ಬಂಟ್ವಾಳ: ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮಂಗಳೂರು ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ದಿವ್ಯಾಂಗ ಸಮ್ಮೇಳನ ಬಿ.ಸಿ.ರೋಡಿನ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಬೆಳಗ್ಗೆ 10ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಮಂಗಳೂರು ಪ್ರಸಾದ್ ನೇತ್ರಾಲಯದ ಎಂ.ಡಿ ಡಾ. ಕೃಷ್ಣಪ್ರಸಾದ ಕೂಡ್ಲು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಸಕ್ಷಮ ದ.ಕ.ಜಿಲ್ಲಾ ಘಟಕ ಅಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬಿಎಎಸ್ ಎಫ್ ಇಂಡಿಯಾ ಲಿಮಿಟೆಡ್ ಮಾನವ ಸಂಪನ್ಮೂಲ ಅಧಿಕಾರಿ ಸಂತೋಷ್ ಪೈ, ತಾಲೂಕು ಹಿರಿಯ ನಾಗರಿಕರ ಸಬಲೀಕರಣ ಹಾಗೂ ವಿಶೇಷ ಚೇತನರ ಕಲ್ಯಾಣ ಇಲಾಖೆ ಎಂ.ಆರ್.ಡಬ್ಲ್ಯು ಗಿರೀಶ್ ಕುಮಾರ್ ಎ, ಮಂಗಳೂರು ಎನೆಪೋಯ ಆಯುರ್ವೇದ ಮಹಾವಿದ್ಯಾಲಯ ಉಪನ್ಯಾಸಕ ಡಾ. ಬಾಲಕೃಷ್ಣ ಕುಮಾರ್ ಭಾಗವಹಿಸುವರು. ಈ ಸಂದರ್ಭ ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಕೇಶವ ಕುಮಾರ್, ವಿಕಾಸಂ ಸೇವಾ ಫೌಂಡೇಶನ್ ಸಹಸಂಸ್ಥಾಪಕ ಗೋಪಾಲ್ ಗೋವಿಂದತೋಟ ಹಾಗೂ ಧರ್ಮಪ್ರಸಾದ್ ರೈ, ಸಕ್ಷಮ ದ.ಕ.ಜಿಲ್ಲಾ ಘಟಕ ಕಾರ್ಯದರ್ಶಿ ಹರೀಶ್ ಪ್ರಭು ಉಪಸ್ಥಿತರಿರುವರು. ಈ ವೇಳೆ ಲೋಲಾಕ್ಷ ಜಾದು ಅವರಿಂದ ಜಾದೂ ಪ್ರದರ್ಶನ, ದಿವ್ಯಾಂಗರ ಕುರಿತು ಆರಂಭಿಕ ಗುರುತಿಸುವಿಕೆ ಮತ್ತು ಆರಂಭಿಕ ಹಸ್ತಕ್ಷೇಪ ಕುರಿತು ವಿಕಾಸಂ ಸಹಸಂಸ್ಥಾಪಕ ಗಣೇಶ್ ಭಟ್ ವಾರಣಾಸಿ, ಪ್ರಸ್ತುತ ವ್ಯವಸ್ಥೆಯಲ್ಲಿ ದಿವ್ಯಾಂಗರು ಎದುರಿಸುವ ಸವಾಲುಗಳ ಕುರಿತು ಹಿರಿಯ ಪತ್ರಕರ್ತ ಹರೀಶ್ ಮಾಂಬಾಡಿ, ನಿರಾಮಯ, ಕಾನೂನು ಪೋಷಕತ್ವ, ಯುಡಿಐಡಿ ಕಾರ್ಡ್ ಕುರಿತು ಚೇತನ ಬಾಲವಿಕಾಸ ಕೇಂದ್ರದ ಗಣರಾಜ ಭಟ್ ವಿಚಾರ ಮಂಡಿಸುವರು. ವಿಶೇಷಚೇತನ ವಿದ್ಯಾರ್ಥಿ ಕೌಶಿಕ್ ಆಚಾರ್ಯ ಅವರಿಂದ ಪ್ರತ್ಯಕ್ಷ ಚಿತ್ರಕಲಾಪ್ರದರ್ಶನ ಇರಲಿದೆ. ವಿಶೇಷಚೇತನ ಸಾಧಕರಿಗೆ ಸನ್ಮಾನ ಮತ್ತು ಅರ್ಹ ದಿವ್ಯಾಂಗರಿಗೆ ದಿವ್ಯಾಂಗ ಉಪಯೋಗಿ ಉಪಕರಣಗಳ ವಿತರಣೆ ನಡೆಯಲಿದೆ ಎಂದು ಸಕ್ಷಮ ಪ್ರಕಟಣೆ ತಿಳಿಸಿದೆ.