ಬಂಟ್ವಾಳ ತಾಲೂಕು ಬಿ.ಸಿ.ರೋಡಿನಲ್ಲಿ ಮತ್ತು ಬಂಟ್ವಾಳದ ಬಡ್ಡಕಟ್ಟೆಯಲ್ಲಿ ಟ್ರಾಫಿಕ್ ದಟ್ಟಣೆಯನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನೇಮಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಆಟೊರಿಕ್ಷಾ ಚಾಲಕ ಮಾಲೀಕರ ಸಂಘಗಳ ಒಕ್ಕೂಟದ ಬಂಟ್ವಾಳ ತಾಲೂಕು ಘಟಕ ಒತ್ತಾಯಿಸಿದೆ.
ಅಧ್ಯಕ್ಷ ವಿಶ್ವನಾಥ ಚಂಡ್ತಿಮಾರ್ ನೇತೃತ್ವದಲ್ಲಿ ಈ ಮನವಿಯನ್ನು ಬಂಟ್ವಾಳ ಪೊಲೀಸ್ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಿಗೆ ಬುಧವಾರ ಸಲ್ಲಿಸಲಾಯಿತು.
ಬಂಟ್ವಾಳ ತಾಲೂಕಿನ ಕೇಂದ್ರ ಸ್ಥಾನವಾದ ಮಂಗಳೂರಿನಿಂದ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡು ಖಾಸಗಿ ಬಸ್ ನಿಲ್ದಾಣದ ಮುಂಭಾಗ ಮತ್ತು ಮಂಗಳೂರಿಗೆ ಹೋಗುವ ಬಸ್ಸು ನಿಲ್ಲುವ ಪ್ರದೇಶದಲ್ಲಿ ಬಸ್ಸು ಹಾಗೂ ರಿಕ್ಷಾಗಳನ್ನು ನಿಲ್ಲಿಸುತ್ತಿದ್ದು, ಇಲ್ಲಿ ಯಾವಾಗಲೂ ಜನಸಂದಣಿ ಇರುತ್ತದೆ. ಈ ವೇಳೆ ತುರ್ತು ಸಂದರ್ಭ ಆಂಬುಲೆನ್ಸ್ ಹೋಗುವ ಸಂದರ್ಭ ತೊಂದರೆ ಆಗುತ್ತಿದೆ. ಖಾಸಗಿ ಬಸ್ ನಿಲ್ದಾಣಕ್ಕೆ ಹೋಗಲು ಮಾರ್ಗ ದಾಟಲು ಮಹಿಳೆಯರು, ಚಿಕ್ಕ ಮಕ್ಕಳಿಗೆ, ಶಾಲಾ ಮಕ್ಕಳಿಗೆ ತೊಂದರೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಈ ಪ್ರದೇಶದಲ್ಲಿ ಟ್ರಾಫಿಕ್ ನಿರ್ವಹಣೆ ಮಾಡಲು ಟ್ರಾಫಿಕ್ ಎ.ಎಸ್.ಐ. ಹಾಗೂ ಪೊಲೀಸ್ ಸಿಬ್ಬಂದಿ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಗಮನಹರಿಸಬೇಕು. ಬಂಟ್ವಾಳ ಬಡ್ಡಕಟ್ಟೆ ಮಾರ್ಕೆಟ್ ಬಳಿಯೂ ವಾಹನದಟ್ಟಣೆ ಇದ್ದು, ಇಲ್ಲೂ ಟ್ರಾಫಿಕ್ ಸಿಬ್ಬಂದಿ ನೇಮಿಸಬೇಕು ಎಂದು ಸಾರ್ವಜನಿಕರ ಪರವಾಗಿ ಮನವಿ ಮಾಡಲಾಗಿದೆ.