press meet
| ಹೋರಾಟಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಟೋಲ್ ವಿರೋಧಿ ಹೋರಾಟ ಸಮಿತಿ ಬೆಂಬಲ — NEWS WITH VIDEO
ಸಮರ್ಪಕ ಮೂಲಸೌಕರ್ಯಗಳಿಲ್ಲದೆ, ಗುಜರಿ ಅಂಗಡಿಯಂತಿರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ನಲ್ಲಿ ಸೂಚಿತ ನಿಯಮಗಳು ಪಾಲನೆಯಾಗುತ್ತಿಲ್ಲ. ಇಂಥ ಟೋಲ್ ಅನ್ನು ತೆರವುಗೊಳಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಟೋಲ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಸುಹೈಲ್ ಕಂದಕ್ ಹೇಳಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಬಲವಾದ ಹೋರಾಟ ಆರಂಭಗೊಂಡಿದ್ದು, ನಿರಂತರವಾಗಿ ನಡೆಯಲಿದೆ. ರಮಾನಾಥ ರೈ ನೇತೃತ್ವದಲ್ಲಿ ಮಂಗಳವಾರ ನಡೆಯುವ ಹೋರಾಟಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಟೋಲ್ ವಿರೋಧಿ ಹೋರಾಟ ಸಮಿತಿ ಬೆಂಬಲಿಸುತ್ತದೆ ಎಂದು ಹೇಳಿದರು.
ಟೋಲ್ ರಚನೆಯೇ ಅವೈಜ್ಞಾನಿಕವಾಗಿದ್ದು, ಅದನ್ನು ತೆಗೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು. ರಾಷ್ಟ್ರೀಯ ಹೆದ್ದಾರಿಯ ಯಾವುದೇ ರೀತಿಯ ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು, ಈ ಟೋಲ್ ಸರಿಯಾಗಿಲ್ಲ , ಇಲ್ಲಿ ಯಾವುದೇ ಮೂಲಸೌಕರ್ಯವಿಲ್ಲ. ಆಂಬುಲೆನ್ಸ್ ಗೆ ಹೋಗಲು ಪ್ರತ್ಯೇಕ ದಾರಿ ಇಲ್ಲ. ತುರ್ತು ವೈದ್ಯಕೀಯ ಸೌಲಭ್ಯ ಇಲ್ಲ. ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಶೌಚಾಲಯ ಸ್ವಚ್ಛವಿಲ್ಲ. ಕುಡಿಯುವ ನೀರಿನ ಸೌಕರ್ಯವಿಲ್ಲ. ಪ್ರತಿ ಟೋಲ್ ನಲ್ಲೂ ಏನಾದರೂ ಸಮಸ್ಯೆಯಾದರೆ ತುರ್ತು ನಂಬರ್ ಹಾಕಲಾಗುತ್ತದೆ, ಟೋಲ್ ಬರುವ ಮೊದಲೇ ಸೂಚನಾ ಫಲಕಗಳನ್ನು ದರಪಟ್ಟಿಯನ್ನೂ ಹಾಕಲಾಗುತ್ತದೆ. ಆದರೆ ಇಲ್ಲಿ ಅದ್ಯಾವುದು ಇಲ್ಲ. ಕ್ರೇನ್ ಸೌಕರ್ಯವಿಲ್ಲ. ಮಂಗಳೂರನ್ನು ಸಂಪರ್ಕಿಸುವ ಹೆದ್ದಾರಿ ಇದಾಗಿದ್ದು, ಇಲ್ಲಿ ವಾಹನಗಳು ಸರಿಯಾಗಿ ನಿಲ್ಲಲು ಸರಿಯಾದ ಜಾಗವೇ ಇಲ್ಲ ಎಂದು ಟೋಲ್ ನಲ್ಲಿರುವ ಸಮಸ್ಯೆಗಳ ಪಟ್ಟಿಯನ್ನು ವಿವರಿಸಿದರು. ನಿಯಮಗಳಾವುದೂ ಪಾಲನೆಯಾಗುತ್ತಿಲ್ಲ, ಸರಿಯಾದ ವ್ಯವಸ್ಥೆಯನ್ನೇ ಮಾಡಲಾಗದೆ ಟೋಲ್ ಅನ್ನು ಯಾಕೆ ನಿರ್ಮಿಸಲಾಗಿದೆ ಎಂದು ಪ್ರಶ್ನಿಸಿದ ಅವರು ಇದನ್ನು ದೂರದಿಂದ ನೋಡಲು ಗುಜರಿ ಅಂಗಡಿಯಂತೆ ಕಾಣುತ್ತದೆ, ಹಲವಾರು ವರ್ಷಗಳಿಂದ ಸಮಸ್ಯೆಗಳು ಇರುವ ಕಾರಣ, ಟೋಲ್ ವಿರೋಧಿ ಹೋರಾಟ ಮಾಡಲಾಗುತ್ತದೆ. ಆರ್.ಟಿ.ಐ. ಮೂಲಕ ಮಾಹಿತಿಗಳನ್ನು ಪಡೆದುಕೊಂಡಿದ್ದೇವೆ, ಹಾಗೂ ಎಲ್ಲ ಹೋರಾಟಗಳಿಗೆ ಸಹಕಾರ ನೀಡುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಚಾಲಕರಾದ ಉಮೇಶ್ ಕುಮಾರ್ ವೈ, ಧನರಾಜ್, ಹನೀಫ್ ಖಾನ್ ಕೊಡಾಜೆ, ಅನ್ವರ್ ಸಾದತ್ ಮತ್ತಿತರರು ಉಪಸ್ಥಿತರಿದ್ದರು.