ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ನೇತ್ರಾವತಿ ನದಿ ತೀರದಲ್ಲಿ ಅಪಾರ ಪ್ರಮಾಣದ ಆಧಾರ್ ಕಾರ್ಡ್ ಗಳು ನದಿ ತಟದಲ್ಲಿರುವುದು ಕಂಡುಬಂದಿದ್ದು ಸ್ಥಳೀಯ ಶಾಸಕರೂ ಆಗಿರುವ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ತನಿಖೆಗೆ ಸೂಚಿಸಿದ್ದಾರೆ.
ಕಾರ್ಡ್ ಗಳು ನದಿ ತಟದಲ್ಲಿರುವುದನ್ನು ಕಂಡು ಸಾರ್ವಜನಿಕರು ಸ್ಥಳೀಯ ಪುದು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ನೀಡಿದ ಮಾಹಿತಿ ಮೇರೆಗೆ ಅಧ್ಯಕ್ಷರು ಹಾಗೂ ಸಾರ್ವಜನಿಕರು ಸೇರಿ ಪತ್ತೆಯಾಗಿರುವ ಆಧಾರ್ ಕಾರ್ಡ್ ಗಳನ್ನು ಸಂಗ್ರಹಿಸಿರುತ್ತಾರೆ. ಈ ಕುರಿತು ಸ್ಥಳೀಯ ಶಾಸಕರಾದ ತನಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಈ ಬಗ್ಗೆ ತಾವು ಆಧಾರ್ ಕಾರ್ಡ್ ಗಳು ಇಷ್ಟೊಂದು ಪ್ರಮಾಣದಲ್ಲಿ ನದಿ ತಟದಲ್ಲಿ ಪತ್ತೆಯಾಗಲು ಕಾರಣವೇನು, ಇದಕ್ಕೆ ಕಾರಣರಾದವರು ಯಾರು ಎಂಬುದನ್ನು ತನಿಖೆ ನಡೆಸಿ, ಪತ್ತೆ ಹಚ್ಚಿ, ತಮ್ಮ ಇಲಾಖೆ ಮುಖಾಂತರ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಯು.ಟಿ.ಖಾದರ್ ಅವರು ಯುಐಡಿಎಐ ಯೋಜನಾ ವ್ಯವಸ್ಥಾಪಕರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.
ಫರಂಗಿಪೇಟೆ ಹತ್ತನೇ ಮೈಲ್‌ಕಲ್ಲು ಸಮೀಪದ ನೇತ್ರಾವತಿ ನದಿ ತೀರದಲ್ಲಿ ಪುದು ಗ್ರಾಮದ ನಿವಾಸಿಗಳ ವಿಳಾಸ ಹೊಂದಿರುವ ಆಧಾರ್ ಕಾರ್ಡ್‌ಗಳು ರಾಶಿ ರಾಶಿಯಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಂಗಳವಾರ ಸಂಜೆ ಸ್ಥಳೀಯರು ನದಿಯಲ್ಲಿ ತೇಲಿ ಬರುತ್ತಿದ್ದ ಆಧಾರ್ ಕಾರ್ಡ್‌ಗಳನ್ನು ಗಮನಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಹಲವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಪುದು ಗ್ರಾಮದ ಅನೇಕ ಮನೆಗಳ ವಿಳಾಸ ಹೊಂದಿರುವ ಕಾರ್ಡ್‌ಗಳು ನದಿ ಬದಿಯಲ್ಲಿ ಚದುರಿಕೊಂಡಿರುವುದು ಕಂಡುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಗ್ರಾಮಸ್ಥರಿಗೆ ಆಧಾರ್ ಕಾರ್ಡ್ ತಲುಪದೆ ಸಾರ್ವಜನಿಕರು ಹಣ ನೀಡಿ ಸೈಬರ್ ಕೇಂದ್ರಗಳಿಂದ ಪ್ರತಿಗಳನ್ನು ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಸಾವಿರಾರು ಕಾರ್ಡ್‌ಗಳು ನದಿ ತೀರದಲ್ಲಿ ಪತ್ತೆಯಾಗಿರುವುದು ಗಂಭೀರ ವಿಷಯವಾಗಿದ್ದು, ಇದರ ಹಿಂದೆ ಯಾರು ಎಂಬುದನ್ನು ಪತ್ತೆಹಚ್ಚಬೇಕು ಎಂದು ಒತ್ತಾಯಿಸಿದರು.
| ಟೋಲ್ ಮುಂಭಾಗ ಧರಣಿ ಕುಳಿತ ಸಮಾನ ಮನಸ್ಕ ಸಮನ್ವಯ ಸಮಿತಿ ಹಾಗೂ ಟೋಲ್ ವಿರೋಧಿ ಹೋರಾಟ ಸಮಿತಿ ಸದಸ್ಯರ…