ಬಂಟ್ವಾಳ

ವಸಾಹತು ಮನೋಭಾವದಿಂದ ಭಾರತೀಯತೆಯೆಡೆಗೆ: ಕಲ್ಲಡ್ಕದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶುಕ್ರವಾರ ವಸಾಹತು ಮನೋಭಾವದಿಂದ ಭಾರತೀಯತೆಡೆಗೆ ಒಂದು ಚಿಂತನೆ ಎಂಬ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ನಡೆಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ವಿಜ್ಞಾನ, ಸಂಶೋಧನೆಗಳು ಸಾವಿರಾರು ವರ್ಷಗಳ ಹಿಂದಿನ ಸಾಧನೆಗಳಾಗಿದ್ದರೂ, ಆಧುನಿಕ ತಾಂತ್ರಿಕ ಬೆಳವಣಿಗೆಯೇ ಪ್ರಗತಿಗೆ ಕಾರಣ ಎಂದು ಜಗತ್ತು ತಿಳಿದಿದೆ. ನಮ್ಮ ದೇಶದ ಹಿರಿಮೆಯನ್ನು ಜಗತ್ತಿಗೆ ತಿಳಿಯಪಡಿಸಿ, ಭಾರತೀಯ ಸಂಸ್ಕೃತಿಯನ್ನೇ ಅಳವಡಿಸಿ, ಅನುಸರಿಸಿ, ನಮ್ಮತನದ ಚಿಂತನೆಗಳಿಗೆ ಮಹತ್ವವನ್ನು ಕೊಡಬೇಕು ಎನ್ನುವ ಸಂದೇಶದೊಂದಿಗೆ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದರು.

ಟಿವಿ9 ಕನ್ನಡ ವಾಹಿನಿಯ ಹಿರಿಯ ನಿರೂಪಕರು ಹಾಗೂ ಸಂಪಾದಕರಾದ ರಂಗನಾಥ ಭಾರದ್ವಾಜ್ ವಿಚಾರ ಸಂಕಿರಣ ಉದ್ಘಾಟನೆ ನೆರವೇರಿಸಿ ಮಾತನಾಡಿ, ನಿರಂತರವಾಗಿ ಆಳಿಸಿಕೊಂಡು ಶರಣಾಗತಿ ಎಂಬುದು ನಮ್ಮ ಜೀವನದ ಆನಂದ ಎಂಬಂತಾಗಿದೆ. ಬ್ರಿಟಿಷರು ಬಿಟ್ಟು ಹೋದರೂ ಅವರ ಗುಲಾಮಗಿರಿ ಮನೋಸ್ಥಿತಿ ಬಿಟ್ಟು ಹೋಗಿಲ್ಲ ಎಂದರು.

ಜಾಹೀರಾತು

ಪ್ರಸ್ತುತ ಭಾರತೀಯರ ಪರಿಸ್ಥಿತಿಯು ಕಾಲಿಗೆ ಸರಪಣಿ ಕಟ್ಟಿದ ಆನೆಯಂತಾಗಿದೆ, ಶಕ್ತಿ ಸಾಮರ್ಥ್ಯಗಳಿದ್ದೂ ಪರಕೀಯರ ಪರಾಧೀನರಾಗಿ ಅವರ ಚಿಂತನೆಗಳಿಗೆ ಪ್ರಾಶಸ್ತ್ಯ ಕೊಡುವಂತಾಗಿದೆ. ನಮ್ಮತನದ ಕುರಿತು ಚಿಂತನೆ ಮಾಡುವವರ ಕೊರತೆ ಇದೆ, ಹೀಗಾದರೆ ಮುಂದಿನ ತಲೆಮಾರು ಬಹಳ ಕಠಿಣ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ, ನಮ್ಮೆಲ್ಲರ ರಕ್ಷಣೆ ನಮ್ಮ ಹೊಣೆ ಎಂದು ಎಚ್ಚರಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಡಾ. ಆರತಿ ವಿ. ಬಿ, ಪಿ. ರಾಜೀವ ಕುಡಚಿ, ರೋಹಿತ್ ಚಕ್ರತೀರ್ಥ ಪ್ರಜ್ಞಾಪ್ರವಾಹದ ರಘುನಂದನ್ ಉಪಸ್ಥಿತರಿದ್ದರು. ಕಾಲೇಜು ಪ್ರಾಚಾರ್ಯ ಹಾಗೂ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಕೃಷ್ಣಪ್ರಸಾದ್ ಕಾಯರಕಟ್ಟೆ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬೆಂಗಳೂರಿನ ವಿಭು ಅಕಾಡೆಮಿ ಸ್ಥಾಪಕಿ ಡಾ.ಆರತಿ ವಿ.ಬಿ ಅವರು ಭಾಷೆ, ಧರ್ಮ, ಸಂಸ್ಕೃತಿ ಮತ್ತು ಆಚರಣೆಗಳ ಮೇಲೊಂದು ಇಣುಕುನೋಟ ವಿಷಯದ ಕುರಿತು ಮಾತನಾಡಿದರು. ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆ ವಸಾಹತುಭಾವದಿಂದ ಮುಕ್ತವಾಗುವತ್ತ ವಿಷಯ ಕುರಿತು ಮಾಜಿ ಶಾಸಕ ರಾಜೀವ್ ಪಿ, ಶಿಕ್ಷಣ, ಇತಿಹಾಸದ ಕುರಿತು ಚಿಂತಕ ರೋಹಿತ್ ಚಕ್ರತೀರ್ಥ ಮಾತನಾಡಿದರು. ಪ್ರಜ್ಞಾಪ್ರವಾಹದ ಅಖಿಲ ಭಾರತೀಯ ಟೋಳಿ ಸದಸ್ಯ ರಘುನಂದನ್ ಮುಕ್ತ ಚಿಂತನ ಗೋಷ್ಠಿ ನಡೆಸಿದರು. ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ವಿದ್ಯಾಕೇಂದ್ರದ ಸಂಚಾಲಕ, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ವಸಂತ ಮಾಧವ, ಉಪಸ್ಥಿತರಿದ್ದರು. ಧನುಶ್ರೀ ಕಾರ್ಯಕ್ರಮ ನಿರ್ವಹಿಸಿದರು, ತ್ರಿಷಾ ವಂದಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.