ಚಿನ್ನವನ್ನು ಪಾಲಿಶ್ ಮಾಡಿಕೊಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ಬಂದು ಚಿನ್ನವನ್ನು ಪಡೆದು ರಾಸಾಯನಿಕ ಬಳಸಿ ಕರಗಿಸಿ ವಂಚನೆ ಮಾಡಿ ಪರಾರಿಯಾದ ಪ್ರಕರಣ ಸಂಬಂಧ ವೇಣೂರು ಪೊಲೀಸರು 18 ದಿನದಲ್ಲಿಯೇ ಆರೋಪಿಯನ್ನು ಬಂಧಿಸಿದ್ದಾರೆ.
ಕಾಶಿಪಟ್ಣ ಗ್ರಾಮದ ಮಹಿಳೆಯೊಬ್ಬರ ಮನೆಗೆ ಸೇಲ್ಸ್ ಮ್ಯಾನ್ ರೂಪದಲ್ಲಿ ಫೆ.10ರಂದು ಆಗಮಿಸಿ ಚಿನ್ನದ ಒಡವೆಗಳನ್ನು ತೊಳೆದು ಪಾಲಿಶ್ ಮಾಡಿಕೊಡುವ ನೆಪದಲ್ಲಿ ಕರಗಿಸಿ ವಂಚನೆ ಮಾಡಿ ಪರಾರಿಯಾಗಿದ್ದ ಪ್ರಕರಣ ಸಂಬಂಧ ಆರೋಪಿ ಬಿಹಾರ ರಾಜ್ಯದ ಸುಫೋಲ್ ಜಿಲ್ಲೆಯ ತ್ರಿವೇಣೆಗಂಝ್ ತಾಲೂಕಿನ ರಘನಾಥಪುರ ಗ್ರಾಮದ ನಿವಾಸಿ ಸೂರಜ್ ದೇವ್ ಮಂಡಲ್ ಮಗನಾದ ಚಂದನ್ ಕುಮಾರ್(30) ಎಂಬಾತನನ್ನು ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅಕ್ಷಯ್ ಡವಗಿ ಮತ್ತು ಸಬ್ ಇನ್ಸ್ ಪೆಕ್ಟರ್ ಓಮನ ಎ.ನ್ ನೇತೃತ್ವದ ಸಿಬ್ಬಂದಿಗಳು ನಾನಾ ಆಯಾಮಗಳಲ್ಲಿ ತನಿಖೆ ನಡೆಸಿ ಸಾಕ್ಷಿದಾರಗಳನ್ನು ಕಲೆ ಹಾಕಿ ಮಂಗಳೂರು ನಗರದ ಮೂಡಬಿದಿರೆ ತಾಲೂಕಿನ ಗಂಟಲ್ಕಟ್ಟೆ ಎಂಬಲ್ಲಿ ಫೆ.28 ರಂದು ಮಧ್ಯಾಹ್ನ 2 ಗಂಟೆಗೆ ಬಂಧಿಸಿದ್ದಾರೆ.
ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿಣಿ ಸಿ.ಕ. ಮತ್ತು ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ಮಾರ್ಗದರ್ಶನದಲ್ಲಿ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ ಮತ್ತು ಸಬ್ ಇನ್ಸ್ ಪೆಕ್ಟರ್ ಓಮನ.ಎನ್ ನೇತೃತ್ವದ ಸಿಬ್ಬಂದಿ ಎಎಸ್ ಐ ವೆಂಕಟೇಶ್ ನಾಯ್ಕ್, ಬೆನ್ನಿಚ್ಚನ್ , ಕೃಷ್ಣ, ಕೇಶವತಿ, ಬಸವರಾಜ್, ಮೋಹನ್, ರಾಕೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಆರೋಪಿಯಿಂದ 75ಸಾವಿರ ರೂ.ಮೌಲ್ಯದ ಚಿನ್ನಾಭರಣ ವಶ ಪಡಿಸಿಕೊಳ್ಳಲಾಗಿದೆ. ಕಾಶಿಪಟ್ಣ ಗ್ರಾಮದ ಪಣಿಲಾಜೆ ರುಕ್ಮಿಣಿ ಶೆಟ್ಟಿಗಾರ್ ಎಂಬವರ ಮನೆಗೆ ಫೆ.10 ರಂದು ಅಪರಿಚಿತ ವ್ಯಕ್ತಿಯೊಬ್ಬ ಸೇಲ್ಸ್ ಮ್ಯಾನ್ ರೂಪದಲ್ಲಿ ಬಂದು ಚಿನ್ನದ ಒಡವೆಗಳನ್ನು ತೊಳೆದು ಪಾಲಿಶ್ ಮಾಡಿಕೊಡುವುದಾಗಿ ಹೇಳಿದಾಗ ಕುಕ್ಮಿಣಿಯವರು ಮನೆಯ ಲಾಕರ್ ನಲ್ಲಿದ್ದ ಲಕ್ಷ್ಮೀ ಪೆಂಡೆಂಟ್ ಕೊಟ್ಟಾಗ ಮಗ್ ಒಂದರಲ್ಲಿ ನೀರನ್ನು ತೆಗೆದುಕೊಂಡು ಬಂದು ಬ್ರಷ್ ಮೂಲಕ ತೊಳೆಯುವಂತೆ ನಟಿಸಿ ಪೇಪರ್ ಒಂದರಲ್ಲಿ ಚಿನ್ನವನ್ನು ವಾಪಸ್ ಕಟ್ಟಿ ಫ್ಯಾನ್ ಗಾಳಿಗೆ ಇಟ್ಟು ಒಣಗಿಸುವಂತೆ ಹೇಳಿ ಕೊಟ್ಟು ಹೋಗಿದ್ದ.ಬಳಿಕ ಬಿಚ್ಚಿ ನೋಡಿದಾಗ ಅರಶಿನ ಪುಡಿಯಂತೆ ಕಾಣುವ ಚಿನ್ನದ ಸರದ ಸಣ್ಣ ಸಣ್ಣ ತುಂಡುಗಳು ಹಾಗೂ ತ್ರಾಮ ಬಣ್ಣಕ್ಕೆ ತಿರುಗಿದ ಲಕ್ಷ್ಮೀ ಪೆಂಡೆಂಟ್ ಮಾತ್ರವೇ ಇತ್ತು.ಬಳಿಕ ಪ್ರಕರಣದ ಬಗ್ಗೆ ವೇಣೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.