ಮೂಡೂರು ಪಡೂರು ಜೋಡುಕರೆ ಕಂಬಳ ಸಮಿತಿಯ ಬಂಟ್ವಾಳ ಕಂಬಳ ಶನಿವಾರ ನಾವೂರಿನ ಕೂಡಿಬೈಲಿನಲ್ಲಿ ಇಂದು ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಎಂದು ಮಾಜಿ ಸಚಿವ, ಕಂಬಳ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ ಹೇಳಿದ್ದಾರೆ.
ಶುಕ್ರವಾರ ಕಂಬಳದ ಗದ್ದೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಕಲ ಸಿದ್ಧತೆಗಳನ್ನು ಮಾಡಲಾಗಿದ್ದು, ಸಂಜೆ ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ನಾವೂರಿಗೆ ಸಿಎಂ ಆಗಮಿಸುವರು. ಅವರೊಂದಿಗೆ ನಾನಾ ಸಚಿವರು, ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಕಂಬಳ ನಡೆಯುವ ಸ್ಥಳದಲ್ಲಿ ಶಾಶ್ವತ ಪೆಂಡಲ್ ಸಹಿತ ಆಧುನಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಕಂಬಳ ಅಸೋಸಿಯೇಶನ್ ಸೂಚನೆಯಂತೆ ತೀರ್ಪುಗಾರಿಕೆಯ ವ್ಯವಸ್ಥೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಫೊಟೋ ಸ್ಪರ್ಧೆ ಆಯೋಜಿಸಲಾಗಿದೆ. ಈ ಕಂಬಳವನ್ನು ಅದ್ದೂರಿಯಾಗಿ ನಡೆಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಕಾರ್ಯಾಧ್ಯಕ್ಷರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಂಚಾಲಕರಾದ ಬಿ.ಪದ್ಮಶೇಖರ ಜೈನ್, ಉಪಾಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಅಬ್ಬಾಸ್ ಆಲಿ, ಬಾಲಕೃಷ್ಣ ಅಂಚನ್, ಪದ್ಮನಾಭ ರೈ, ಅಬುಬಕರ್ ಸಿದ್ದಿಕ್ ಗುಡ್ಡೆಯಂಗಡಿ ಉಪಸ್ಥಿತರಿದ್ದರು