ಹಳೆ ತಲೆಮಾರಿನ ಅರ್ಥಧಾರಿ, ಶಿಕ್ಷಕ ಮತ್ತು ಶಂಭೂರು ಗ್ರಾಮದ ಪಟೇಲ ದಿ.ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಅವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿ.ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ನೀಡಲಾಗುವ ಬೊಂಡಾಲ ಪ್ರಶಸ್ತಿಯನ್ನು ಕಟೀಲು ಮೇಳದ ಹಿರಿಯ ವೇಷಧಾರಿ ಲಕ್ಷ್ಮಣ ಶೆಟ್ಟಿ ತಾರೆಮಾರ್ ಅವರಿಗೆ ಶುಕ್ರವಾರ ರಾತ್ರಿ ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ ನಡೆದ ಯಕ್ಷಗಾನ ಬಯಲಾಟ ವೇದಿಕೆಯಲ್ಲಿ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಿ ಗೌರವಿಸಲಾಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ವೇ.ಮೂ.ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ, ಕಟೀಲು ಏಳನೇ ಮೇಳ ಆರಂಭವಾಗಿರುವುದು ಜನರಲ್ಲಿ ಯಕ್ಷಗಾನದ ಮೇಲೆ ಪ್ರೀತಿ, ಕ್ಷೇತ್ರದ ಮೇಲಿನ ನಂಬಿಕೆಗೆ ಸಾಕ್ಷಿಯಾಗಿದೆ. ಧಾರ್ಮಿಕ ಪ್ರಜ್ಞೆ ಯಕ್ಷಗಾನದಿಂದ ಸಿಗುತ್ತದೆ, ಜನರೆಲ್ಲ ಸತ್ಯಮಾರ್ಗದಲ್ಲಿ ನಡೆಯಲು ಯಕ್ಷಗಾನ ಪ್ರೇರಣೆಯಾಗಿದೆ ಎಂದರು.
ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ವೇ.ಮೂ.ಅನಂತಪದ್ಮನಾಭ ಆಸ್ರಣ್ಣ ಮಾತನಾಡಿ ಹಿರಿಯರು ಹಾಕಿದ ಮಾರ್ಗವನ್ನು ಬೊಂಡಾಲ ಬಂಧುಗಳು ಮುಂದುವರೆಸುತ್ತಿದ್ದಾರೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಶುಭ ಹಾರೈಸಿ ಯಕ್ಷಗಾನ ಕ್ಷೇತ್ರಕ್ಕೆ ಬೊಂಡಾಲ ಕುಟುಂಬದವರು ನೀಡುವ ಕೊಡುಗೆಯನ್ನು ಶ್ಲಾಘಿಸಿದರು.
ಬಂಟ್ವಾಳ ಬಂಟರ ಸಂಘದ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ಧಾರ್ಮಿಕ ಪರಿಷತ್ ನಾಮನಿರ್ದೇಶಿತ ಸದಸ್ಯ ಬಡಾಜೆಗುತ್ತು ರವಿಶಂಕರ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮದ ಉದ್ದೇಶಗಳನ್ನು ತಿಳಿಸಿದರು. ಸುನಾದ್ ರಾಜ್ ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ಆಯ್ಕೆ ಸಮಿತಿ ಸಂಚಾಲಕ ಕರ್ನಾಟಕ ಜಾನಪದ,ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಟ್ರಸ್ಟ್ ಅದ್ಯಕ್ಷ ಬೊಂಡಾಲ ಸೀತಾರಾಮ ಶೆಟ್ಟಿ ವಂದಿಸಿದರು. ಫೆಬ್ರವರಿ 19ರಂದು ರಾತ್ರಿ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಮತ್ತು ಹತ್ತು ಸಮಸ್ತರ ವತಿಯಿಂದ ‘ಕಲಿ ಕೀಚಕ’ ಹಾಗೂ 20ರಂದು ಮರುದಿನ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ಶ್ರೀದೇವಿ ಮಹಾತ್ಮೆ’ ಸೇವಾ ಬಯಲಾಟಗಳು ನಡೆಯಿತು.