PHOTO COURTESY: UDAYA KAMBAR
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು ಸಿದ್ದಹಸ್ತರು. ಅವರ ನಿಧನದಿಂದ ಯಕ್ಷಗಾನದ ಸುವರ್ಣ ಯುಗವೇ ಅಂತ್ಯಗೊಂಡಂತಾಗಿದೆ.
ತೆಂಕುತಿಟ್ಟು ಯಕ್ಷಗಾನದ ಅಗ್ರಗಣ್ಯ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳಿಗೆ ಭಾಜನರಾದ ಯಕ್ಷಗಾನದ ದಶಾವತಾರಿ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ವೇಷಧಾರಿ ಸೂರಿಕುಮೇರು ಗೋವಿಂದ ಭಟ್ (88) ಅವರು ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ತೀರ್ಥಹಳ್ಳಿಯ ತಮ್ಮ ಹಿರಿಯ ಪುತ್ರನ ಮನೆಯಲ್ಲಿ ನಿಧನರಾದರು. ಮೂವರು ಪುತ್ರರನ್ನು ಅವರು ಹೊಂದಿದ್ದರು.
ಯಕ್ಷಗಾನ ಕ್ಷೇತ್ರದ ‘ನಡೆದಾಡುವ ವಿಶ್ವಕೋಶ’, ‘ದಶಾವತಾರಿ’ ಎಂದೇ ಖ್ಯಾತರಾಗಿದ್ದ ಸೂರಿಕುಮೇರಿ ಕೆ. ಗೋವಿಂದ ಭಟ್ ತೆಂಕುತಿಟ್ಟು ಯಕ್ಷಗಾನ ಇದುವರೆಗೆ ಕಂಡ ಸರ್ವಶ್ರೇಷ್ಠ ಕಲಾವಿದರೆನಿಸಿಕೊಂಡಿದ್ದರು. 1951ರಲ್ಲಿ ಯಕ್ಷಗಾನ ಮೇಳಕ್ಕೆ ಸೇರ್ಪಡೆಗೊಂಡು ಸುಮಾರು 70 ವರ್ಷಗಳ ಕಾಲ ಧರ್ಮಸ್ಥಳ, ಮೂಲ್ಕಿ, ಕೂಡ್ಲು, ಸುರತ್ಕಲ್ (ಕೆಳಗಿನ ಮಾರಿಗುಡಿ) ಇರಾ ಸೋಮನಾಥೇಶ್ವರ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ. ಕೌರವ, ರಕ್ತಬೀಜ, ಇಂದ್ರಜಿತು, ಮಾಗಧ, ಕರ್ಣ, ಅತಿಕಾಯ ನರಕಾಸುರ, ತಾಮ್ರಾಕ್ಷ , ಹಿರಣ್ಯಕಶಿಪು, ದೇವೇಂದ್ರ, ಅರ್ಜುನ , ಹನುಮಂತ, ಭೀಷ್ಮ ,ಬಾಹುಬಲಿ, ವಿಶ್ವಾಮಿತ್ರ ಅವರಿಗೆ ಹೆಸರು ತಂದು ಕೊಟ್ಟ ಪಾತ್ರಗಳಾಗಿವೆ. ಛಂದೋಬದ್ಧವಾದ ಮಾತಿನ ಜತೆಗೆ ನೃತ್ಯದಲ್ಲೂ ಪ್ರಾವೀಣ್ಯ ಪಡೆದಿದ್ದರು. ಅವರಿಗೆ 2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತ್ ಪುರಸ್ಕಾರ, ಕರ್ನಾಟಕ ಜಾನಪದ ಅಕಾಡೆಮಿ ಸಾಧನಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಗೌರವ ಸನ್ಮಾನಗಳು ದೊರೆತಿವೆ. ಮಣಿ ಮೇಖಲೆ, ಕನಕ ರೇಖೆ, ಕಾವೇರಿ ಮಹಾತ್ಮೆ, ಮೂರುವರೆ ವಜ್ರಗಳು ರಾಜಶೇಖರ ವಿಲಾಸ, ಮಹಾವೀರ ಸಾಮ್ರಾಟ ಅಶೋಕ, ನಹುಷೇಂದ್ರ ಎಂಬ ಏಳು ಯಕ್ಷ ಪ್ರಸಂಗಗಳನ್ನು ಅವರು ಬರೆದಿದ್ದಾರೆ. ಜಪಾನ್, ಅಬುದಾಬಿ, ಬಹ್ರೈನ್, ದುಬೈಗಳಲ್ಲಿ ಅವರು ಯಕ್ಷಗಾನ ಪ್ರದರ್ಶಿಸಿದ್ದಾರೆ. ದಿಲ್ಲಿಯಲ್ಲಿ ರಾಷ್ಟ್ರಪತಿ ಎದುರು ಯಕ್ಷಗಾನ ಪ್ರದರ್ಶಿಸಿದ್ದ ಖ್ಯಾತಿ ಗೋವಿಂದ ಭಟ್ಟರಿಗಿದೆ.