ಶುಕ್ರವಾರ ಸಂಭ್ರಮದ ಈದ್ ಉಲ್ ಫಿತರ್ ಆಚರಿಸಲಾಯಿತು. ಮುಸ್ಲಿಂ ಸಮುದಾಯದವರು ರಂಜಾನ್ ತಿಂಗಳ ಉಪವಾಸದ ನಂತರ ಆಚರಿಸುವ ಈ ಹಬ್ಬದ ವೇಳೆ ಬೆಳಗ್ಗಿನಿಂದಲೇ ಬಂಟ್ವಾಳ ತಾಲೂಕಿನ ಮಸೀದಿಗಳಿಗೆ ಆಗಮಿಸಿ ಸಂಭ್ರಮ ಹಂಚಿಕೊಂಡರು.
ಸಾಮೂಹಿಕ ಈದ್ ನಮಾಝ್ ನಂತರ ಮುಸ್ಲಿಂ ಬಾಂಧವರು ಪರಸ್ಪರ ಆಲಿಂಗನ ಮಾಡಿಕೊಂಡು ಈದ್ ಮುಬಾರಕ್ ಎಂದು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಈದ್ ಉಲ್ ಫಿತರ್ ರಂಜಾನ್ ಉಪವಾಸದ ಪೂರ್ಣಗೊಳ್ಳುವಿಕೆಯ ಸಂಕೇತವಾಗಿದ್ದು, ದಾನ-ಧರ್ಮ, ಸಹಾಯ-ಸಹಕಾರದ ಮಹತ್ವವನ್ನು ಒತ್ತಿಹೇಳುವ ಹಬ್ಬ. ಫಿತ್ರ್ ಝಕಾತ್ (ಕಡ್ಡಾಯ ದಾನ) ನೀಡಿ ಬಡವರಿಗೆ ಸಹಾಯ ಮಾಡುವ ಸಂಪ್ರದಾಯವನ್ನು ಇಲ್ಲಿ ಅನುಸರಿಸಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಾರ್ವಜನಿಕ ರಜೆ ಘೋಷಿಸಿದ್ದು, ಕರಾವಳಿ ಜಿಲ್ಲೆಗಳಲ್ಲಿ ಚಂದ್ರ ದರ್ಶನವಾದ್ದರಿಂದ ರಾಜ್ಯದ ಇತರ ಭಾಗಗಳಿಗಿಂತ ಒಂದು ದಿನ ಮುಂಚಿತವಾಗಿ ಈದ್ ಆಚರಣೆ ನಡೆದಿದೆ.
ಪಾಣೆಮಂಗಳೂರಿನ ಗುಡ್ಡೆಯಂಗಡಿಯ ನೂರುದ್ದೀನ್ ಜುಮ್ಮಾ ಮಸೀದಿಯಲ್ಲಿ ಈದ್ – ಉಲ್ –ಫಿತ್ರ್ ಆಚರಣೆ ನಡೆಯಿತು. ಕುತ್ಬ ಮತ್ತು ನಮಾಜ್ ಅನ್ನು ಖತೀಬರಾದ ಆಸೀಫ್ ದಾರಿಮಿ ನೆರವೇರಿಸಿದರು. ಮಾಜಿ ಸದಸ್ಯ ಅಬುಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ, ಮಸೀದಿ ಅಧ್ಯಕ್ಷ ಮಹಮ್ಮದ್ ಸಜಿಪ, ಅಬುಬಕರ್ ಮೆಲ್ಕಾರ್ ಮತ್ತಿತರರು ಉಪಸ್ಥಿತರಿದ್ದರು.