ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಡ್ಕ ಫ್ಲೈಓವರ್ ನಿಂದ ಮುಂದೆ ದಾಸಕೋಡಿ ಮಾರ್ಗದಲ್ಲಿ ಹೋಗುವ ಎಡಬದಿಯಲ್ಲಿ ಕುದ್ರೆಬೆಟ್ಟು ಎಂಬಲ್ಲಿ ಸಿಗುವ ಪ್ರಯಾಣಿಕರ ತಂಗುದಾಣವನ್ನೀಗ ಮರುನಿರ್ಮಾಣ ಮಾಡಲಾಗುತ್ತಿದೆ. ಮಣ್ಣು ಹಾಕಿ, ಬದಿಯಲ್ಲಿ ಸುರಕ್ಷತೆಗಾಗಿ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ.
ವರದಿ ಮೂಲಕ ಎಚ್ಚೆತ್ತ ಇಲಾಖೆ, ಇದೀಗ ಪ್ರಯಾಣಿಕಯೋಗ್ಯ ವ್ಯವಸ್ಥೆ ಕಲ್ಪಿಸುವ ಕಾರ್ಯ ಮಾಡುತ್ತಿದೆ. ಈಗಾಗಲೇ ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಒಂದು ವಾರದಲ್ಲಿ ಪೂರ್ಣ ಕೆಲಸ ಮುಗಿಯುವ ವಿಶ್ವಾಸವನ್ನು ಕೆಲಸ ನಿರ್ವಹಿಸುವ ಗುತ್ತಿಗೆದಾರರು ವ್ಯಕ್ತಪಡಿಸಿದ್ದಾರೆ.
ಕುದ್ರೆಬೆಟ್ಟಿನಲ್ಲಿ ನಿರ್ಮಾಣಗೊಂಡ ಪ್ರಯಾಣಿಕರ ನಿಲ್ದಾಣ ಹೇಗಿತ್ತು ಅಂದರೆ, ಹೆಪ್ಪುಗಟ್ಟಿದ ಕೊಳಚೆ ನೀರು ಹರಿಯುವ ಚರಂಡಿಗೆ ಸ್ಲ್ಯಾಬ್ ಹಾಕಿ, ಅದರ ಮೇಲೆ ಪ್ರಯಾಣಿಕರು ಕುಳಿತುಕೊಳ್ಳಲು ಕಬ್ಬಿಣದ ಸರಳುಗಳ ಸೀಟ್ ಮಾಡಲಾಗಿತ್ತು. ಮೇಲಕ್ಕೆ ಸಣ್ಣದಾಗಿ ತಗಡಿನ ಶೀಟ್. ಹತ್ತಿರ ಶಾಲೆ ಇದೆ, ವಸತಿಗೃಹಗಳಿವೆ, ಇಲ್ಲಿನ ಮಕ್ಕಳು ಬಸ್ ಹತ್ತಲೆಂದು ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಿತ್ತು.
ಇದೀಗ ಪ್ರಯಾಣಿಕರು ಕುಳಿತುಕೊಳ್ಳುವ ಎತ್ತರದ ಸೀಟ್ ನಡಿ ಮಣ್ಣು ಹಾಕಿ ಲೆವೆಲ್ ಮಾಡಲಾಗುತ್ತಿದೆ. ಸುತ್ತಲಿನ ಭಾಗಗಳಲ್ಲಿ ಸುರಕ್ಷತಾ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದ ಕೆಲಸ ಕಾರ್ಯಗಳು ನಡೆಯುತ್ತಿದೆ.