಯರಷ್ಟೇ ಅಲ್ಲ, ಪರವೂರ ಭಕ್ತರೂ ತಿಳಿಸುತ್ತಾರೆ.
ಸಾಹಿತ್ಯ-ಸಾಂಸ್ಕೃತಿಕ ಹಿನ್ನೆಲೆ
ಈ ಪದ್ಯಾಣದ ಪುಣ್ಯ ನೆಲದಲ್ಲಿ, ಯಕ್ಷಗಾನ ಭಾಗವತಿಕೆಯ ಆಲಾಪನೆ ಇದೆ, ಚೆಂಡೆ ಮದ್ದಳೆಗಳ ಝೇಂಕಾರವಿದೆ, ಭರತನಾಟ್ಯದ ಲಾಸ್ಯವಿದೆ, ಸಂಗೀತದ ಮಾಧುರ್ಯವಿದೆ, ಗಮಕದ ಸೌರಭವಿದೆ. ಪದ್ಯಾಣದ ಪ್ರತಿ ಮನೆಗಳಲ್ಲಿ ಯಕ್ಷಗಾನ, ಸಂಗೀತ, ಗಮಕ, ಕಲೆ- ಸಾಹಿತ್ಯದ ಕಲಾವಿದರನ್ನು, ಕಲಾಸಕ್ತರನ್ನು ಕಾಣಬಹುದು. ಕನ್ನಡದ ಗಂಡುಕಲೆ ಯಕ್ಷಗಾನಕ್ಕೆ ಪದ್ಯಾಣ ಮನೆತನದವರ ಹಾಗೂ ಕರೋಪಾಡಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರ ಕೊಡುಗೆ ಅನುಪಮವಾದುದು. ಹಿರಿಕಿರಿಯ ಕಲಾವಿದರು ಯಕ್ಷಗಾನ ಮೇಳದಲ್ಲಿದ್ದು ಯಕ್ಷಗಾನ ಕ್ಷೇತ್ರವನ್ನು ಬೆಳಗಿದ್ದಾರೆ- ಬೆಳಗುತ್ತಿದ್ದಾರೆ. ಸಾಹಿತ್ಯ ಲೋಕಕ್ಕೆ ಗಮನಾರ್ಹ ಕೊಡುಗೆ ನೀಡಿದ ಸಾಹಿತಿಗಳೂ ಪದ್ಯಾಣ ಹಾಗೂ ಸುತ್ತಮುತ್ತಲಿನ ಗ್ರಾಮದವರು ಎಂಬುದು ಹೆಮ್ಮೆಯ ವಿಷಯ.
ಪದ್ಯಾಣ, ಕುರಿಯ, ಸೇರಾಜೆ, ಮಾಂಬಾಡಿ, ತಲೆಂಗಳ, ಚಿಪ್ಪಾರು, ತೆಂಕಬೈಲು ಪಟ್ಲ, ಕನ್ಯಾನ, ನೀರ್ಪಾಜೆ, ಪಾದೇಕಲ್ಲು, ಬಾಯಾರು ಹಾಗೂ ಸುತ್ತಮುತ್ತಲಿನ ಪ್ರದೇಶಗಳು ರಾಜ್ಯ, ರಾಷ್ಟ್ರದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಗಮನ ಸೆಳೆದ ಸಾಹಿತಿಗಳು, ಕಲಾವಿದರು, ಸಾಧಕರನ್ನು ನೀಡಿವೆ.
ಮಧ್ಯಾಹ್ನಕ್ಕೆ ಪದ್ಯಾಣ
ಮಧ್ಯಾಹ್ನಕ್ಕೆ ಪದ್ಯಾಣ ಎಂಬುದು ಇಲ್ಲಿ ಪ್ರಚಲಿತವಿರುವ ಹಳೆಯ ಆಡುನುಡಿ. ಸ್ಥಳೀಯ ಮನೆಗಳಿಗೆ ಮಧ್ಯಾಹ್ನದ ಹೊತ್ತಿಗೆ ಯಾರೇ ಬಂದರೂ ಅವರಿಗೆ ಆತಿಥ್ಯ ನೀಡುವ ಮನೆಗಳು ಇಲ್ಲಿವೆ ಎಂಬುದು ಜನಜನಿತ.
ಅಂದಿನಿಂದ ಇಂದಿನವರೆಗೆ
ವಿಟ್ಲದ ಅರಸು ಸೀಮೆಗೆ ಸೇರಿದ ಈ ದೇಗುಲ ಬಹಳ ಕಾಲ ಪಾಳುಬಿದ್ದಿದ್ದು, ಮುಳಿಹುಲ್ಲಿನ ಮಾಡಿನಿಂದ ಕೂಡಿತ್ತು. ಸುಮಾರು ಆರುನೂರು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನವನ್ನು ಪುನರ್ ನಿರ್ಮಾಣಗೊಳಿಸಿ 1975ರಲ್ಲಿ ಅಂದಿನ ಆಡಳಿತ ಮೊಕ್ತೇಸರರಾದ ದಿ. ಸೇರಾಜೆ ನಾರಾಯಣ ಭಟ್ಟರ ನೇತೃತ್ವದಲ್ಲಿ ಊರ ಪರವೂರ ಭಕ್ತರ ಸಹಕಾರದೊಂದಿಗೆ ನವೀಕೃತ ದೇವಾಲಯದಲ್ಲಿ ಶ್ರೀಚಕ್ರ ಸಹಿತ ಶ್ರೀಮಹಾಲಿಂಗೇಶ್ವರ ಸ್ವಾಮಿಯ ಪ್ರತಿಷ್ಠೆಯಾಗಿ ಬ್ರಹ್ಮಕಲಶಾಭಿಷೇಕವಾಯಿತು.
ದೇವಸ್ಥಾನದಲ್ಲಿ ಮೂರು ಹೊತ್ತು ಪೂಜೆ, ಪರ್ವದಿನಗಳ ಆಚರಣೆ, ವಾರ್ಷಿಕ ರಂಗಪೂಜೆ, ಪ್ರತಿ ಸೋಮವಾರ ಭಜನೆ ಇತ್ಯಾದಿ ಕಾರ್ಯಕ್ರಮಗಳನ್ನು ಊರ-ಪರಪೂರ ಭಕ್ತರ ನೆರವಿನಿಂದ ನಡೆಸಿಕೊಂಡು ಬರಲಾಯಿತು.
1992 ನೇ ಇಸವಿಯಲ್ಲಿ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಸಿ, 1994 ರಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಷ್ಟ ಬಂದ ಸಹಿತ ದ್ರವ್ಯಕಲಶಾಭಿಷೇಕವನ್ನು ನೆರವೇರಿಸಲಾಯಿತು. ಕ್ಷೇತ್ರದ ತಂತ್ರಿಗಳ ಹಾಗೂ ದೈವಜ್ಞರುಗಳ. ಮಾರ್ಗದರ್ಶನದಂತೆ ಪ್ರಥಮ ಹಂತದಲ್ಲಿ 2006 ನೇ ಇಸವಿಯಲ್ಲಿ ನಾಗ- ಶಾಸ್ತಾರ ಪ್ರತಿಷ್ಠೆ, ಧೂಮಾವತಿ ಹಾಗೂ ಕೊರತಿ ದೈವಸ್ಥಾನದ ನವೀಕರಣ- ಬ್ರಹ್ಮಕಲಶಾದಿಗಳನ್ನು ನಡೆಸಿ, ಪ್ರತಿ ವರ್ಷ ದೈವಗಳಿಗೆ ನೇಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
ತದನಂತರ ದ್ವಿತೀಯ ಹಂತದಲ್ಲಿ ಪೂರ್ವಕಾಲದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಚಕ್ರಕ್ಕೆ ನೂತನ ಗರ್ಭಗೃಹ ನಿರ್ಮಾಣ, ಪಾಕಶಾಲೆ, ಕೊಠಡಿಗಳ ನಿರ್ಮಾಣ, ದೇವಸ್ಥಾನದ ಹೊರಾಂಗಣಕ್ಕೆ ಛಾವಣಿ ಹಾಗೂ ಇತರ ಅಗತ್ಯಪಟ್ಟ ಕೆಲಸಗಳನ್ನು ಪೂರೈಸಿ, ಪೂಜ್ಯ ಯತಿವರ್ಯರುಗಳ ಆಶೀರ್ವಾದ, ಪೂಜ್ಯ ಧರ್ಮಸ್ಥಳ ಡಾ. ವೀರೇಂದ್ರ ಹೆಗ್ಗಡೆಯವರ ವಿಶೇಷ ಮಾರ್ಗದರ್ಶನ, ಹಲವು ಕ್ಷೇತ್ರಗಳ ಸಹಾಯಹಸ್ತ, ಊರ-ಪರವೂರ ದಾನಿಗಳ ನೆರವಿನಿಂದ 2009 ಜನವರಿ 4 ರಿಂದ 11ರವರೆಗೆ ಶ್ರೀ ದೇವರ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವನ್ನು ಬಹು ವಿಜೃಂಭಣೆಯಿಂದ ನಡೆಸಿ, ಉತ್ಸವವನ್ನು ಪ್ರಾರಂಭಿಸಲಾಯಿತು.ಅಲ್ಲದೆ ದೇವಸ್ಥಾನದಲ್ಲಿ ಸೇವೆ, ಶುಭಕಾರ್ಯಗಳನ್ನು ನಡೆಸುವರೆ ಸಂಪೂರ್ಣ ವ್ಯವಸ್ಥೆಯನ್ನು ಕಲ್ಪಿಸಲಾಯಿತು.
ಬ್ರಹ್ಮಕಲಶೋತ್ಸವ ಸಂಭ್ರಮ
ಆಗಮ ಶಾಸ್ತ್ರದ ಪ್ರಕಾರ, ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಶ್ರೀದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕವನ್ನು ನಡೆಸಬೇಕು. ಕಳೆದ ಬಾರಿಯ ಬ್ರಹ್ಮಕಲಶಾಭಿಷೇಕದ ನಂತರ, ಈಗ ಹದಿನಾರು ವರ್ಷಗಳು ಸಂದುಹೋಗಿವೆ. ದೇವಸ್ಥಾನದ ಪುನರ್ ನಿರ್ಮಾಣದ ಸುವರ್ಣಾಚರಣೆಯ ಈ ಶುಭ ಸಂದರ್ಭದಲ್ಲಿ ಶ್ರೀದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕವನ್ನು ನಡೆಸಲು ತೀರ್ಮಾನಿಸಿ, 2024ರ ನವೆಂಬರ್ 20ರಂದು ವೇದಮೂರ್ತಿ ಶ್ರೀ ಬೋಳಂತಕೋಡಿ ರಾಮ ಭಟ್ಟರ ಮೂಲಕ ತಾಂಬೂಲ ಪ್ರಶ್ನೆಯನ್ನು ಶ್ರೀ ಕ್ಷೇತ್ರದಲ್ಲಿ ಇರಿಸಲಾಯಿತು. ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವ, ದೈವಜ್ಞರ ನಿರ್ದೇಶನ ಹಾಗೂ ವಾಸ್ತುಶಿಲ್ಪಿಗಳಾದ ಶ್ರೀ ಎಸ್.ಎಂ.ಪ್ರಸಾದ ಮುನಿಯಂಗಳ ಇವರ ವಾಸ್ತುಶಿಲ್ಪ ಸಲಹೆಗಳ ಪ್ರಕಾರ, ಬ್ರಹ್ಮಕಲಶೋತ್ಸವ ಕಾರ್ಯ ನಡೆಸಲು ತೀರ್ಮಾನಿಸಲಾಯಿತು. ಇದೀಗ ಭಕ್ತರ ದೊಡ್ಡ ತಂಡವೇ ಇದಕ್ಕೆ ಸಿದ್ಧವಾಗಿ ನಿಂತಿದೆ.
ಭವ್ಯವಾದ, ದಿವ್ಯವಾದ ಹಿನ್ನೆಲೆಯುಳ್ಳ ಪದ್ಯಾಣದಲ್ಲಿ ಇದೀಗ ಶ್ರೀ ದೇವಳದ ಪುನರ್ ನವೀಕರಣ ಹಾಗೂ ಬ್ರಹ್ಮಕಲಶೋತ್ಸವದ ಸಡಗರ, ಸಂಭ್ರಮದ ಹೊತ್ತು. ಇದಕ್ಕಾಗಿಯೇ ಊರ, ಪರವೂರವರ ಶ್ರಮದಾನ, ಧನದಾನ.ಹೀಗೆ ತನು, ಮನ, ಧನದ ಸಹಕಾರದೊಂದಿಗೆ ಪದ್ಯಾಣ ನಭೂತೋ ಎನ್ನುವ ರೀತಿಯಲ್ಲಿ ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗುತ್ತಿದೆ.
ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಶಿವರಾತ್ರಿಯಂದು ಶಿವಾರ್ಪಣಂ ಹಾಗೂ ಬಳಿಕ ರುದ್ರನಮನಂ ಎಂಬ ಕಾರ್ಯಕ್ರಮಗಳಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಈ ವೇಳೆ ಸಂತರು, ಗಣ್ಯರು ಆಗಮಿಸಿ ಶ್ರೀ ಮಹಾಲಿಂಗೇಶ್ವರನ ದರ್ಶನ ಪಡೆದು ವಿಶೇಷ ಅನುಭೂತಿಯನ್ನು ಹೊಂದಿದ್ದರು.
ಹನ್ನೊಂದು ಪುಣ್ಯ ಕ್ಷೇತ್ರಗಳಿಂದ ಕಲಶ
ಭಾರತದ ಏಕಾದಶ ಪುಣ್ಯ ನದಿಗಳ ತೀರ್ಥದೊಂದಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿರುವುದು ವಿಶೇಷವಾಗಿದೆ, ಈ ತೀರ್ಥದ ಭವ್ಯ ಮೆರವಣಿಗೆ ಸಂಗಮ ಕ್ಷೇತ್ರ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ, ಮಹಾಕಾಳಿ ದೇವಸ್ಥಾನದಿಂದ ಮಾರ್ಚ್ 30ರಂದು ಚಾಲನೆಗೊಂಡು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದು, ಹೊರೆಕಾಣಿಕೆಗಳ ಸಹಿತ ನಾಡಿನ ಸಾಧು, ಸಂತರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಪದ್ಯಾಣ ತಲುಪಲಿದೆ.
ಕಾರ್ಯಕ್ರಮ ವೈಭವ
೨೦೨೬ ರ ಮಾರ್ಚ್ ೩೦ ರಿಂದ ಎಪ್ರಿಲ್ ೬ ರ ವರೆಗೆ ನಡೆಯಲಿರುವ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶೋತ್ಸವದಲ್ಲಿ ವೈಭವದ ಕಾರ್ಯಕ್ರಮಗಳು ಇರಲಿವೆ. ಮಹಾಲಿಂಗೇಶ್ವರನಿಗೆ ಪ್ರಿಯವಾದ ಭಜನೆ, ಭಕ್ತಿ ಸಂಗೀತ, ಯಕ್ಷಗಾನ ಮೇಳೈಸಲಿದೆ.
ಭಕ್ತಜನರಿಗೆಲ್ಲ ಪ್ರೀತಿಯ ಆದರದ ಸ್ವಾಗತ.ಈ ಪುಣ್ಯಕಾರ್ಯದಲ್ಲಿ ತ್ರಿಕರಣಪೂರ್ವಕವಾಗಿ ಭಾಗವಹಿಸುವುದರ ಮೂಲಕ ನಮ್ಮ ಜನ್ಮವನ್ನು ಪಾವನಗೊಳಿಸೋಣ.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…