ಭಾರತೀಯ ಮಜ್ದೂರು ಸಂಘದ ದ.ಕ.ಜಿಲ್ಲಾ ಸಮಿತಿಯ ಸಹಯೋಗದೊಂದಿಗೆ ಬಂಟ್ವಾಳ ತಾಲೂಕು ಆಶಾ ಕಾರ್ಯಕರ್ತರ ಮಜ್ದೂರು ಸಂಘ ನೇತೃತ್ವದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಶ್ರಮಿಕರ ಸಂಗಮ 2026 ಬಿ.ಸಿ.ರೋಡಿನ ಕುಲಾಲ ಸಭಾಭವನದಲ್ಲಿ ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಉದ್ಘಾಟಿಸಿದ ಬಳಿಕ ಮಾತನಾಡಿ, ದೈನಂದಿನ ಚಟುವಟಿಕೆಗಳ ಹೊರತಾಗಿ ಇಂಥ ಕಾರ್ಯಕ್ರಮ ಏರ್ಪಡಿಸುವುದು ಅಭಿನಂದನೀಯ. ತಮ್ಮ ಆರೋಗ್ಯದ ಕಾಳಜಿಯನ್ನು ಗಮನಿಸಕೊಳ್ಳಬೇಕು. ಸ್ತನ ಕ್ಯಾನ್ಸರ್ ದೇಶದ ದೊಡ್ಡ ಮಾರಕ ಕಾಯಿಲೆಗಳಲ್ಲಿ ಒಂದು. ಸರ್ವೈಕಲ್ ಕ್ಯಾನ್ಸರ್ ವಿರುದ್ಧ ಲಸಿಕೆ ಕೊಡುವ ಅಭಿಯಾನದ ಕುರಿತು ಜಾಗೃತಿ ಅಗತ್ಯ ಎಂದರು.
ಆಶಾ ಕಾರ್ಯಕರ್ತೆಯರ ಮಜ್ದೂರು ಸಂಘ ಕರ್ನಾಟಕ ರಾಜ್ಯ ಕಾರ್ಯದರ್ಶಿ ರೇವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಾಮಾಜಿಕ ಬಂಟ್ವಾಳ ತಾಲೂಕು ಆರೋಗ್ಯ ಅಧಿಕಾರಿ ಡಾ. ಅಶೋಕ್ ರೈ, ಕಾರ್ಯಕರ್ತೆ ಮೀನಾಕ್ಷಿ ಕಲ್ಲಡ್ಕ, ಭಾರತೀಯ ಮಜ್ದೂರು ಸಂಘದ ಜಿಲ್ಲಾ ಅಧ್ಯಕ್ಷ ವಕೀಲರಾದ ಅನಿಲ್ ಕುಮಾರ್ ಬೆಳ್ತಂಗಡಿ, ಮಜ್ದೂರು ಸಂಘದ ರಾಜ್ಯಕಾರ್ಯಕಾರಿಣಿ ಸದಸ್ಯೆ ವಿಜಯಲಕ್ಮೀ, ಮಜ್ದೂರು ಸಂಘದ ಜಿಲ್ಲಾ ಉಪಾಧ್ಯಕ್ಷೆ ಗೀತಾ ಧರ್ಮರಾಜ್, ಮಜ್ದೂರು ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮಣಿಹಳ್ಳ, ಮಜ್ದೂರು ಸಂಘದ ಕಟ್ಟಡ ನಿರ್ಮಾಣ ರಾಜ್ಯ ಕಾರ್ಯದರ್ಶಿ ಕುಮಾರನಾಥ, ಮಜ್ದೂರು ಸಂಘದ ಗೌರವಾಧ್ಯಕ್ಷೆ ಗಿರಿಜಾ ಅವರು ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಸುಮಾರು 12 ಮಂದಿಯನ್ನು ಗೌರವಿಸಲಾಯಿತು. ಮಜ್ದೂರು ಸಂಘದ ತಾಲೂಕು ಅಧ್ಯಕ್ಷೆ ತುಳಸಿ ದೇವರಾಜ್ ಸ್ವಾಗತಿಸಿದರು.