ಕಲ್ಲಡ್ಕ

ಕಲ್ಲಡ್ಕ ಸಮೀಪ ಕುದ್ರೆಬೆಟ್ಟಿನಲ್ಲಿ ಹೆದ್ದಾರಿ ಸಮೀಪದ ಪ್ರಯಾಣಿಕರ ತಂಗುದಾಣವೇ ಅಪಾಯಕಾರಿ

bus stand

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಡ್ಕ ಫ್ಲೈಓವರ್ ನಿಂದ ಮುಂದೆ ದಾಸಕೋಡಿ ಮಾರ್ಗದಲ್ಲಿ ಹೋಗುವ ಎಡಬದಿಯಲ್ಲಿ ಕುದ್ರೆಬೆಟ್ಟು ಎಂಬಲ್ಲಿ ಸಿಗುವ ಪ್ರಯಾಣಿಕರ ತಂಗುದಾಣ, ಯಾವ ರೀತಿ ಕಟ್ಟಬಾರದು ಎಂಬುದಕ್ಕೆ ಪ್ರಾತ್ಯಕ್ಷಿಕೆ ಮಾಡಿಸಿಕೊಟ್ಟಂತಿದೆ. ಕುಳಿತುಕೊಳ್ಳಲು ಸಾಹಸಪಡಬೇಕು, ಕೆಳಗೆ ನೋಡಿದರೆ ಪಾತಾಳ, ಎಡಬಲಗಳಲ್ಲಿ ಅಪಾಯಕಾರಿ ಜಾಗ..ಇದರ ಮೇಲೆ ಕುಳಿತರೆ ಜೀವಕ್ಕೇ ಆಪತ್ತು. ಅಂಥದ್ದೊಂದು ವಿಚಿತ್ರ ತಂಗುದಾಣವಿಲ್ಲಿ ನಿರ್ಮಾಣಗೊಂಡಿದೆ.

www.flylinkworld.com

ಹಾಗೆ ನೋಡಿದರೆ, ಬಿ.ಸಿ.ರೋಡ್ ನಿಂದ ಅಡ್ಡಹೊಳೆ ರಸ್ತೆ ವಿಸ್ತಾರಗೊಂಡು ನಿರ್ಮಾಣ ಹೊಂದುತ್ತಿರುವ ವೇಳೆ ಬಸ್ ಬೇ ಪಕ್ಕದಲ್ಲಿ ನಿರ್ಮಾಣಗೊಂಡಿರುವ ಕೆಲವು ಪ್ರಯಾಣಿಕರ ತಂಗುದಾಣವೂ ಇಂಥದ್ದೇ ಆಗಿದೆ. ಮಳೆ, ಗಾಳಿ ಜೋರಾಗಿ ಬೀಸುವ ದಕ್ಷಿಣ ಕನ್ನಡ ಜಿಲ್ಲೆಯ ಹವಾಮಾನಕ್ಕೆ ವ್ಯತಿರಿಕ್ತವಾಗಿ ಈ ನಿಲ್ದಾಣದ ಆಕಾರ ಮೂಡಿಬಂದಿದೆ. ಬಿಸಿಲು, ಗಾಳಿ, ಮಳೆ ಯಾವುದು ಇದ್ದರೂ ಈ ನಿಲ್ದಾಣಗಳಿಂದ ಏನೂ ಫಾಯಿದೆ ಇಲ್ಲ.

bus stand

ಕುದ್ರೆಬೆಟ್ಟಿನಲ್ಲಿ ನಿರ್ಮಾಣಗೊಂಡ ಪ್ರಯಾಣಿಕರ ನಿಲ್ದಾಣವಂತೂ ವಿಪರೀತ ಪರಿಸ್ಥಿತಿಯಲ್ಲಿದೆ. ಹೆಪ್ಪುಗಟ್ಟಿದ ಕೊಳಚೆ ನೀರು ಹರಿಯುವ ಚರಂಡಿಗೆ ಸ್ಲ್ಯಾಬ್ ಹಾಕಿ, ಅದರ ಮೇಲೆ ಪ್ರಯಾಣಿಕರು ಕುಳಿತುಕೊಳ್ಳಲು ಕಬ್ಬಿಣದ ಸರಳುಗಳ ಸೀಟ್ ಮಾಡಲಾಗಿದೆ. ಮೇಲಕ್ಕೆ ಸಣ್ಣದಾಗಿ ತಗಡಿನ ಶೀಟ್. ಆರು ಫೀಟ್ ಎತ್ತರದವರೂ ಹಾರಿ ಕುಳಿತುಕೊಳ್ಳಬೇಕು..ಹಾಗಿದೆ ಪರಿಸ್ಥಿತಿ. ಇಲ್ಲಿ ವರ್ಟಿಗೋ ಸಮಸ್ಯೆ ಇದ್ದವರು ಕುಳಿತರೆ, ತಲೆತಿರುಗಿ ಬೀಳುವುದು ಗ್ಯಾರಂಟಿ..ಬಿದ್ದರಂತೂ ಪ್ರಾಣಕ್ಕೇ ಸಂಚಕಾರ.

ಜಾಹೀರಾತು

ಸಣ್ಣ ಮಕ್ಕಳು ಹೇಗೆ ನಿಲ್ಲುವುದು?

ಬಸ್ ಬರುವುದಕ್ಕೂ ಮೊದಲು ಪ್ರಯಾಣಿಕರು ಸುರಕ್ಷಿತವಾಗಿ ನಿಲ್ಲಲೆಂದು ನಿಲ್ದಾಣವನ್ನು ಕಟ್ಟಲಾಗುತ್ತದೆ. ಆದರೆ ಅದೇ ಅಪಾಯಕಾರಿಯಾದರೆ ಹೇಗೆ? ಹತ್ತಿರ ಶಾಲೆ ಇದೆ, ವಸತಿಗೃಹಗಳಿವೆ, ಇಲ್ಲಿನ ಮಕ್ಕಳು ಬಸ್ ಹತ್ತಲೆಂದು ಬಂದರೆ ಏನು ಮಾಡುವುದು ಎಂಬ ಪರಿಜ್ಞಾನವೇ ಇಲ್ಲದಂತೆ ಈ ನಿಲ್ದಾಣ ನಿರ್ಮಿಸಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಂಬಂಧಪಟ್ಟ ಇಲಾಖೆಯವರು ಅಪಾಯವೇನಾದರೂ ಸಂಭವಿಸುವ ಮೊದಲು ಇದಕ್ಕೆ ಪರಿಹಾರವನ್ನು ಒದಗಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ದುರ್ವಾಸನೆಯಲ್ಲೇ ಕುಳಿತುಕೊಳ್ಳಬೇಕು

ಬಿಸಿಲ ಝಳ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಅನಿವಾರ್ಯವಾಗಿ ಕಷ್ಟಪಟ್ಟು ಈ ನಿಲ್ದಾಣದಲ್ಲೇನಾದರೂ ಬಂದು ಕುಳಿತರೆ, ದುರ್ವಾಸನೆ ಉಚಿತವಾಗಿ ಸಿಗುತ್ತದೆ. ಇಲ್ಲಿನ ಚರಂಡಿಯಲ್ಲಿ ಹರಿಯುವ ಕೊಳಚೆ ನೀರಿನ ದುರ್ವಾಸನೆಯಷ್ಟೇ ಅಲ್ಲ, ಇದರ ಅಡಿಯಲ್ಲೇ ಕಸವನ್ನು ಎಸೆಯಲಾಗುತ್ತಿದ್ದು, ಅದೂ ಮತ್ತಷ್ಟು ಸಮಸ್ಯೆ ಉಂಟುಮಾಡಿದೆ.

ಜನರಿಗೆ ಉಪಯೋಗವಾಗುವಂತೆ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕಿತ್ತು. ಹಾಗೆ ದಾಸಕೋಡಿಯಲ್ಲೂ ಜನರು ನಿಲ್ಲುವ ಜಾಗದಲ್ಲಿ ಬಸ್ ತಂಗುದಾಣವನ್ನು ಸಮರ್ಪಕವಾಗಿ ಮಾಡಿಲ್ಲ ಎನ್ನುತ್ತಾರೆ ತಾಪಂ ಮಾಜಿ ಸದಸ್ಯ ಮೋಹನ್ ಪಿ.ಎಸ್.

ಇಲ್ಲಿ ಶಾಲಾ ಮಕ್ಕಳು ಬಂದು ಕುಳಿತುಕೊಳ್ಳುವುದು ಅಪಾಯಕಾರಿ. ಅಷ್ಟೇ ಅಲ್ಲ, ದೊಡ್ಡವರಿಗೂ ಕಷ್ಟ. ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ನಿಲ್ದಾಣ ರೂಪಿಸಬೇಕು ಎನ್ನುತ್ತಾರೆ ಬಾಳ್ತಿಲ ಗ್ರಾಪಂ ಮಾಜಿ ಅಧ್ಯಕ್ಷ ಸುಂದರ ಪೂಜಾರಿ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

View Comments

  • ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೆಲಸ ಅಂತಿಮ ಹಂತದಲ್ಲಿರುವಾಗ ಇಂತಹ ಹಲವಾರು ಸಮಸ್ಯೆಗಳನ್ನು ಪರಿಶೀಲಿಸಿ ಸರಿಪಡಿಸುವ ಅಗತ್ಯವಿದೆ. ಒಳ್ಳೆಯ ವರದಿ.

Recent Posts