ಯಕ್ಷಗಾನ

ಮಂಗಳೂರು ವಿವಿ:  ಯಕ್ಷಮಂಗಳ ಪ್ರಶಸ್ತಿ ಪ್ರಕಟ: ಕಪ್ಪೆಕೆರೆ,‌ ಮಾಂಬಾಡಿ, ಜಬ್ಬಾರ್ ಸಮೊಗೆ ಯಕ್ಷಮಂಗಳ ಪ್ರಶಸ್ತಿ, ‘ಬಲಿಪ ಮಾರ್ಗ’ ಹಾಗೂ ‘ಅಗರಿ ಮಾರ್ಗ’ ಗ್ರಂಥಕ್ಕೆ ಕೃತಿ ಪ್ರಶಸ್ತಿ

ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ‌ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2025-26ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಗೆ ಯಕ್ಷಗಾನ ರಂಗದ ಹಿರಿಯ ಕಲಾವಿದ ಕಪ್ಪೆಕೆರೆ ಸುಬ್ರಾಯ ಭಾಗವತ, ಯಕ್ಷಗಾನ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೊ ಅವರು ಆಯ್ಕೆಯಾಗಿದ್ದಾರೆ. ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಕೃಷ್ಣ ಪ್ರಕಾಶ್ ಉಳಿತ್ತಾಯ  ಅವರ ‘ಬಲಿಪ ಮಾರ್ಗ ಹಾಗೂ ಅಗರಿಮಾರ್ಗ’ ಕೃತಿಯು ಆಯ್ಕೆಯಾಗಿದೆ.

www.flylinkworld.com

    ಯಕ್ಷಮಂಗಳ ಪ್ರಶಸ್ತಿಯು 25,000 ರೂ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನಗಳನ್ನೊಳಗೊಂಡಿದೆ. ಯಕ್ಷಮಂಗಳ ಕೃತಿ ಪ್ರಶಸ್ತಿಯು 10,000 ರೂ ನಗದು,‌ ಪ್ರಶಸ್ತಿ , ಸ್ಮರಣಿಕೆಗಳನ್ನೊಳಗೊಂಡಿದೆ.

ಕಲಾವಿದರ ಪರಿಚಯ:

ಜಾಹೀರಾತು

ಕಪ್ಪೆಕೆರೆ ಸುಬ್ರಾಯ ಭಾಗವತ:

ಕಪ್ಪೆಕೆರೆ ಸುಬ್ರಾಯ ಭಾಗವತರು ಬಡಗುತಿಟ್ಟು ಯಕ್ಷಗಾನ ರಂಗದ ಹಿರಿಯ ತಲೆಮಾರಿನ ಅಗ್ರಮಾನ್ಯ ಕಲಾವಿದರಾಗಿದ್ದಾರೆ.  ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಹಡಿನಬಾಳ ಎಂಬಲ್ಲಿ 1947 ರಲ್ಲಿ ಈಶ್ವರ ಹೆಗಡೆ ಗೋಪಿ ಹೆಗಡೆ ದಂಪತಿಯ ಸುಪುತ್ರರಾಗಿ ಜನಿಸಿದ ಅವರು ಹದಿನಾರರ ಹರೆಯದಲ್ಲೇ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದರು. ಸರ್ವಾಂಗೀಣ ಕಲಾವಿದರಾಗಿ, ನಾಡಿನ ಓರ್ವ ಶ್ರೇಷ್ಠ ಭಾಗವತರಾಗಿ ಗುರುತಿಸಿದ್ದಾರೆ. ಗುಂಡುಬಾಳ, ಇಡಗುಂಜಿ, ಅಮೃತೇಶ್ವರಿ, ಕಮಲಶಿಲೆ, ಸಾಲಿಗ್ರಾಮ, ಬಚ್ಚಗಾರು, ಪಂಚಲಿಂಗ ಮೇಳಗಳಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಸೇವೆಗೈದ ಹಿರಿಯ ಕಲಾವಿದರಾಗಿದ್ದಾರೆ.

ಮಾಂಬಾಡಿ ಸುಬ್ರಹ್ಮಣ್ಯ ಭಟ್:

  ಯಕ್ಷಗಾನ ಕ್ಷೇತ್ರದಲ್ಲಿ ಹಿಮ್ಮೇಳ ವಾದಕರಾಗಿ ಮೇಳದ ತಿರುಗಾಟದ ಜೊತೆಗೆ ಯಕ್ಷಗಾನ ಗುರುಗಳಾಗಿ ಗುರುಪರಂಪರೆಯನ್ನು ಮೆರೆಸಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರು ಯಕ್ಷಗಾನ ರಂಗದ ಹಿರಿಯ ಸಾಧಕರಾಗಿದ್ದಾರೆ.   ಮಾಂಬಾಡಿ ನಾರಾಯಣ ಭಾಗವತರ ಸುಪುತ್ರರಾಗಿ ತಂದೆಯ ಮಾರ್ಗದರ್ಶನದಲ್ಲಿ ಮುಂದುವರಿದು ಕಟೀಲು, ಕರ್ನಾಟಕ, ಕದ್ರಿ ಮೊದಲಾದ ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ.ಕಾಸರಗೋಡು , ದ.ಕ.ಜಿಲ್ಲೆಯ ನಾನಾ ಕಡೆ ಯಕ್ಷಗಾನದ ಹಿಮ್ಮೇಳ ತರಗತಿಗಳನ್ನು ನಡೆಸಿ ನೂರಾರು ಶಿಷ್ಯಂದಿರಿಗೆ ಹಿಮ್ಮೇಳ ಶಿಕ್ಷಣ ನೀಡಿದ್ದಾರೆ. ಇವರಲ್ಲಿ ಕಲಿತ ಅನೇಕ ಶಿಷ್ಯರು ವೃತ್ತಿಪರ ಕಲಾವಿದರಾಗಿ, ಹವ್ಯಾಸಿ ಕಲಾವಿದರಾಗಿ ಸೇವೆಗೈಯ್ಯುತ್ತಿದ್ದಾರೆ.

ಜಬ್ಬಾರ್ ಸಮೊ:

ಯಕ್ಷಗಾನ ರಂಗದ ಹಿರಿಯ ತಾಳಮದ್ದಳೆಯ ಅರ್ಥಧಾರಿಯಾಗಿರುವ ಜಬ್ಬಾರ್ ಸಮೊ ಅವರು ಸಂಪಾಜೆಯ ಮೊಯ್ದಿನ್ ಕುಂಞಿ ಹಾಗೂ ಬಿಪಾತುಮ್ಮ ದಂಪತಿಯ ಪುತ್ರರಾಗಿ 1963 ರಲ್ಲಿ ಜನಿಸಿದರು. ಎಳವೆಯಲ್ಲಿಯೇ ಯಕ್ಷಗಾನದ‌ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಅವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದರು. ವಳಕುಂಜ ಕುಮಾರ ಸುಬ್ರಹ್ಮಣ್ಯ ಭಟ್ ಅವರ ಮೊದಲ ಗುರುವಾಗಿದ್ದು,

ಆರಂಭದಲ್ಲಿ ದ್ರೋಣ, ಜಾಬಾಲಿ, ಈಶ್ವರ, ಸಂಜಯ, ಅಕ್ರೂರ, ಬ್ರಹ್ಮ, ಕಂಸ ಮೊದಲಾದ‌ ಪಾತ್ರಗಳನ್ನು ಮಾಡಿದ್ದರು.   ೧೯೯೦ರ ಬಳಿಕ  ತಾಳಮದ್ದಳೆಯಲ್ಲಿ ಭಾಗವಹಿಸಲು ಆರಂಭಿಸಿದ  ಅವರು ವಾಲಿ, ಮಾಗಧ, ಕರ್ಣ,  ಅರ್ಜುನ, ಶಲ್ಯ,  ಸುಗ್ರೀವ, ಭೀಷ್ಮ, ಕೌರವ, ಶುಂಭ, ರಕ್ತಬೀಜ, ಧರ್ಮಾಂಗದ, ಭರತ, ಶತ್ರುಘ್ನ, ಹನುಮಂತ, ವೀರಮಣಿ, ಈಶ್ವರ, ಬಲರಾಮ, ರುಕ್ಮ, ಭೀಷ್ಮ, ಜಾಂಬವಂತ, ಶತ್ರುಪ್ರಸೂದನ, ಬಲಿ, ಶುಕ್ರಾಚಾರ್ಯ ಮುಂತಾದ ಪಾತ್ರಗಳು ಅವರಿಗೆ ಖ್ಯಾತಿಯನ್ನು ತಂದಿದೆ.

ಅವರ ಪಾಂಡಿತ್ಯಪೂರ್ಣ ಸಂಭಾಷಣೆ, ಆಕರ್ಷಕ ಪದಪ್ರಯೋಗ ಮತ್ತು ಭಾವಪೂರ್ಣ ನಟನೆಯು ಅವರಿಗೆ ಎಲ್ಲಾ ಸಮುದಾಯಗಳಿಂದ ಅಪಾರ ಅಭಿಮಾನಿಗಳನ್ನು ಗಳಿಸಿಕೊಟ್ಟಿದೆ.

‘ಬಲಿಪ ಮಾರ್ಗ’,‌”ಅಗರಿ ಮಾರ್ಗ’ಕ್ಕೆ ಯಕ್ಷಮಂಗಳ ಕೃತಿ ಪ್ರಶಸ್ತಿ

  ಕೃಷ್ಣ ಪ್ರಕಾಶ ಉಳಿತ್ತಾಯರು ಖ್ಯಾತ ಹಿಮ್ಮೇಳ ಕಲಾವಿದರಾಗಿದ್ದು ‘ಬಲಿಪ ಮಾರ್ಗ’ ಹಾಗೂ ‘ಅಗರಿ ಮಾರ್ಗ’ ಕೃತಿಗಳ ಲೇಖಕರಾಗಿದ್ದಾರೆ. ಬಲಿಪ ಮಾರ್ಗ ಕೃತಿಯು ಯಕ್ಷಗಾನ ರಂಗದ ಹಿರಿಯ ಕಲಾವಿದರಾದ ಹಿರಿಯ ಅಜ್ಜ ಬಲಿಪ ನಾರಾಯಣ ಭಾಗವತರು ಹಾಗೂ ಕಿರಿಯ ಬಲಿಪ ನಾರಾಯಣ ಭಾಗವತರ ಬದುಕು, ಗಾನಮಾರ್ಗ ಇವುಗಳನ್ನು ಸುಂದರವಾಗಿ, ಅರ್ಥಪೂರ್ವಾಗಿ ನಿರೂಪಿಸುವ ಕೃತಿಯಾಗಿದೆ.

ಅಗರಿ ಮಾರ್ಗ ಕೃತಿಯು ಅಗರಿ ಮಾರ್ಗ’ ಕೃತಿಯು ತೆಂಕುತಿಟ್ಟಿನ ಯಕ್ಷಗಾನ ಪ್ರದರ್ಶನ ಕಲೆಯಲ್ಲಿ ಯಕ್ಷಬ್ರಹ್ಮ ಎಂದು ಪ್ರಸಿದ್ದರಾದ ಅಗರಿ ಶ್ರೀನಿವಾಸ ಭಾಗವತರ ಬದುಕು, ಹಾಡುವ ಕ್ರಮ, ರಚನೆ, ಸಾಹಿತ್ಯ ವೈಶಿಷ್ಟ್ಯತೆಯನ್ನು ತೆರೆದಿಡುವ ಮಹತ್ವದ ಕೃತಿಯಾಗಿದೆ.

ಜಾನಪದ ವಿದ್ವಾಂಸರಾದ ಡಾ.ಕೆ.ಚಿನ್ನಪ್ಪ ಗೌಡ ಅವರ ನೇತೃತ್ವದಲ್ಲಿ ಪ್ರೊ.ಪಾದೆಕಲ್ಲು ವಿಷ್ಣುಭಟ್, ಯಕ್ಷಗಾನ ಸಂಘಟಕ ಮುರಲೀ ಕಡೇಕಾರ್ ಹಾಗೂ ಕೇಂದ್ರದ ನಿರ್ದೆಶಕರಾದ‌ ಡಾ.ಧನಂಜಯ ಕುಂಬ್ಳೆ ಅವರನ್ನು ಒಳಗೊಂಡಿರುವ ಆಯ್ಕೆ ಸಮಿತಿಯ ಸಭೆಯಲ್ಲಿ ಈ ಹೆಸರನ್ನು ಸರ್ವಾನುಮತದಿಂದ ಶಿಫಾರಸ್ಸು ಮಾಡಲಾಯಿತು. 

ಮಂಗಳೂರು ವಿವಿ ಕುಲಪತಿ ಪ್ರೊ.ಪಿ‌ಎಲ್.ಧರ್ಮ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ ನಲ್ಲಿ ನಡೆಯುವ ಸಮಾರಂಭದಲ್ಲಿ ಯಕ್ಷಮಂಗಳ ಪ್ರಶಸ್ತಿ  ಮತ್ತು ಕೃತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಂಗಳೂರು ವಿವಿ ಕುಲಸಚಿವರಾದ ಪ್ರೊ.ಗಣೇಶ್ ಸಂಜೀವ್ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೆಶಕರಾದ ಡಾ.ಧನಂಜಯ ಕುಂಬ್ಳೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 ಕೇಂದ್ರಕ್ಕೆ ದಯಾನಂದ ಪೈಗಳಿಂದ ಒಂದು ಕೋಟಿ ಅನುದಾನ

ಮಂಗಳೂರು‌ ವಿಶ್ವವಿದ್ಯಾನಿಲಯದ  ಡಾ.ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಸಂಬಂಧಿ ಅಧ್ಯಯನ ಸಂಶೋಧನೆಯನ್ನು ವಿಸ್ತರಿಸುವ ಉದ್ದೇಶಕ್ಕಾಗಿ ಬೆಂಗಳೂರಿನ ಡಾ.ದಯಾನಂದ ಪೈಗಳು ಒಂದು ಕೋಟಿಯ ವಿಶೇಷ ಅನುದಾನ ನೀಡುವುದಾಗಿ ತಿಳಿಸಿದ್ದಾರೆ ಎಂದು ವಿವಿ ಕುಲಪತಿ ಪ್ರೊ.ಪಿ.ಎಲ್ ಧರ್ಮ ತಿಳಿಸಿದ್ದಾರೆ. ಯಕ್ಷಮಂಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಯಾನಂದ ಪೈಗಳು ಭಾಗವಹಿಸಲಿದ್ದು ಆ ದಿನ ಈ ಮೊತ್ತವನ್ನು ಹಸ್ತಾಂತರಿಸಲಿದ್ದಾರೆ. ವಿವಿಯ ಶೈಕ್ಷಣಿಕ ಪ್ರಗತಿಗೆ ಕೈ ಜೋಡಿಸಿದ ಪೈಗಳನ್ನು ಕುಲಪತಿಗಳು ಅಭಿನಂದಿಸಿದ್ದಾರೆ

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಾ.1ರಂದು ಬಂಟ್ವಾಳದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ದಿವ್ಯಾಂಗ ಸಮ್ಮೇಳನ

ಬಂಟ್ವಾಳ: ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮಂಗಳೂರು ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ದಿವ್ಯಾಂಗ ಸಮ್ಮೇಳನ ಬಿ.ಸಿ.ರೋಡಿನ ROTARY…

1 day ago